ಮಂಗಳೂರು,ಆ.1– ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಮೂರು ಕೊಲೆಯಲ್ಲಿ ಭಾಗಿಯಾದ ಆರೋಪಿಗಳು ಯಾವುದೇ ಸಂಘಟನೆಯವರಾಗಿರಲಿ, ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಜಿಪಿ ಪ್ರವೀಣ್ ಸೂದ್ ಸ್ಪಷ್ಟಪಡಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೊಲೆಗಳ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ಕೃತ್ಯಗಳಲ್ಲಿ ಯಾವುದೇ ವ್ಯಕ್ತಿ, ಸಂಘಟನೆ, ಸಿದ್ದಾಂತದವರು ಈ ಕೃತ್ಯಗಳ ಹಿಂದಿದ್ದರೂ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು
ಯಾವುದೇ ಕೊಲೆ ನಡೆದರೂ ಸತ್ತವರು ಹಿಂದೂಗಳೊ, ಮುಸ್ಲಿಮರೋ ಅಥವಾ ಕ್ರೈಸ್ತರೊ ಎಂದು ನೋಡುವುದಿಲ್ಲ. ಅದನ್ನು ನಡೆಸಿದವರ ಧರ್ಮವನ್ನೂ ನೋಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
‘ಮೂರು ಕೊಲೆ ಪ್ರಕರಣಗಳ ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡುತ್ತೇವೆ ಅದರಲ್ಲಿ ಯಾರು ಯಾವ ಸಂಘಟನೆಯ ಮುಖಂಡ ಭಾಗಿಯಾದರೂ ಅವರನ್ನು ಬಂಧಿಸಿ ಕ್ರಮ ತೆಗೆದುಕೊಳ್ಳುತ್ತೇವೆ. ಆರೋಪಿಗಳ ಶೀಘ್ರ ಬಂಧನವಾಗುವ ನಿರೀಕ್ಷೆ ಇದೆ.’ ಎಂದರು.
ಅಪರಾಧದ ಕುರಿತು ಮಾಹಿತಿ ಇದ್ದವರು ಪೊಲೀಸರ ಜೊತೆ ಹಂಚಿಕೊಳ್ಳಬಹುದು. ಮಾಹಿತಿ ಗೊತ್ತಿದ್ದೂ ಪೊಲೀಸರ ಜೊತೆ ಹಂಚಿಕೊಳ್ಳದಿದ್ದರೇ ಅವರ ಕೈವಾಡವೂ ಇದೆ ಎಂದು ಭಾವಿಸಬೇಕಾಗುತ್ತದೆ’ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3 ಕೊಲೆ ಪ್ರಕರಣ ಆಗಿದೆ. ಮಸೂದ್ ಕೊಲೆ ಪ್ರಕರಣದಲ್ಲಿ 8 ಮಂದಿಯನ್ನು ಬಂಧಿಸಲಾಗಿದೆ. ಪ್ರವೀಣ್ ಕೊಲೆ ಪ್ರಕರಣದಲ್ಲಿ ಇಬ್ಬರ ಬಂಧನವಾಗಿದೆ. ಫಾಝಿಲ್ ಪ್ರಕರಣದಲ್ಲಿ ಒಬ್ಬರನ್ನು ಬಂಧಿಸಲಾಗಿದ್ದು, ಅವರು ನೀಡಿದ ಸುಳಿವು ಇತರ ಅಪರಾಧಿಗಳ ಪತ್ತೆಗೆ ನೆರವಾಗಲಿದೆ’ ಎಂದು ತಿಳಿಸಿದರು.
‘ನಗರ ಪೊಲೀಸ್ ಕಮೀಷನರ್ ಐಜಿಪಿ , ಎಸ್‌ಪಿ ಅವರ ಜೊತೆಗೆ ಚರ್ಚಿಸಿ ಮುಂದೆ ಇಂತಹ ಘಟನೆ ಆಗದಂತೆ ತಡೆಯಲು ಕ್ರಮ ಕೈಗೊಳ್ಳುತ್ತೇವೆ. ಜಿಲ್ಲಾಧಿಕಾರಿ ಅವರ ಜೊತೆಗೆ ಚರ್ಚಿಸುತ್ತೇವೆ. ಮುಖ್ಯಮಂತ್ರಿಗಳು ಈ ಬಗ್ಗೆ ನಿರ್ದೇಶನ ನೀಡಿದ್ದಾರೆ. ಗಡಿ ಪ್ರದೇಶದಲ್ಲಿ ತಪಾಸಣೆ ಹೆಚ್ಚಿಲಾಗಿದೆ. ದ.ಕ ಜಿಲ್ಲೆಯಲ್ಲಿ ಪೊಲೀಸರ ಬಲ ಹೆಚ್ಚಿಸಲು ಕೋರಿದ್ದೇನೆ ಎಂದರು.