ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೂ ವೇದಿಕೆ ಸಜ್ಜುಗೊಂಡಿಲ್ಲ.ಆದರೆ ಈಗಾಗಲೇ ಚುನಾವಣೆ ಜ್ವರ ತೀವ್ರಗೊಂಡಿದೆ.ಈ ಬಾರಿ ರಾಜ್ಯದ ಅಧಿಕಾರ ಗದ್ದುಗೆ ಯಾರ ಪಾಲಾಗಲಿದೆ? ಮುಖ್ಯಮಂತ್ರಿ ಯಾರಾಗಲಿದ್ದಾರೆ? ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳು ಲಭ್ಯವಾಗಲಿವೆ? ಯಾವ ಪ್ರದೇಶದಲ್ಲಿ ಯಾರಿಗೆ ಹೆಚ್ಚು ಒಲವು? ಎಂಬ ಬಗ್ಗೆ ಕೇವಲ ರಾಜಕೀಯ ಪಕ್ಷಗಳು ಮಾತ್ರವಲ್ಲ, ರಾಜಕೀಯದ ಬಗ್ಗೆ ಆಸಕ್ತಿಯಿರುವ ಜನ ಸಾಮಾನ್ಯರ ಚರ್ಚೆಯ ಪ್ರಮುಖ ವಿಷಯವಾಗಿದೆ.
ರಾಜಕೀಯ ಪಕ್ಷಗಳು, ಚುನಾವಣೆಯಲ್ಲಿ ತಮ್ಮ ಪಕ್ಷದ ಸಾಧ್ಯತೆಗಳೇನು? ಯಾವ ಪ್ರದೇಶ ತಮಗೆ ಅನುಕೂಲಕರ? ಎಲ್ಲಿ ಹಿನ್ನಡೆಯಿದೆ? ಇದನ್ನು ಯಾವ ರೀತಿ ಸರಿಪಡಿಸಿಕೊಳ್ಳಬೇಕು ಎಂಬ ಬಗ್ಗೆ ಖಾಸಗಿಯಾಗಿ ಸಮೀಕ್ಷೆ ಮಾಡಿಸಿಕೊಂಡು ಅದರನ್ವಯ ಚುನಾವಣೆಗೆ ಸಿದ್ಧತೆಗಳನ್ನು ನಡೆಸುತ್ತಿವೆ.
ಈ ನಡುವೆ ಹಲವು ಚುನಾವಣಾ ತಜ್ಞ ಸಂಸ್ಥೆಗಳು ರಾಜ್ಯದಲ್ಲಿ ಸಮೀಕ್ಷೆ ಮಾಡಿ ತಮ್ಮದೇ ಆದ ಫಲಿತಾಂಶ ನೀಡುತ್ತಿವೆ. ಮುಂಬರುವ ಲೋಕಸಭಾ ಚುನಾವಣೆಗೆ ಒಂದು ರೀತಿಯಲ್ಲಿ ಸೆಮಿಫೈನಲ್ ರೀತಿಯಲ್ಲಿರುವ ಕರ್ನಾಟಕದ ವಿಧಾನಸಭೆ ಚುನಾವಣೆ ಎಲ್ಲಾ ಪಕ್ಷಗಳಿಗೂ ತೀವ್ರ ಪ್ರತಿಷ್ಠೆಯ ವಿಷಯವಾಗಿದೆ.
ಮೂರನೆ ಬಾರಿ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿರುವ ಬಿಜೆಪಿಗೆ ಇದೊಂದು ಪ್ರಯೋಗಶಾಲೆಯಾಗಿದೆ.ಪ್ರಧಾನಿ ಮೋದಿಯವರ ಜನಪ್ರಿಯತೆ, ಅಭಿವೃದ್ಧಿ ಮತ್ತು ಭಾವನಾತ್ಮಕ ವಿಷಯ ಮೂರೂ ಅಂಶಗಳನ್ನು ಪ್ರಯೋಗ ಮಾಡಲು ಸಿದ್ಧತೆ ನಡೆಸಿರುವ ಕಮಲ ಪಡೆ ತನಗೆ ಯಾವ ಅಂಶ ಅನುಕೂಲಕರ ಎಂಬುದನ್ನು ಈ ಚುನಾವಣೆ ಮೂಲಕ ಖಚಿತ ಪಡಿಸಿಕೊಂಡು ಅದರ ಆಧಾರದಲ್ಲಿ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸಲಿದೆ.
ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಗುಜರಾತ್ ಮತ್ತು ಉತ್ತರ ಪ್ರದೇಶ ಹೊರತುಪಡಿಸಿ ಬೇರೆ ಯಾವುದೇ ರಾಜ್ಯದಲ್ಲಿ ಬಿಜೆಪಿ ತನ್ನದೇ ಸ್ವಂತ ಬಲದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿಲ್ಲ. ಹೀಗಾಗಿ ಕರ್ನಾಟಕದಲ್ಲಿ ಚುನಾವಣೆ ಗೆಲ್ಲಲೇಬೇಕು ಎಂಬ ಹಟ ತೊಟ್ಟಿದೆ. ಅದೇ ರೀತಿಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ ಗೆ ಕರ್ನಾಟಕದ ಚುನಾವಣೆ ಒಂದು ಅವಕಾಶ. ಪಕ್ಷದ ಪುನಃಶ್ಚೇತನಕ್ಕೆ ರಾಹುಲ್ ಗಾಂಧಿ ನಡೆಸಿದ ಭಾರತ್ ಜೋಡೋ ಯಾತ್ರೆಯ ಫಲಿತಾಂಶ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಲೆಯ ಲಾಭ ಹೇಗೆ ಪಡೆಯಬೇಕು ಎಂಬ ಲೆಕ್ಕಾಚಾರದಲ್ಲಿದೆ.
ಇನ್ನು ಜೆಡಿಎಸ್, ನೆರೆಯ ತೆಲಂಗಾಣದ ಬಿಆರ್‌ಎಸ್ ನೆರವಿನಲ್ಲಿ ತೃತೀಯ ರಂಗದ ಕನಸು ಕಾಣುತ್ತಿದೆ.
ಈ ಲೆಕ್ಕಾಚಾರದ ನಡುವೆ ಹೈದರಾಬಾದ್ ಮೂಲದ ರಾಜಕೀಯ ಪರಿಣತ ಸಂಸ್ಥೆ ನಡೆಸಿದ ಕ್ಷೇತ್ರಾವಾರು ಚುನಾವಣಾ ಪೂರ್ವ ಸಮೀಕ್ಷೆಯ ವಿವರ ಬಿಡುಗಡೆಯಾಗಿದೆ.
ಇದರನ್ವಯ ಕಾಂಗ್ರೆಸ್ ಆಡಳಿತ ವಿರೋಧಿ ಅಲೆಯನ್ನು ಯಶಸ್ವಿಯಾಗಿ ಬಳಸಿಕೊಂಡು ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಒಟ್ಟಾರೆ ಕಾಂಗ್ರೆಸ್ ಗೆ ಶೇಕಡಾ 40ರಷ್ಟು ಮತ ಲಭ್ಯವಾಗಲಿದ್ದು,ಬಿಜೆಪಿ ಶೇಕಡಾ 34 ರಷ್ಟು ಮತಗಳಿಸಲಿದ್ದರೆ, ಜೆಡಿಎಸ್ ಶೇಕಡಾ 17 ರಷ್ಟು ಮತ ಗಳಿಸಲಿದೆ ಎಂದು ಹೇಳಿದೆ.
ಪಕ್ಷೇತರರು ಶೇಕಡಾ 6 ರಷ್ಟು ಮತಗಳನ್ನು ಪಡೆಯಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
ಹಳೇ ಮೈಸೂರು ಪ್ರದೇಶದ ಒಟ್ಟು 66 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 24-25 ಸ್ಥಾನ ಗಳಿಸಿದರೆ, ಇಲ್ಲಿ ಜೆಡಿಎಸ್ 21-21 ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಎರಡನೇ ಸ್ಥಾನಗಳಿಸಲಿದೆ. ಬಿಜೆಪಿ ಸಾಕಷ್ಟು ಬೆವರು ಹರಿಸಿದರೂ ಪ್ರಯೋಜನವಾಗಿಲ್ಲ. ಮತಗಳಿಕೆ ಪ್ರಮಾಣ ಹೆಚ್ಚಳವಾಗಿದೆ. ಆದರೆ ಇದು ಅಭ್ಯರ್ಥಿ ಆಯ್ಕೆಗೆ ಸಹಕಾರಿಯಾಗಿಲ್ಲ ಎಂದು ಹೇಳಿದೆ. ಒಟ್ಟಾರೆ ಬಿಜೆಪಿ ಇಲ್ಲಿ 10 ರಿಂದ14 ಸ್ಥಾನಗಳಿಸಲಿದ್ದು, ಎರಡು ಕ್ಷೇತ್ರಗಳಲ್ಲಿ ನೇರಾ ನೇರ ಹಣಾಹಣಿಯಿದ್ದು, ಫಲಿತಾಂಶ ಏನು ಬೇಕಾದರೂ ಆಗಬಹುದು ಎಂದು ಹೇಳಿದೆ.
ರಾಜಧಾನಿ ಬೆಂಗಳೂರಿನ 28 ಕ್ಷೇತ್ರಗಳ ಪೈಕಿ ಬಿಜೆಪಿ 9 ರಿಂದ10 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದ್ದು, ಕಾಂಗ್ರೆಸ್ 13 ರಿಂದ 14 ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಜೆಡಿಎಸ್ 1 ರಿಂದ 2 ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ. ಒಂದು ಕ್ಷೇತ್ರದಲ್ಲಿ ಪಕ್ಷೇತರರು ಗೆಲುವು ಸಾಧಿಸಲಿದ್ದು, ಇನ್ನೆರಡು ಕ್ಷೇತ್ರದಲ್ಲಿ ಫಲಿತಾಂಶ ಏನು ಬೇಕಾದರೂ ಆಗಲಿದೆ ಎಂದು ಅಂದಾಜಿಸಿದೆ.
ಮುಂಬೈ ಕರ್ನಾಟಕ ಬಿಜೆಪಿಯ ಭದ್ರಕೋಟೆ. ಕಳೆದ ಬಾರಿ ಇಲ್ಲಿ ಬಿಜೆಪಿ ಅತ್ಯಧಿಕ ಸ್ಥಾನಗಳಿಸಿತ್ತು. ಆದರೆ ಈ ಬಾರಿ ಈ ಭದ್ರಕೋಟೆಗೆ ತೂತು ಬೀಳುವ ಸಾಧ್ಯತೆಯಿದೆ ಒಟ್ಟು 44 ಕ್ಷೇತ್ರಗಳ ಪೈಕಿ ಬಿಜೆಪಿ 14 ರಿಂದ 16 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದ್ದು, ಕಾಂಗ್ರೆಸ್ 27 ರಿಂದ 28 ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಜೆಡಿಎಸ್ 1 ರಿಂದ 2 ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ. ಒಂದು ಕ್ಷೇತ್ರದಲ್ಲಿ ಪಕ್ಷೇತರರು ಗೆಲುವು ಸಾಧಿಸಲಿದ್ದು, ಇನ್ನೆರಡು ಕ್ಷೇತ್ರಗಳಲ್ಲಿ ಫಲಿತಾಂಶ ಏನು ಬೇಕಾದರೂ ಆಗಲಿದೆ ಎಂದು ಅಂದಾಜಿಸಿದೆ.
ಹೈದರಬಾದ್ ಕರ್ನಾಟಕ ಒಂದು ರೀತಿಯಲ್ಲಿ ಕಾಂಗ್ರೆಸ್ ನ ಭದ್ರಕೋಟೆ ಎನ್ನಬಹುದು ಆದರೂ ಸರಿ ಸುಮಾರು ಕಳೆದ ಬಾರಿಯ ಫಲಿತಾಂಶ ಮರುಕಳಿಸುವಂತಿದೆ. ಆಡಳಿತ ವಿರೋಧಿ ಅಲೆಯಿದ್ದರೂ ಇಲ್ಲಿ ಬಿಜೆಪಿ ಕಳೆದ ಬಾರಿ ಗಳಿಸಿದ ಸ್ಥಾನಗಳನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಒಟ್ಟು 40 ಕ್ಷೇತ್ರಗಳ ಪೈಕಿ ಬಿಜೆಪಿ 12 ರಿಂದ14 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದ್ದು, ಕಾಂಗ್ರೆಸ್ 21 ರಿಂದ 22 ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಜೆಡಿಎಸ್ 1 ರಿಂದ 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. 3 ಕ್ಷೇತ್ರದಲ್ಲಿ ಪಕ್ಷೇತರರು ಗೆಲುವು ಸಾಧಿಸಲಿದ್ದು, ಇನ್ನೆರಡು ಕ್ಷೇತ್ರಗಳಲ್ಲಿ ಫಲಿತಾಂಶ ಏನು ಬೇಕಾದರೂ ಆಗಲಿದೆ ಎಂದು ಅಂದಾಜಿಸಿದೆ.
ಕೇಂದ್ರ ಕರ್ನಾಟಕದ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗದಲ್ಲಿ ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿದೆ.ಕಳೆದ ಬಾರಿ ಬಿಜೆಪಿ ಇಲ್ಲಿ ಹೆಚ್ಚಿನ ಸ್ಥಾನ ಗಳಿಸಿತ್ತು. ಈ ಬಾರಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಲಿದೆಯಾದರೂ ಬಿಜೆಪಿ ಕೂಡ ಉತ್ತಮ ಸ್ಪರ್ಧೆ ನೀಡುತ್ತಿದೆ. ಇಲ್ಲಿನ ಒಟ್ಟು 27 ಕ್ಷೇತ್ರಗಳ ಪೈಕಿ ಬಿಜೆಪಿ 8 ರಿಂದ 9 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದ್ದು, ಕಾಂಗ್ರೆಸ್ 16 ರಿಂದ 17 ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಜೆಡಿಎಸ್ 1 ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ. 2 ಕ್ಷೇತ್ರದಲ್ಲಿ ಪಕ್ಷೇತರರು ಗೆಲುವು ಸಾಧಿಸಲಿದ್ದು, ಇನ್ನೊಂದು ಕ್ಷೇತ್ರದಲ್ಲಿ ಫಲಿತಾಂಶ ಏನು ಬೇಕಾದರೂ ಆಗಲಿದೆ ಎಂದು ವಿವರಿಸಿದೆ.
ಕರಾವಳಿ ಕರ್ನಾಟಕದಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಮುಂದುವರೆಸಲಿದೆ. ಇಲ್ಲಿ ರಾಜ್ಯ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಲೆಗಿಂತ ಕೋಮು ಧೃವೀಕರಣ ಪ್ರಮುಖ ಪಾತ್ರ ವಹಿಸಿದೆ. ಪ್ರಧಾನಿ ಮೋದಿಯವರ ಅಲೆ ಇಲ್ಲಿ ಬಿಜೆಪಿಯ ಪ್ಲಸ್ ಪಾಯಿಂಟ್ ಆಗಿದೆ. ಯಾವುದೇ ಅಭ್ಯರ್ಥಿ ಅಥವಾ ಅಭಿವೃದ್ಧಿಗೆ ಬದಲಾಗಿ ಬಿಜೆಪಿ ಪ್ರಮುಖವಾಗಿದೆ. ಜೆಡಿಎಸ್ ಬಗ್ಗೆ ಇಲ್ಲಿ ಸಂಪೂರ್ಣ ನಕರಾತ್ಮಕ ಅಭಿಪ್ರಾಯವಿದೆ. ಇಲ್ಲಿನ ಒಟ್ಟು 19 ಕ್ಷೇತ್ರಗಳ ಪೈಕಿ ಬಿಜೆಪಿ 12 ರಿಂದ13 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದ್ದು, ಕಾಂಗ್ರೆಸ್ 7 ರಿಂದ 8 ಕ್ಷೇತ್ರಗಳಲ್ಲಿ ಜಯಗಳಿಸಲಿದೆ .ಇನ್ನೊಂದು ಕ್ಷೇತ್ರದಲ್ಲಿ ಫಲಿತಾಂಶ ಏನು ಬೇಕಾದರೂ ಆಗಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಒಟ್ಟಾರೆಯಾಗಿ ಈ ಚುನಾವಣೆಯಲ್ಲಿ ಕಾಂಗ್ರೆಸ್ 108-114 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಸರಳ ಬಹುಮತ ಪಡೆದುಕೊಂಡು ಸರ್ಕಾರ ರಚನೆ ಮಾಡುತ್ತದೆ ಎಂದು ಸಮೀಕ್ಷೆ ತಿಳಿಸಿದೆ.
ಆಡಳಿತ ರೂಡ ಬಿಜೆಪಿ 65-76 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವ ಸಾಧ್ಯತೆಯಿದ್ದು, ಜೆಡಿಸ್ 24-30 ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ ಹಾಗೂ 7 ಕ್ಷೇತ್ರಗಳಲ್ಲಿ ಪಕ್ಷೇತರರು ಗೆಲುವು ಸಾಧಿಸಲಿದ್ದಾರೆ ಎಂದು ವರದಿ ತಿಳಿಸಿದೆ.
ಒಟ್ಟಾರೆಯಾಗಿ ಈ ಫಲಿತಾಂಶಕ್ಕೆ ಹಣದುಬ್ಬರ, ಕೃಷಿ ಸಾಲ, ಬೆಳೆ ಹಾನಿ, ಕೃಷಿ ಉತ್ಪನ್ನಗಳ ಬೆಲೆ ಕುಸಿತ, ಭ್ರಷ್ಟಾಚಾರ, ಅಡುಗೆ ಅನಿಲ ಸೇರಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ, ಅಕ್ರಮ ಮರಳು ಗಣಿಗಾರಿಕೆ, ರಿಯಲ್ ಎಸ್ಟೇಟ್, ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಅವ್ಯವಹಾರ, ಗಡಿ ಮತ್ತು ಜಕ ವಿವಾದಗಳ ಆಧಾರದಲ್ಲಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ಈ ಸಮೀಕ್ಷಾ ವರದಿ ಸಿದ್ಧ ಪಡಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.