ಬೆಂಗಳೂರು ಅ, 11-
ಸಿಎಂ ಸಿದ್ದರಾಮಯ್ಯರವರ ಮುಡಾ ಹಗರಣದ ತನಿಖೆಯ ನಡುವೆಯೇ ಬಿಜೆಪಿಗೆ ತಿರುಗೇಟು ನೀಡಲು ಸಜ್ಜಾಗುತ್ತಿರುವ ಕಾಂಗ್ರೆಸ್, ಕೋವಿಡ್ – 19 ಸಮಯದಲ್ಲಿ ವೈದ್ಯಕೀಯ ಉಪಕರಣಗಳ ಖರೀದಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ನೇಮಿಸಲಾದ ಜಸ್ಟೀಸ್ ಮೈಕಲ್ ಡಿ ಕುನ್ಹಾರವರ ವಿಚಾರಣಾ ಆಯೋಗದ ಮಧ್ಯಂತರ ಸತ್ಯ ಸಂಶೋಧನಾ ವರದಿಯ ಕುರಿತು ತನಿಖೆ ಮತ್ತು ಕ್ರಮಗಳನ್ನು ಮುಂದುವರೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ನೇಮಿಸಲು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆಯು ನಿರ್ಧರಿಸಿದೆ.
ಕೋವಿಡ್ – 19 ಸಾಂಕ್ರಾಮಿಕ ರೋಗ ನಿರ್ವಹಣೆಯ ವೇಳೆ ನಡೆದಿರಬಹುದಾದ ಅವ್ಯವಹಾರಗಳ ತನಿಖೆಗೆ ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿ ಕುನ್ನಾ ಅವರ ನೇತೃತ್ವದ ವಿಚಾರಣಾ ಆಯೋಗವು ತನ್ನ ಮೊದಲ ವರದಿ ನೀಡಿದೆ. ಸದರಿ ವರದಿಯಲ್ಲಿ ಬೃಹತ್ ಪ್ರಮಾಣದ ಹಗರಣ ನಡೆದಿರುವುದಾಗಿ ಉಲ್ಲೇಖಿಸಿದ್ದು, ಈ ಕುರಿತು ಕ್ರಮ ಕೈಗೊಳ್ಳಬಹುದೆಂದು ತಿಳಿಸಲಾಗಿದೆ. ಈ ನಿಟ್ಟಿನಲ್ಲಿ ಪರಿಶೀಲಿಸಿ, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪಸಮಿತಿಯನ್ನು ರಚಿಸಿ, ಆದೇಶ ನೀಡಲಾಗಿದ್ದು, ಶೀಘ್ರದಲ್ಲೇಎಸ್ಐಟಿ ಹಾಗೂ ಸಬ್ ಕಮಿಟಿ ರಚಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಲಿದ್ದು, ಹಗರಣದಲ್ಲಿ ಭಾಗಿಯಾದವರನ್ನು ಜೈಲಿಗಟ್ಟಲು ಸಿದ್ದರಾಮಯ್ಯ ಹೆಜ್ಜೆ ಇಟ್ಟಿದ್ದಾರೆ.
ಕುನ್ಹಾ ತನಿಖಾ ಆಯೋಗ 11 ಸಂಪುಟಗಳಲ್ಲಿ ಭಾಗಶಃ ವರದಿ ಸಲ್ಲಿಸಿದೆ.ಈ ಹಗರಣದಲ್ಲಿ ಸುಮಾರು 7223.64 ಕೋಟಿ ರೂ. ಮೊತ್ತದ ಅವ್ಯವಹಾರ ಆಗಿದೆ. 55 ಸಾವಿರ ಕಡತಗಳನ್ನ ಸಂಬಂಧಪಟ್ಟ ಇಲಾಖೆಗಳಿಂದ ಪಡೆದು ತನಿಖೆ ನಡೆಸಲಾಗಿದೆ. ಈ ಪೈಕಿ 500 ಕೋಟಿ ರೂ. ಮೊತ್ತದ ವಸೂಲಾತಿಗೆ ಆಯೋಗ ಶಿಫಾರಸ್ಸು ಮಾಡಿದೆ ಎಂದು ಕಾನೂನು ಸಚಿವ ಹೆಚ್ಕೆ ಪಾಟೀಲ್ ಹೇಳಿದ್ದಾರೆ.