ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಪೊಲೀಸ್ ಕರ್ತವ್ಯದಲ್ಲಷ್ಟೇ ಹಾಡುಗಾರಿಕೆಯಲ್ಲಿ ನಿಸ್ಸಿಮರು ಎಂಬುದು ಎಲ್ಲರಿಗೆ ತಿಳಿದೇ ಇದೆ. ಇತ್ತೀಚೆಗೆ ಅವರು ಚಿತ್ರದುರ್ಗದ ಕೋಟೆ ಹತ್ತುವುದರಲ್ಲೂ ಪ್ರವೀಣರೆಂದು ತೋರಿಸಿಕೊಟ್ಟಿದ್ದರು. ಇದೀಗ ಅವರಲ್ಲಿ ಅಡಗಿರುವ ಮತ್ತೊಂದು ಸುಪ್ತ ಪ್ರತಿಭೆಯೊಂದು ಬೆಳಕಿಗೆ ಬಂದಿದೆ.
ಮಾಮೂಲಿಯಾಗಿ ಅರೆಬಿಕ್, ಉರ್ದು ಹೊರತುಪಡಿಸಿ ಉಳಿದೆಲ್ಲಾ ಭಾಷೆಗಳ ಅಕ್ಷರಗಳನ್ನು ಎಡದಿಂದ ಬಲಕ್ಕೆ ಬರೆಯುವುದು ಪದ್ಧತಿ. ಆದರೆ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರು ಅರೆಬಿಕ್, ಉರ್ದು ಮಾದರಿಯಲ್ಲಿಯೇ ಇಂಗ್ಲಿಷ್ ಅಕ್ಷರವನ್ನು ಬಲಗಡೆಯಿಂದ ಬರೆಯುತ್ತಾರೆ. ಅದನ್ನು ನಾವು ಕನ್ನಡಿಯಲ್ಲಿ ನೋಡಿದಾಗ ಮಾತ್ರ ಅವರೇನು ಬರೆದಿದ್ದಾರೆ ಎಂದು ಓದಲು ಸಾಧ್ಯ. ಉಲ್ಟಾ ಬರೆಯುವ ಕಾರಣ ಎಲ್ಲಾ ಸ್ಪೆಲ್ಲಿಂಗ್ ಗಳನ್ನು ಮನಸ್ಸಿನಲ್ಲಿಯೇ ಗ್ರಹಿಸಿ ತಪ್ಪಿಲ್ಲದಂತೆ ಬರೆಯೋದು ಅಷ್ಟೊಂದು ಸುಲಭಸಾಧ್ಯವಾದ ಕೆಲಸವಲ್ಲ. ಇದಕ್ಕೆ ಅಷ್ಟೇ ಪರಿಶ್ರಮ ಹಾಗು ಗ್ರಹಿಕಾ ಶಕ್ತಿ ಅತ್ಯಗತ್ಯ.
ಪೊಲೀಸ್ ಕಮಿಷನರ್ ಅವರು ಬಲಬದಿಯಿಂದ ಬರೆಯೋದನ್ನು ಶಾಲಾ ದಿನಗಳಿಂದಲೇ ಅಭ್ಯಾಸ ಮಾಡಿಕೊಂಡಿದ್ದೆ ಎಂದು ಹೇಳುತ್ತಾರೆ. ಅವರು ಈ ರೀತಿ ಲೀಲಾಜಾಲವಾಗಿ ಅಕ್ಷರ ತಪ್ಪಿಲ್ಲದಂತೆ ಬರೆಯೋದನ್ನು ಕಂಡಾಗ ಎಲ್ಲರೂ ನಿಬ್ಬೆರಗಾಗುವುದಂತೂ ಸತ್ಯ. ಒಟ್ಟಿನಲ್ಲಿ ಪೊಲೀಸ್ ಕಮಿಷನರ್ ಆಗಿ ತಮ್ಮ ಕರ್ತವ್ಯದ ನಡುವೆಯೂ ಎನ್.ಶಶಿಕುಮಾರ್ ಅವರು ತಮ್ಮ ಇನ್ನಿತರ ಚಟುವಟಿಕೆಗಳಿಂದ ಜನಮೆಚ್ಚುಗೆ ಗಳಿಸಿರೋದು ಅವರ ಆಸಕ್ತಿಗೆ ಹಿಡಿದಿರುವ ಕನ್ನಡಿಯಂತಿದೆ.