ಕಿಕ್ ಬಾಕ್ಸಿಂಗ್ನಲ್ಲಿ ನನ್ನ ಮಗನನ್ನು ಕ್ರೂರವಾಗಿ ಕೊಂದಿದ್ದಾರೆ. ಈ ಬಗ್ಗೆ ತನಿಖೆ ಆಗಬೇಕೆಂದು ಮೃತ ಕಿಕ್ ಬಾಕ್ಸರ್ ನಿಖಿಲ್ ಅವರ ತಂದೆ ಸುರೇಶ್ ಅವರು ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಿಖಿಲ್ ಭಾನುವಾರ ಮೃತಪಟ್ಟಿದ್ದಾರೆ.
ಈ ಸಾವಿನ ಬಗ್ಗೆ ಮೃತ ಯುವಕನ ತಂದೆ ಸುರೇಶ್ ಮಾತನಾಡಿ, ನನ್ನ ಮಗ ಕಿಕ್ ಬಾಕ್ಸಿಂಗ್ ಸ್ಪರ್ಧೆ ಇದೇ ಎಂದು ಶನಿವಾರ ಮತ್ತು ಭಾನುವಾರ ಬೆಂಗಳೂರಿಗೆ ಹೋಗಿದ್ದ. ಅವನನ್ನು ಕರೆದುಕೊಂಡು ಹೋದವರು ಅವನ ಜೊತೆ ತೆರಳಿಲ್ಲ. ಕೇವಲ ನನ್ನ ಮಗ ಮತ್ತು ಇತರ ಸ್ಪರ್ಧಿಗಳು ಹೋಗಿದ್ದು, ಅಲ್ಲಿ ಭಾನುವಾರ ಕಿಕ್ ಬಾಕ್ಸಿಂಗ್ ಸ್ಪರ್ಧೆ ವೇಳೆ ತಲೆಗೆ ಪೆಟ್ಟು ಬಿದ್ದು ನನ್ನ ಮಗ ಆಸ್ಪತ್ರೆಗೆ ಸೇರಿದ್ದಾನೆ. ಈ ಬಗ್ಗೆ ಆಯೋಜಕರಲ್ಲಿ ಕೇಳಿದಾಗ ಅವರು ಯಾವುದೇ ಉತ್ತರ ನೀಡಲಿಲ್ಲ ಎಂದು ಹೇಳಿದರು.
ಜೊತೆಗೆ ಕಿಕ್ ಬಾಕ್ಸಿಂಗ್ ಸ್ಪರ್ಧೆಯನ್ನು ಆಯೋಜನೆ ಮಾಡಿದ್ದವರಿಗೆ ಸ್ಪರ್ಧೆಯ ಬಗ್ಗೆ ಮಾಹಿತಿ, ಯಾವುದೇ ಜ್ಞಾನ ಇಲ್ಲ. ಸ್ಪರ್ಧೆ ನಡೆಯುವ ಜಾಗದಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ಸುರೇಶ್ ಆರೋಪ ಮಾಡಿದ್ದಾರೆ. ಒಂದೇ ಪಂಚಿಗೆ ಹೇಗೆ ನನ್ನ ಮಗ ಸತ್ತ, ನನ್ನ ಮಗನಿಗೆ ಕಿಕ್ ಬಾಕ್ಸಿಂಗ್ ಗೊತ್ತಿಲ್ಲ. ಮೊದಲ ಬಾರಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಾಣ ಕಳೆದುಕೊಂಡಿದ್ದಾನೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು, ಯಾವುದೇ ಜ್ಞಾನವಿಲ್ಲದ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅಗ್ರಹಿಸಿದ್ದಾರೆ. ಅಲ್ಲದೆ, ಬೆಂಗಳೂರಿನ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ಹೇಳಿದ್ದಾರೆ.