ಬೆಂಗಳೂರು – ಅಯೋಧ್ಯೆಯಲ್ಲಿ (Ayodhya) ಸೋಮವಾರ ನಡೆಯುತ್ತಿರುವ ರಾಮಮಂದಿರ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಜ್ಯದ ಮಠಾಧೀಶರ ದಂಡು ರಾಮನ ನಗರಿ ಅಯೋಧ್ಯೆ ತಲುಪಿದೆ.
ಈ ಐತಿಹಾಸಿಕ ಸಮಾರಂಭವನ್ನು ಸಾಕ್ಷೀಕರಿಸಲು ಕರ್ನಾಟಕದ ಸುಮಾರು ಎಂಭತ್ತು ಸಾವಿರ ಮಂದಿ ಅಯೋಧ್ಯೆಗೆ ತೆರಳಿದ್ದಾರೆ.
ಮಂದಿರ ಉದ್ಘಾಟನೆ ಹಾಗೂ ಬಾಲರಾಮನ ವಿಗ್ರಹ ಪ್ರಾಣ ಪ್ರತಿಷ್ಠೆ ಸಮಾರಂಭದ ಉಸ್ತುವಾರಿಯನ್ನು ವಿಶ್ವ ಹಿಂದೂಪರಿಷತ್ ನಾಯಕ ಕರ್ನಾಟಕದ ಗೋಪಾಲ್ ಅವರು ವಹಿಸಿದ್ದು.ಇಡೀ ಸಮಾರಂಭದಲ್ಲಿ ಕರ್ನಾಟಕದ ಛಾಪು ಎದ್ದು ಕಾಣುತ್ತಿದೆ.
ಬಾಲರಾಮನಿಗೆ ಮೊದಲ ದಿನ ಉಡಿಸಲು ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿಯ ವಸ್ತ್ರಗಳನ್ನು ಕೊಂಡೊಯ್ಯಲಾಗಿದೆ.ಕರ್ನಾಟಕದ ಅನೇಕ ಅರ್ಚಕ,ಆಗಮಿಕರು ಧಾರ್ಮಿಕ ಕೈಂಕರ್ಯಗಳ ನೇತೃತ್ವ ವಹಿಸಿದ್ದಾರೆ.
ಈಗಾಗಲೇ ರಾಮ ಮಂದಿರ ದೇವಾಲಯ ಉದ್ಘಾಟನಾ ಸಮಾರಂಭಕ್ಕೆ ಕರ್ನಾಟಕದ ವಿವಿಧ ಮಠ-ಮಂದಿರಗಳಿಂದ ಸುಮಾರು 15ಕ್ಕೂ ಅಧಿಕ ಮಠಾಧೀಶರು ತೆರಳಿದ್ದಾರೆ ಇವರ ಜೊತೆಗೆ ಚಿತ್ರದುರ್ಗ ದಿಂದ ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠದ ನಿರಂಜನಾನಂದ ಮಹಾಸ್ವಾಮಿಜಿ, ಮಾದರ ಚನ್ನಯ್ಯ ಗುರುಪೀಠ ಚಿತ್ರದುರ್ಗದ ಬಸವಮೂರ್ತಿ ಮಾದಾರ ಚನ್ನಯ್ಯ ಮಹಾಸ್ವಾಮೀಜಿ, ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠ ಹೊಸದುರ್ಗದ ಶಾಂತವೀರ ಮಹಾಸ್ವಾಮೀಜಿ, ಸಿದ್ದರಾಮೇಶ್ವರ ಮಹಾ ಸಂಸ್ಥಾನ ಭೋವಿ ಗುರುಪೀಠ ಚಿತ್ರದುರ್ಗದ ಇಮ್ಮಡಿ ಸಿದ್ದರಾಮಯ್ಯ ಮಹಾಸ್ವಾಮೀಜಿ ತೆರಳಿದ್ದಾರೆ ಬೆಂಗಳೂರಿನಿಂದ ಎಲ್ಲ ಮಠಾಧೀಶರು, ವಿಮಾನದ ಮೂಲಕ ಲಕ್ನೋ ತಲುಪಲಿದ್ದಾರೆ. ಲಕ್ನೋದಿಂದ ಅಯೋಧ್ಯೆಗೆ ಕಾರಿನಲ್ಲಿ ಪ್ರಯಾಣಿಸಲಿದ್ದಾರೆ.