ಬೆಂಗಳೂರು, ಜ.24- ದಾವೋಸ್ (Davos) ನಲ್ಲಿ ನಡೆದ ಜಾಗತಿಕ ಆರ್ಥಿಕ ಮೇಳದಲ್ಲಿ ರಾಜ್ಯ ಸರ್ಕಾರ ಜಾಗತಿಕ ಕಂಪನಿಗಳ ಜೊತೆಗೆ 23,000 ಕೋಟಿ ರೂ.ಮೊತ್ತದ 8 ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಂಗಳೂರಿನ ಆಚೆಗೂ ಕೈಗಾರಿಕೆಗಳ ಅಭಿವೃದ್ಧಿಗೆ ಸಮಾನ ಕೊಡುಗೆ ನೀಡಲು ಉತ್ತರ ಕರ್ನಾಟಕ ಭಾಗದಲ್ಲಿ ತಮ್ಮ ವಹಿವಾಟು ಆರಂಭಿಸಲು ಹಲವಾರು ಕಂಪನಿಗಳು ಆಸಕ್ತಿ ತೋರಿಸಿವೆ ಎಂದು ತಿಳಿಸಿದರು.
ವಿಜಯಪುರ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮತ್ತಿತರ ಸ್ಥಳಗಳಲ್ಲಿ ಕೈಗಾರಿಕೆಗಳ ಸಮಾನ ಅಭಿವೃದ್ಧಿ ಗುರಿಗೆ ಕೊಡುಗೆ ನೀಡುವ ಹಲವಾರು ಉಪಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ವಿಜಯಪುರದಲ್ಲಿ 300 ಕೋಟಿ ರೂ.ವೆಚ್ಚದಲ್ಲಿ ಹೊಸ ಆಹಾರ ಸಂಸ್ಕರಣಾ ಘಟಕ ಸ್ಥಾಪಿಸಲು ಹಾಗೂ ಕಲಬುರಗಿಯಲ್ಲಿನ ತನ್ನ ಘಟಕದ ಸಾಮರ್ಥ್ಯ ವಿಸ್ತರಿಸುವ ಉದ್ದೇಶಕ್ಕೆ ಬಂಡವಾಳ ಹೂಡಿಕೆ ಮಾಡಲು ಲುಲು ಸಮೂಹವು ಯೋಜಿಸಿದೆ.
ಬಿಎಲ್ ಅಗ್ರೊ ಸಂಸ್ಥೆ ವಿಜಯಪುರದಲ್ಲಿ ಸುಸಜ್ಜಿತ ಆಹಾರ ಸಂಸ್ಕರಣಾ ಘಟಕವನ್ನು ಆರಂಭಿಸಲಿದೆ. ದೇಶಿ ಮತ್ತು ರಫ್ತು ಮಾರುಕಟ್ಟೆಗಳಿಗೆ ಕಚ್ಚಾ ವಸ್ತು ಪೂರೈಸಲು ಸ್ಥಳೀಯ ಆಹಾರ ಉತ್ಪನ್ನಗಳನ್ನು ಖರೀದಿಸಿ ಅವುಗಳ ಶ್ರೇಣೀಕರಣ, ವಿಂಗಡಣೆ ಮತ್ತು ಪ್ಯಾಕೇಜಿಂಗ್ ಉದ್ದೇಶಕ್ಕೆ ಈ ಘಟಕ ನೆರವಾಗಲಿದೆ ಎಂದು ವಿವರಿಸಿದರು.
ಬೆಂಗಳೂರಿನಲ್ಲಿ 100 ಮೆಗಾವ್ಯಾಟ್ ಸಾಮರ್ಥ್ಯದ ಬೃಹತ್ ಗಾತ್ರದ ಡೇಟಾ ಸೆಂಟರ್ ಸ್ಥಾಪಿಸಲು ವೆಬ್ ವಕ್ರ್ಸ್ 20,000 ಕೋಟಿ ರೂ.ಮೊತ್ತದ ಬಂಡವಾಳ ಹೂಡಿಕೆ ಮಾಡಲು ಬದ್ಧತೆ ಪ್ರಕಟಿಸಿದೆ. ಇದರಿಂದ 1000 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ ಡಿಜಿಟಲ್ ಕೌಶಲ್ಯ ವೃದ್ಧಿ ಪ್ರಕ್ರಿಯೆ ಹಮ್ಮಿಕೊಳ್ಳಲು ಮೈಕ್ರೊಸಾಫ್ಟ್ ವಾಗ್ದಾನ ಮಾಡಿದೆ. ಗ್ರಾಮೀಣ ಪ್ರದೇಶ ಕೇಂದ್ರಿತ ಆರ್ಥಿಕ ಬೆಳವಣಿಗೆ ಉತ್ತೇಜಿಸಲು ಹಿಟಾಚಿ ಕಂಪನಿಯು ಎಂಒಯುಗೆ ಸಹಿ ಹಾಕಿದೆ ಎಂದರು.
ಎಚ್‍ಪಿ ಎಂಟರ್‌ಪ್ರೈಸ್, ಬೆಂಗಳೂರಿನಲ್ಲಿರುವ ತನ್ನ ಕ್ಯಾಂಪಸ್‍ನ ಸಾಮರ್ಥ್ಯ ಹೆಚ್ಚಿಸಿ ಜಾಗತಿಕವಾಗಿ ಅತಿದೊಡ್ಡ ಎಚ್‍ಪಿ ಕ್ಯಾಂಪಸ್ ರೂಪಿಸಲು ಎರಡು ಹೊಸ ಕಟ್ಟಡಗಳನ್ನು ಪ್ರಾರಂಭಿಸಲು ಸಜ್ಜಾಗಿದೆ.
ಎಬಿ ಇನ್‍ಬೇವ್: ಎಬಿ ಇನ್‍ಬೇವ್ ಕಂಪನಿಯು 400 ಕೋಟಿ ರೂ.ಮೊತ್ತದ ಬಂಡವಾಳ ಹೂಡಿಕೆಯೊಂದಿಗೆ, ಕರ್ನಾಟಕದಲ್ಲಿ ತನ್ನ ಅತ್ಯಾಧುನಿಕ ಮದ್ಯ ತಯಾರಿಕಾ ಘಟಕದ ಸಾಮಥ್ರ್ಯ ವಿಸ್ತರಿಸುವ ಗುರಿ ಹೊಂದಿದೆ.ಎಚ್‍ಸಿಎಲ್, ಎಚ್‍ಪಿ. ಸಿಸ್ಕೊ ಮತ್ತು ಸೋನಿಯಂತಹ ಕಂಪನಿಗಳ ಜೊತೆಗಿನ ಪಾಲುದಾರಿಕೆಯ ಸಮಾಲೋಚನೆಗಳಲ್ಲಿ ಕೃತಕ ಬುದ್ಧಿಮತ್ತೆ ಪ್ರಮುಖ ವಿಷಯವಾಗಿ ಹೊರಹೊಮ್ಮಿದೆ. ಸುಸ್ಥಿರತೆ ಮತ್ತು ನಾಗರೀಕ ಸೇವೆಗಳು ಸಹ ಈ ಚರ್ಚೆಗಳಲ್ಲಿ ಮಹತ್ವದ ವಿಷಯಗಳಾಗಿದ್ದವು. ವಿವಿಧ ನವೋದ್ಯಮಗಳು ಮತ್ತು ಸ್ಥಾಪಿತ ಕಂಪನಿಗಳ ಜೊತೆಗೆ ಭವಿಷ್ಯದ ನಡೆಗಳ ಬಗ್ಗೆ ಮಾತುಕತೆಗಳು ನಡೆದಿವೆ ಎಂದು ವಿವರಿಸಿದರು.