ಬೆಂಗಳೂರು – ಅಯೋಧ್ಯೆಯಲ್ಲಿ ರಾಮಮಂದಿರ (Ram Mandir) ಉದ್ಘಾಟನೆಯಾಗಿ ಬಾಲರಾಮನ ಪ್ರತಿಷ್ಠಾಪನೆ ಯಾಗುತ್ತಿದ್ದಂತೆ, ದೇಶಾದ್ಯಂತ ಹಬ್ಬದ ವಾತಾವರಣ ಸೃಷ್ಟಿಯಾಗಿದೆ ಇದರ ಬೆನ್ನಲ್ಲೇ ಇದೀಗ ಕರ್ನಾಟಕ ಸರ್ಕಾರ ಕೂಡ ರಾಮ ನಾಮ ಜಪಿಸತೊಡಗಿದೆ.
ಭಗವಾನ್ ಶ್ರೀರಾಮ ಎಲ್ಲರ ಆರಾಧ್ಯ ದೈವ ಈತ ಯಾವುದೋ ಪಕ್ಷ ಅಥವಾ ಸಂಘಟನೆಗೆ ಸೀಮಿತವಲ್ಲ ಎಂದು ಕಾಂಗ್ರೆಸ್ ನಾಯಕರು ಪ್ರತಿಪಾದಿಸುತ್ತಿರುವ ಬೆನ್ನಲ್ಲೇ ಸರ್ಕಾರ ರಾಮನ ಕುರಿತು ತನ್ನ ಪ್ರೀತಿಯನ್ನು ಬಹಿರಂಗಪಡಿಸಲು ಮುಂದಾಗಿದೆ.
ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆದ ರಾಮಮಂದಿರ ಉದ್ಘಾಟನೆ ಮತ್ತು ಬಾಲರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಸರ್ಕಾರದ ಪ್ರತಿನಿಧಿಗಳಿಗೆ ಅಧಿಕೃತ ಆಹ್ವಾನ ನೀಡಲಾಗಿತ್ತು. ಆದರೆ,ಪಕ್ಷದ ನಾಯಕತ್ವ ಕೈಗೊಂಡ ತೀರ್ಮಾನದಂತೆ ಕಾರ್ಯಕ್ರಮದಿಂದ ದೂರ ಉಳಿದ ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ಇದೀಗ ರಾಜ್ಯಾದ್ಯಂತ ರಾಮನಾಮ ಜಪಿಸಲು ಹೊಸ ಸಿದ್ಧತೆ ಮಾಡಿದೆ.
ರಾಜ್ಯದಲ್ಲಿರುವ ಎಲ್ಲಾ ರಾಮ ಮಂದಿರಗಳ ಪುನರುಜ್ಜೀವನ ಮತ್ತು ಪುನರ್ ನಿರ್ಮಾಣಕ್ಕೆ ಹೊಸದೊಂದು ಯೋಜನೆಯನ್ನು ಸಿದ್ಧಪಡಿಸಿರುವ ಮುಜರಾಯಿ ಇಲಾಖೆ ಇದಕ್ಕಾಗಿ 200 ಕೋಟಿ ರೂಪಾಯಿ ವೆಚ್ಚದಲ್ಲಿ ಕ್ರಿಯಾಯೋಜನೆಯನ್ನು ರೂಪಿಸಿದೆ.
ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ವಿಶೇಷ ಆಸಕ್ತಿ ವಹಿಸಿ ಈ ಯೋಜನೆಯನ್ನು ಸಿದ್ಧಪಡಿಸುತ್ತಿದ್ದು ಇಲಾಖೆಯ ಮೂಲಕ ರಾಜ್ಯದಲ್ಲಿರುವ ಎಲ್ಲಾ ರಾಮಮಂದಿರಗಳ ಕುರಿತಾದ ವಿವರಗಳನ್ನು ಸಂಗ್ರಹಿಸಿದ್ದಾರೆ. ಇದರ ಜೊತೆಗೆ ಖಾಸಗಿಯಾಗಿ ನಿರ್ಮಾಣಗೊಂಡು ನಿರ್ವಹಣೆಯಿಲ್ಲದಿರುವ ರಾಮಮಂದಿರಗಳಿಗೂ ಕೂಡ ಅನುದಾನ ಬಿಡುಗಡೆ ಮಾಡಿ ಅವುಗಳ ಪುನರ್ ನಿರ್ಮಾಣಕ್ಕೆ ಸಚಿವರು ತೀರ್ಮಾನಿಸಿದ್ದಾರೆ ಈ ಸಂಬಂಧ ಇಲಾಖೆಯಿಂದ ಪ್ರತ್ಯೇಕ ಪ್ರಸ್ತಾವನೆ ಸಿದ್ಧಗೊಂಡಿದ್ದು ಅನುಮೋದನೆಗಾಗಿ ಹಣಕಾಸು ಇಲಾಖೆಗೆ ಸಲ್ಲಸಿಲಾಗಿದೆ.
ಮುಂಬರುವ ಬಜೆಟ್ ನಲ್ಲಿ ಈ ಕುರಿತಾದ ವಿಶೇಷ ಯೋಜನೆ ಪ್ರಕಟವಾಗಲಿದೆ ಎಂದು ಮುಜರಾಯಿ ಇಲಾಖೆ ಮೂಲಗಳು ತಿಳಿಸಿವೆ.ಇದರ ಜೊತೆಯಲ್ಲಿ ರಾಜ್ಯದ ಎಲ್ಲಾ ಮಠಗಳಿಗೂ ಅಭಿವೃದ್ಧಿ, ಶೈಕ್ಷಣಿಕ,ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೈಗೊಳ್ಳಲು ವಿಶೇಷ ಅನುದಾನ ಬಿಡುಗಡೆ ಮಾಡುವ ಪ್ರಸ್ತಾವನೆಯನ್ನು ಮುಜರಾಯಿ ಇಲಾಖೆ ಸಿದ್ಧಪಡಿಸಿದೆ.
ರಾಜ್ಯದ ವಿವಿಧ ಸಮುದಾಯಗಳ ಮಠಗಳಿಗೆ ಜಾತಿವಾರು ಜನಸಂಖ್ಯೆಯನ್ನು ಆಧರಿಸಿ ಆರ್ಥಿಕ ನೆರವು ನೀಡುವ ಯೋಜನೆ ಸಿದ್ಧಪಡಿಸಿದ್ದು,ಇದಕ್ಕಾಗಿ 200 ಕೋಟಿ ರೂಪಾಯಿ ನೆರವನ್ನು ಬಜೆಟ್ ನಲ್ಲಿ ಘೋಷಿಸುವಂತೆ ಮನವಿ ಸಲ್ಲಿಸಿದೆ.
ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ವೇಳೆ ವಿವಿಧ ಮಠಗಳಿಗೆ ಆರ್ಥಿಕ ನೆರವು ಘೋಷಿಸಿದ್ದರು.ಇದು ಅವರಿಗೆ ರಾಜಕೀಯವಾಗಿ ಸಾಕಷ್ಟು ಬಲ ತಂದುಕೊಟ್ಟಿತ್ತು. ಆದರೆ ನಂತರದಲ್ಲಿ ಅನುದಾನದ ಪ್ರಮಾಣ ಕಡಿತಗೊಂಡಿತ್ತು.ಇದೀಗ ಲೋಕಸಭಾ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ನೇತೃತ್ವದ ಸರ್ಕಾರ ಅನುದಾನ ಬಿಡುಗಡೆ ಮಾಡಲು ಸಜ್ಜುಗೊಂಡಿದೆ ಎನ್ನಲಾಗಿದೆ.