ಬೆಂಗಳೂರು,ಜು.1-ಸುಶಿಕ್ಷಿತ ರಾಜ್ಯ ಎಂದೇ ಖ್ಯಾತಿ ಪಡೆದಿದ್ದ ಕರ್ನಾಟಕವು ಉಗ್ರರ ಅಡಗುತಾಣವಾಗುತ್ತಿರುವ ಆತಂಕ ಎದುರಾಗಿದೆ. ಕೆಲ ದಿನಗಳ ಹಿಂದಷ್ಟೇ ನಗರದಲ್ಲಿ ಶಂಕಿತ ಉಗ್ರರನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವ ಬೆನ್ನಲ್ಲೇ ರಾಜ್ಯ ಮೂರು ಕಡೆಗಳಲ್ಲಿ ರಾಷ್ಟ್ರೀಯ ತನಿಖಾ ದಳ( ಎನ್‌ಐಎ) ಅಧಿಕಾರಿಗಳು ದಾಳಿ ನಡೆಸಿ ಓರ್ವ ಶಂಕಿತ ಉಗ್ರನನ್ನು ಸೆರೆಹಿಡಿದಿದ್ದಾರೆ.
ಕಾರವಾರ, ಬೆಳಗಾವಿ, ತುಮಕೂರಿನಲ್ಲಿ ಎನ್‌ಐಎ ಅಧಿಕಾರಿಗಳು ಏಕಕಾಲದ ದಾಳಿ ನಡೆಸಿ ಭಟ್ಕಳ ಮೂಲದ ಓರ್ವ ಶಂಕಿತ ಉಗ್ರನನ್ನು ಬಂಧಿಸಿ ಆತನ ಜೊತೆಗೆ ಆತನ ತಮ್ಮನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಕೈಗೊಂಡಿದ್ದಾರೆ.
ಆರೋಪಿ ಅಬ್ದುಲ್ ಮಸ್ತಿರ್ (30) ಶಂಕಿತ ಉಗ್ರನಾಗಿದ್ದು, ಈತ ಐಎಸ್‍ಐಎಸ್ ಬರಹಗಳನ್ನು ಭಾಷಾಂತರ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸುತ್ತಿರುವುದನ್ನು ಪತ್ತೆಹಚ್ಚಲಾಗಿದೆ.
ಅದರಂತೆ ರಹಸ್ಯ ಕಾರ್ಯಾಚರಣೆ ಕೈಗೊಂಡು ಅಬ್ದುಲ್ ಮಸ್ತಿರನನ್ನು ಭಟ್ಕಳ ನಗರದ ಅರ್ಬನ್ ಬ್ಯಾಂಕ್ ಬಳಿಯ ಆತನ ಮನೆಯ ಮೇಲೆ ದಾಳಿ ನಡೆಸಿದ ಎನ್‍ಐಎ ಅಧಿಕಾರಿಗಳ ತಂಡ ಬಂಧಿಸಿ ವಿಚಾರಣೆ ಕೈಗೊಂಡಿದೆ.
ಪ್ರಾಥಮಿಕ ಮಾಹಿತಿಯಂತೆ ಈತ ಭಟ್ಕಳ ನಗರದಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಐಎಸ್‍ಐಎಸ್‍ನ ಬರಹಗಳನ್ನು ಭಾರತೀಯ ಭಾಷೆಗಳಿಗೆ ಈತ ಭಾಷಾಂತರ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದ ಎಂಬ ಆರೋಪದಡಿ ಈತನನ್ನು ಬಂಧಿಸಿ ವಿಚಾರಣೆ ನಡೆಸಿ ಭಟ್ಕಳದಲ್ಲೇ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.
ಸ್ಥಳೀಯ ಪೊಲೀಸರ ಸಹಕಾರದಿಂದ ಆರೋಪಿ ಅಬ್ದುಲ್ ಮಸ್ತಿರನನ್ನು ಬಂಧಿಸಿ ನಡೆಸಿದ ವಿಚಾರಣೆಯಲ್ಲಿ ಆತ ಐಎಸ್‌ಐ ಸಂಪರ್ಕ ಹೊಂದಿರುವುದು ಕಂಡುಬಂದಿದ್ದು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ. ಚಿನ್ನದ ಪಳ್ಳಿಯ ಬಳಿಯ ಅತನ ಮನೆಯಲ್ಲಿ ಇರುವಾಗಲೆ ಗುಪ್ತಚರ, ಸ್ಥಳೀಯ ಪೊಲೀಸರ ಸಹಕಾರದಿಂದ ದಾಳಿ ನಡೆಸಲಾಗಿದೆ.
ಇತ್ತೀಚಿಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಇಬ್ಬರು ಉಗ್ರರನ್ನು ಬಂಧಿಸಿ ತನಿಖೆಯನ್ನು ತೀವ್ರಗೊಳಿಸಿರುವ ಬೆನ್ನಲ್ಲೇ ಭಟ್ಕಳದಲ್ಲಿ ಎನ್‍ಐಎ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಒಂದು ವರ್ಷದಲ್ಲಿ ಎನ್‌ಐಎ ಭಟ್ಕಳದಲ್ಲಿ ಎರಡನೆ ಬಾರಿ ದಾಳಿ ನಡೆಸುತ್ತಿದ್ದು ಭಟ್ಕಳ ಮತ್ತೊಮ್ಮೆ ಬೆಚ್ಚಿಬೀಳುವಂತಾಗಿದೆ.
ಈ ನಡುವೆ ಶಂಕಿತ ಉಗ್ರರು ವಾಸಿಸುತ್ತಿದ್ದ ಮನೆಗಳು, ಅಕ್ಕಪಕ್ಕದ ಮನೆ ಪರಿಶೀಲನೆ ನಡೆಸಿ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಎಷ್ಟು ದಿನಗಳಿಂದ ವಾಸಿಸುತ್ತಿದ್ದರು ಅವರ ಜೊತೆಗಿನ ಸಂಪರ್ಕದ ಬಗ್ಗೆಯೂ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.
ಈ ಮಧ್ಯೆ ಸಿಸಿಬಿ ಪೊಲೀಸರು ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿ ನಡೆಸುತ್ತಿರುವ ವಿಚಾರಣೆಯಲ್ಲಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಭಾರತ ಸರ್ಕಾರ ತೆಗೆದುಹಾಕಿ ಕಾಶ್ಮೀರಕ್ಕೆ ಇದ್ದ ಸವಲತ್ತು ಕಿತ್ತುಕೊಳ್ಳಲಾಗಿದೆ. ನಮ್ಮಿಂದ ಕಾಶ್ಮೀರವನ್ನು ಕಿತ್ತುಕೊಂಡವರ ವಿರುದ್ಧ ನಾವು ಹೋರಾಡಲೇಬೇಕು ಎನ್ನುವ ನಿಲುವಿಗೆ ಬಂಧಿತ ಶಂಕಿತ ಉಗ್ರರು ಅಂಟಿಕೊಂಡಿರುವುದು ಕಂಡುಬಂದಿದೆ.