ತುಮಕೂರು : ಜೀವನಾಧಾರವಾಗಿ ಇದ್ದ ಭೂಮಿ ರಸ್ತೆ ಅಗಲೀಕರಣದ ಪಾಲಾಗಿದೆ. ಪರಿಹಾರ ನೀಡುವ ಅಧಿಕಾರಿಗಳ ಮಾತು ಸುಳ್ಳಾಗಿದೆ. ಕಚೇರಿ ಅಲೆದು ಅಲೆದು ಅನ್ನದಾತ ಮನವೊಂದು ನೇಣಿಗೆ ಕೊರೊಳೊಡ್ಡಿ ಪ್ರಾಣ ಬಿಟ್ಟಿದ್ದಾನೆ.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಸಾಲ್ಕಟ್ಟೆ ಪಾಳ್ಯದ ರಂಗಪ್ಪ ಆತ್ಮಹತ್ಯೆ ಮಾಡಿಕೊಂಡ ರೈತ.
ತಾಲೂಕಿನ ರಾಷ್ಟ್ರೀಯ ಹೆದ್ದಾರಿ 150 ಎ ರಸ್ತೆ ವಿಸ್ತರಣಾ ಕಾಮಗಾರಿ ನಡೆಯುತ್ತಿದೆ. ಸಾಲ್ಕಟ್ಟೆ ಪಾಳ್ಯದ ರಂಗಯ್ಯ ಎಂಬವರಿಗೆ ಸೇರಿದ 152 ಸರ್ವೇ ನಂಬರ್ ನ 18 ಗುಂಟೆ ಭೂಪ್ರದೇಶ ಭೂ ಸ್ವಾದಿನಪಡಿಸಿಕೊಂಡಿದೆ ಸರ್ಕಾರ. ಕಳೆದ ಆರು ತಿಂಗಳಿಂದಲೂ ಪರಿಹಾರ ಬಂದಿಲ್ಲ. ಇದರಿಂದ ಅಸಮಾಧಾನಗೊಂಡ ರಂಗಯ್ಯ ಹಾಗು ಕುಟುಂಬಸ್ಥರು ರಸ್ತೆ ಕಾಮಗಾರಿಯನ್ನು ತಡೆದು ಪರಿಹಾರಕ್ಕಾಗಿ ಒತ್ತಾಯಸಿದ್ದರು.
ರಸ್ತೆ ಕಾಮಗಾರಿ ಮುಗಿಸುವ ಯತ್ನದಲ್ಲಿ ಸಾಯಿ ಕನ್ಸ್ಟ್ರಕ್ಷನ್ ಇಂಜಿನಿಯರ್ ಶಿವಕುಮಾರ್ ಹಾಗು ಕೆಲ ಜನ ಪ್ರತಿನಿಧಿಗಳ ಒತ್ತಡದಿಂದಾಗಿ ಸುಮಾರು 150ಕ್ಕೂ ಹೆಚ್ಚು ಪೊಲೀಸರ ನೆರವಿನೊಂದಿಗೆ ಕಾಮಗಾರಿ ಅಡ್ಡಿಪಡಿಸದಂತೆ ಪೊಲೀಸರ ಸಹಕಾರ ಕೋರಿದ ಹಿನ್ನೆಲೆಯಲ್ಲಿ ಬೆಳೆ ಪರಿಹಾರವಾಗಿ 3,00,000 ರೂ. ನೀಡುವುದಾಗಿ ಅಂದು ಭರವಸೆ ನೀಡಿದ್ದರು. ಭರವಸೆ ಹುಸಿಯಾದ ಹಿನ್ನೆಲೆಯಲ್ಲಿ ಹಾಗು ಪೊಲೀಸರಿಂದ ನಿಂದನೆಗೆ ಒಳಗಾದ ಕುಟುಂಬ ಮನನೊಂದಿತ್ತು.
ಒಂದು ಕಡೆ ಅವಮಾನ, ಮತ್ತೊಂದು ಕಡೆ ಕೈ ಸಿಗದ ಪರಿಹಾರದ ಹಣ, ಮತ್ತೊಂದು ಕಡೆ ಇದ್ದ ತುಂಡು ಭೂಮಿ ಕಳೆದುಕೊಂಡಿದ್ದ ರೈತ ಕುಟುಂಬ. ಹತಾಶಗೊಂಡು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.
ಸುದ್ದಿ ಹರಡುತ್ತಿದ್ದಂತೆ ಸ್ಥಳೀಯರು ಹಾಗು ಅಕ್ಕಪಕ್ಕದ ಗ್ರಾಮಸ್ಥರುಗಳು ಸೇರಿ ರಂಗಯ್ಯನಿಗಾದ ಅನ್ಯಾಯ ಯಾರಿಗೂ ಆಗಬಾರದೆಂದು ರಾಷ್ಟ್ರೀಯ ಹೆದ್ದಾರಿ ಸಾಲ್ಕಟ್ಟೆ ಗೇಟ್ ಬಳಿ ಸಾರ್ವಜನಿಕರು ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆಯುವ ಮೂಲಕ ಹೋರಾಟ ಆರಂಭಿಸಿದರು.
ಪ್ರತಿಭಟನಾಕಾರರು ಸ್ಥಳೀಯ ಸಿಪಿಐ ಹಾಗು ಪಿಎಸ್ಐ ಅವರ ರಸ್ತೆ ತೆರವುಗೊಳಿಸುವಂತೆ ಮಾಡಿದ ಮನವಿಯನ್ನು ಕುಲ್ಲಂಕುಲ್ಲವಾಗಿ ತಿರಸ್ಕರಿಸಿದ್ದರು .
ಸ್ಥಳಕ್ಕೆ ತಿಪಟೂರು ಡಿವೈಎಸ್ಪಿ ಸಿದ್ದಾರ್ಥ್ ಗೋಯಲ್ ಹಾಗು ತಹಶೀಲ್ದಾರ್ ತೇಜಸ್ವಿನಿ ಪ್ರತಿಭಟನಾಕಾರರಿಗೆ ಪರಿಹಾರ ಹಾಗು ಭೂ ಸ್ವಾಧೀನ ಪ್ರಕ್ರಿಯೆ ಬಗ್ಗೆ ಸೂಕ್ತ ಮಾಹಿತಿ ನೀಡಿದರು. ಈ ವೇಳೆ ಸ್ಥಳೀಯರು ಸ್ಥಳೀಯ ಪೊಲೀಸರ ಮೇಲೆ ಸಾಕಷ್ಟು ಆರೋಪಗಳ ಸುರಿಮಳೆ ಗೈದರು ಇದಕ್ಕೆ ಸಿದ್ದಾರ್ಥ್ ಗೋಯಲ್ ನಿಮ್ಮ ದೂರನ್ನು ನನಗೆ ನೀಡಿ ಯಾವುದೇ ಮುಲಾಜಿಲ್ಲದೆ ಶಿಸ್ತು ಕ್ರಮ ಜರುಗಿಸುವುದಾಗಿ ಪ್ರತಿಭಟನಾಕಾರರಲ್ಲಿ ಮನವೊಲಿಸಿದರು. ಬಳಿಕ ಪ್ರತಿಭಟನೆಯೂ ಅಂತ್ಯಗೊಂಡಿತು.