ಸಖತ್ ನಿರೀಕ್ಷೆ ಮೂಡಿಸಿದ್ದ ‘ವಿಕ್ರಾಂತ್ ರೋಣ’ ಇಂದು (ಜುಲೈ 28) ಎಲ್ಲೆಡೆ ರಿಲೀಸ್ ಆಗಿದೆ. ಅಭಿಮಾನಿಗಳು ಮುಗಿಬಿದ್ದು ಈ ಸಿನಿಮಾವನ್ನು ನೋಡುತ್ತಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ಪಡೆದ ಪ್ರೇಕ್ಷಕರ ಸಡಗರ ಜೋರಾಗಿದೆ. ಕಿಚ್ಚ ಸುದೀಪ್ ಅವರ ನಟನೆ ಬಗ್ಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದ್ದೂರಿ ಮೇಕಿಂಗ್, 3ಡಿ ದೃಶ್ಯ ವೈಭವದ ಬಗ್ಗೆಯೂ ಉತ್ತಮ ಮಾತುಗಳು ಕೇಳಿಬರುತ್ತಿವೆ. ಹಾಗಾದರೆ ಚಿತ್ರ ಹೇಗಿದೆ? ಇಲ್ಲಿದೆ ವಿಕ್ರಾಂತ್ ರೋಣ ವಿಮರ್ಶೆ.
ಕಮರೊಟ್ಟು ಗ್ರಾಮ. ಇದು ಕರಾವಳಿಯಲ್ಲಿರುವ ಒಂದು ಕಾಲ್ಪನಿಕ ಊರು. ಇಲ್ಲಿ ಭೂತಾರಾಧಕರಿದ್ದಾರೆ. ಊರಿನಲ್ಲಿ ನಡೆಯುತ್ತಿರುವ ಮಕ್ಕಳ ಕೊಲೆಗೆ ಕಮರೊಟ್ಟು ಮನೆಯಲ್ಲಿ ವಾಸವಾಗಿರುವ ಬ್ರಹ್ಮ ರಾಕ್ಷಸ ಎಂದು ನಂಬಿದವರಿದ್ದಾರೆ. ಈ ಊರಿಗೆ ವಿಕ್ರಾಂತ್ ರೋಣ (ಸುದೀಪ್), ಸಂಜು (ನಿರೂಪ್ ಭಂಡಾರಿ) ಆಗಮನ ಆಗುತ್ತದೆ. ಆ ಕೊಲೆಗಳು ನಡೆಯುತ್ತಿರುವುದೇಕೆ? ವಿಕ್ರಾಂತ್ ರೋಣ, ಸಂಜುಗೂ ಕಥೆಗೂ ಏನು ಸಂಬಂಧ ಅನ್ನೋದನ್ನು ಸಿನಿಮಾದಲ್ಲಿ ಕಣ್ತುಂಬಿಕೊಳ್ಳಬೇಕು. ವಿಕ್ರಾಂತ್ ರೋಣಾ 147 ನಿಮಿಷಗಳ ಸಿನಿಮಾವಾಗಿದ್ದು, ಅದ್ಭುತ ಘಟನೆಗಳು, ಊಹಿಸಲಾಗದ ಟ್ವಿಸ್ಟ್ಗಳ ಜೊತೆ ಉತ್ತಮ ಅದರ ಛಾಯಾಗ್ರಹಣಕ್ಕಾಗಿ ಜನರಿಗೆ ಬಹಳ ಇಷ್ಟವಾಗಿದೆ, ಅನೂಪ್ ಭಂಡಾರಿ ಅವರ ಈ ಹಿಂದಿನ ರಂಗಿತರಂಗ ಸಿನಿಮಾ ನೋಡಿವರಿಗೆ ಅವರ ನಿರ್ದೇಶನದ ಬಗ್ಗೆ ಅರಿವಿರುತ್ತದೆ. ಒಂದು ಕಥೆಯನ್ನು ಸುಂದರವಾಗಿ ಹೇಳುವ ಕಲೆ ಅವರಲ್ಲಿದೆ. ಅದೇ ರೀತಿ ಈ ಸಿನಿಮಾ ಸಹ ಮೂಡಿ ಬಂದಿದೆ. ಸಿನಿಮಾದ ಬಹುತೇಕ ದೃಶ್ಯಗಳು ಸೆಟ್ನಲ್ಲೇ ಶೂಟ್ ಮಾಡಲಾಗಿದೆ. ಆದಾಗ್ಯೂ ಎಲ್ಲವೂ ನೈಜ ಎಂಬಂತಹ ಫೀಲ್ ಕೊಡುತ್ತದೆ. ಆರ್ಟ್ ಡೈರೆಕ್ಟರ್ ಶಿವಕುಮಾರ್ ಶ್ರಮ ಸಾರ್ಥಕ ಆಗಿದೆ. ಹಿನ್ನೆಲೆ ಸಂಗೀತ, ಸಂಗೀತ ಸಂಯೋಜನೆ ಮಾಡಿದ ಅಜನೀಶ್ ಲೋಕನಾಥ್ ಹಾಗು ಛಾಯಾಗ್ರಾಹಕ ವಿಲಿಯಮ್ ಡೇವಿಡ್ ಅವರ ಕೆಲಸ ಚಿತ್ರದ ಮೆರುಗನ್ನು ಹೆಚ್ಚಿಸಿದೆ. ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಬರುವ ಒಂದೇ ಶಾಟ್ನ ಫೈಟಿಂಗ್ ಮೈನವಿರೇಳಿಸುತ್ತದೆ. ನೀತಾ ಅಶೋಕ್, ರವಿಶಂಕರ್ ಗೌಡ, ವಾಸುಕಿ ವೈಭವ್, ರಮೇಶ್ ಕುಕ್ಕುವಲ್ಲಿ, ಚಿತ್ಕಲಾ ಬಿರಾದಾರ್ ಮೊದಲಾದವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್ ‘ರಾ ರಾ ರಕ್ಕಮ್ಮ’ ಹಾಡಿನಲ್ಲಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ, ರಂಗಿತರಂಗ ಶೇಡ್ ಸ್ವಲ್ಪ ಜಾಸ್ತಿ ಇದೆ. ಕೆಲ ಹಾಡು ದೃಶ್ಯಗಳು ಎಕ್ಸ್ಟ್ರಾ ಎನಿಸುತ್ತದೆ. ಆದರೂ ಅನೂಪ್ ಭಂಡಾರಿ ಸಕ್ಸಸ್ ಕಾಣುತ್ತಾರೆ ಎನ್ನೋದರಲ್ಲಿ ಅನುಮಾನವಿಲ್ಲ. ಪರಭಾಷೆಯ ಅನೇಕ ಸೆಲೆಬ್ರಿಟಿಗಳು ‘ವಿಕ್ರಾಂತ್ ರೋಣ’ ಚಿತ್ರಕ್ಕೆ ಶುಭ ಕೋರಿದ್ದಾರೆ. ರಾಜಮೌಳಿ, ಕಾರ್ತಿ ಮುಂತಾದವರು ಸುದೀಪ್ಗೆ ವಿಶ್ ಮಾಡಿದ್ದಾರೆ. ಕನ್ನಡದ ಚಿತ್ರ ಇಷ್ಟರಮಟ್ಟಿಗೆ ಸದ್ದು ಮಾಡ್ತಿದೆ ಅಂದ್ರೆ ಅದು ಹೆಮ್ಮೆಯ ವಿಷಯ.
ವಿಕ್ರಾಂತ್ ರೋಣ ಹೇಗಿದೆ? ಇಲ್ಲಿದೆ ಕಿಚ್ಚ ಬಾಸ್ ಸಿನಿಮಾ ವಿಮರ್ಶೆ
Previous Articleದಕ್ಷಿಣ ಕನ್ನಡ ಬಂದ್ ಸುದ್ದಿ ಹರಿದಾಟ: ಬಜರಂಗದಳದಿಂದ ಅಧಿಕೃತ ಸ್ಪಷ್ಟನೆ
Next Article Bjp ಮುಖಂಡನ ಹತ್ಯೆ: ಮಹತ್ವದ ಸುಳಿವು ಲಭ್ಯ..