ದಕ್ಷಿಣ ಕನ್ನಡ, ಜು.28-ಸಂಘ ಪರಿವಾರ ಹಾಗು ಬಿಜೆಪಿ ಕಾರ್ಯಕರ್ತರು ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ಬಿಜೆಪಿ ಯುವ ಮುಖಂಡ ಪ್ರವೀಣ್ ಕುಮಾರ್ ನೆಟ್ಟಾರು ಕೊಲೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಏಳು ಮಂದಿ ಎಸ್‍ಡಿಪಿಐ ಕಾರ್ಯಕರ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕೊಲೆ ಸಂಬಂಧಿಸಿದಂತೆ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ಆರಂಭಿಸಿ ಕೃತ್ಯದ ಪ್ರಮುಖ ಆರೋಪಿ ಸೇರಿದಂತೆ ಏಳು ಮಂದಿ ಎಸ್‍ಡಿಪಿಐ ಕಾರ್ಯಕರ್ತರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.
ಕೊಲೆ ಕೃತ್ಯ ನಡೆಸಿರುವ ಶಂಕೆಯ ಹಿನ್ನೆಲೆಯಲ್ಲಿ ಬೆಳ್ಳಾರೆ ಎಸ್‍ಡಿಪಿಐ ಕಾರ್ಯಕರ್ತರ ಮನೆಗೆ ನುಗ್ಗಿ ಏಳು ಮಂದಿ ಕಾರ್ಯಕರ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ನಡುವೆ ನಮ್ಮ ಏಳು ಮಂದಿ ಅಮಾಯಕ ಕಾರ್ಯಕರ್ತರನ್ನು ಪೊಲೀಸರು ಅಮಾಯಕರನ್ನು ವಶಪಡಿಸಿಕೊಂಡು ತೊಂದರೆ ನೀಡುತ್ತಿದ್ದಾರೆ ಎಂದು ಎಸ್‍ಡಿಪಿಐ ಆರೋಪಿಸಿದೆ.
ಕೃತ್ಯದ ಪ್ರಮುಖ ಆರೋಪಿಯು ಬೆಳ್ಳಾರೆಯ ಬೂಡು ಪ್ರದೇಶದ ನಿವಾಸಿಯಾಗಿದ್ದು, ವಿಚಾರಣೆ ವೇಳೆ ಕೊಲೆ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ತೀವ್ರವಾಗಿ ವಿಚಾರಣೆ ನಡೆಸುತ್ತಿರುವುದಾಗಿ ಮೂಲಗಳು ತಿಳಿಸಿವೆ.
ಪ್ರವೀಣ್ ಕೊಲೆಯು ಕೇರಳ ನಂಟು ಹೊಂದಿರುವ ಬಗ್ಗೆ ಇಲಾಖೆ ಪರಿಶೀಲನೆ ನಡೆಸುತ್ತಿದೆ. ಇದೇ ವೇಳೆ ವಾರದ ಹಿಂದೆ ಬೆಳ್ಳಾರೆಯಲ್ಲಿ ನಡೆದ ಕೇರಳ ಯುವಕನ ಹತ್ಯೆಗೆ ಪ್ರತೀಕಾರವಾಗಿ ಈ ಹತ್ಯೆ ನಡೆಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಕೊಲೆ ನಡೆಸಿದ ದುಷ್ಕರ್ಮಿಗಳು ಆಗಮಿಸಿದ್ದು ಕೇರಳ ನೋಂದಣಿಯ ದ್ವಿಚಕ್ರ ವಾಹನದಲ್ಲಿ ಎಂಬುದು ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೆ ಆ ವಾಹನದ ನೋಂದಣಿಯನ್ನು ಸರಿಯಾಗಿ ಗುರುತಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಈ ಘಟನೆಯ ಹಿಂದೆ ಕೇರಳದ ಮತಾಂಧ ಸಂಘಟನೆಗಳ ಕೈವಾಡ ಇರುವ ಬಗ್ಗೆ ಪೊಲೀಸ್ ಇಲಾಖೆ ಶಂಕಿಸಿದ್ದು, ಈ ನಿಟ್ಟಿನಲ್ಲಿ ತನಿಖೆ ತೀವ್ರಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ.
ತನಿಖೆ ಮೇಲೆ ತೀವ್ರ ನಿಗಾ:
ಪ್ರತಿ ಒಂದು ಗಂಟೆಗೊಮ್ಮೆ ಪ್ರಕರಣದ ಹೆಚ್ಚುವರಿ ಮಾಹಿತಿ ಸಂಗ್ರಹಿಸುತ್ತಿದ್ದು, ಆರೋಪಗಳನ್ನು ಟ್ರಾಕ್ ಮಾಡುತ್ತಿರುವುದಾಗಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ
ಹತ್ಯೆ ಬಳಿಕ ಆರೋಪಿಗಳು ಕೇರಳಕ್ಕೆ ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಅವರನ್ನು ಸೆರೆಹಿಡಿಯುವ ವಿಚಾರವಾಗಿ ಕೇರಳ ಡಿಜಿ-ಐಜಿಪಿ ಜತೆಗೆ ಮಾತುಕತೆ ನಡೆದಿದೆ ಎಂಬ ವಿವರಣೆ ಪ್ರವೀಣ್ ಸೂದ್ ನೀಡಿದ್ದಾರೆ.
ಪ್ರಕರಣದ ಅಪ್ಡೇಟ್‌ಗಳನ್ನು ತ್ವರಿತವಾಗಿ ನೀಡುವಂತೆ ಸೂಚಿಸಿ, ಫೋನ್ ಮೂಲಕ ಅಧಿಕಾರಿಗಳಿಂದ ಆರಗ ಜ್ಞಾನೇಂದ್ರ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
15ಕ್ಕೂ ಹೆಚ್ಚು ಮಂದಿ ವಶ:
ಬೆಳ್ಳಾರೆಯಲ್ಲಿ ಬೀಡು ಬಿಟ್ಟಿರುವ ಎಡಿಜಿಪಿ ಅಲೋಕ್ ಕುಮಾರ್ ಅವರು ಕೊಲೆ ಕೃತ್ಯದ ಬಗ್ಗೆ ಎಲ್ಲ ಆಯಾಮಗಳಿಂದ ತನಿಖೆ ನಡೆಯುತ್ತಿದೆ. ಮಂಗಳೂರು ಕಮಿಷನರ್ ಮತ್ತು ಉಡುಪಿ ಪೊಲೀಸರ ಸಹಾಯ ಪಡೆದು ಆರು ತಂಡಗಳನ್ನು ರಚನೆ ಮಾಡಿದ್ದೇವೆ. 15ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಸಂಸದರು, ಸಚಿವರುಗಳು ಸ್ಥಳಕ್ಕೆ ಬಂದಿದ್ದಾಗ ಜನರ ಭಾವಾವೇಶದಿಂದ ವಾಹನವನ್ನು ತಳ್ಳಲು ಪ್ರಯತ್ನ ಮಾಡಿದ್ದಾರೆ. ಪರಿಸ್ಥಿತಿ ಹತೋಟಿಗೆ ತರಲು ಲಘುಲಾಠಿ ಪ್ರಹಾರ ಮಾಡಬೇಕಾಯಿತು. ಜಿಲ್ಲಾಧಿಕಾರಿಗಳು ಸೆಕ್ಷನ್ 144 ಜಾರಿ ಮಾಡಿದ್ದಾರೆ, ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ. ಜನರು ಗುಂಪಾಗಿ ಓಡಾಡಬಾರದು. ಆರೋಪಿಗಳ ಪತ್ತೆಗೆ ಪೊಲೀಸ್ ಅಧಿಕಾರಿಗಳಿಗೆ ಅವಕಾಶ ಕೊಡಬೇಕು. ಹತ್ಯೆಗೆ 2- 3 ಕಾರಣಗಳು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಆರೋಪಿಗಳನ್ನು ದಸ್ತಗಿರಿ ಮಾಡಿದ ಮೇಲೆ ಹತ್ಯೆಗೆ ಕಾರಣ ತಿಳಿಸುತ್ತೇವೆ. ವಶಕ್ಕೆ ಪಡೆದವರೇ ಆರೋಪಿಗಳು ಎಂಬುದು ಸದ್ಯ ಹೇಳಲು ಸಾಧ್ಯವಿಲ್ಲ. ವಿಚಾರಣೆ ಹಂತದಲ್ಲಿ ನಾನು ಇಷ್ಟುಮಾತ್ರ ಹೇಳಬಲ್ಲೆ ಎಂದಿದ್ದಾರೆ. ಠಾಣೆಗೆ ಬಂದಿಳಿದ ತಕ್ಷಣ ಪೋಲಿಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಊಟ ಆಗಿದೆಯಾ ಎಂದು ಅಲೋಕ್ ಕುಮಾರ್ ವಿಚಾರಿಸಿದರು.
ಎನ್ಐಎಗೆ ಪತ್ನಿ ಒತ್ತಾಯ:
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸುವಂತೆ ಮೃತ ಪ್ರವೀಣ್ ಪತ್ನಿ ನೂತನಾ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನನ್ನ ಪತಿ ಯಾರಿಗೂ ಅನ್ಯಾಯ ಮಾಡಲಿಲ್ಲ, ಇಡೀ ಸಮಾಜಕ್ಕಾಗಿ ಅವರು ಬದುಕಿದ್ದರು. ನನ್ನ ಪತಿಯ ಕೊಲೆ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಬೇಕು. ಎನ್ಐಎ ತನಿಖೆಯಿಂದ ಮಾತ್ರ ನಮಗೆ ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.
ಭದ್ರತೆ ಪರಿಶೀಲನೆ:
ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ 7ನೇ ಪಡೆ ಕಮಾಂಡೆಂಟ್ ಬಿಎಂ ಪ್ರಸಾದ್ ಅವರು ಮೀಸಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಬೆಳ್ಳಾರೆಯಲ್ಲಿ ಭದ್ರತೆ ಪರಿಶೀಲಿಸಿದ ಕಮಾಂಡೆಂಟ್ ಬಿಎಂ ಪ್ರಸಾದ್, ಕಟ್ಟೆಚ್ಚರದಲ್ಲಿ ಇರುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.