ತುಮಕೂರು : ಬಯಲು ಸೀಮೆಯ ತುಮಕೂರು ಜಿಲ್ಲೆ ಈ ಬಾರಿ ವರುಣಾಘಾತದಿಂದ ತತ್ತರಿಸಿ ಹೋಗಿದೆ.ಅದರಲ್ಲೂ ಶಾಶ್ವತ ಬರಗಾಲ ಪೀಡಿತ ತಾಲೂಕು ಎಂದು ಗುರುತಿಸಲ್ಪಡುವ ಕೊರಟಗೆರೆ, ಮಧುಗಿರಿ ತಾಲೂಕಿನಲ್ಲಿ ಹಳ್ಳ,ತೊರೆ,ನದಿಗಳು ಉಕ್ಕಿ ಹರಿಯುತ್ತಿದ್ದು ಹಲವು ಗ್ರಾಮಗಳು ಪ್ರವಾಹ ಪೀಡಿತವಾಗಿವೆ.
ಸುಮಾರು ಮೂರು ದಶಕದ ನಂತರ ಈ ಪ್ರದೇಶದಲ್ಲಿ ಇಂತಹ ಮಳೆ ಸುರಿದಿದ್ದು ಸಾವಿರಾರು ಮನೆಗಳು ಕುಸಿದು ಹೋಗಿವೆ.ನೂರಾರು ಎಕರೆ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದು,ಮಲೆನಾಡಿನಂತೆ ಇಲ್ಲಿಯೂ ಜೀವಹಾನಿಯಾಗಿದೆ.
ಕೊರಟಗೆರೆ ತಾಲೂಕಿನಾದ್ಯಂತ ಅಬ್ಬರಿಸಿದ ಮಳೆಯ ಆರ್ಭಟದಿಂದ ಜಯಮಂಗಲಿ, ಗರುಡಾಚಲ ಸುವರ್ಣ ಮುಖಿ ನದಿಪಾತ್ರದ ಗ್ರಾಮಗಳ ಮನೆಗಳು ಮತ್ತು ಸಾವಿರಾರು ಎಕರೆ ಜಮೀನು ಜಲಾವೃತವಾಗಿದೆ. ಮೂರು ನದಿಗಳು ಹಾದು ಹೋಗುವ 40ಕ್ಕೂ ಅಧಿಕ ಸೇತುವೆಗಳು ಮಳೆ ನೀರಿನ ರಭಸಕ್ಕೆ ಮುಳುಗಿವೆ. ಕೊರಟಗೆರೆ ಕ್ಷೇತ್ರದ ನಾಲ್ಕು ದಿಕ್ಕಿನಲ್ಲಿಯೂ ಜಲಪ್ರಳಯದಂತಹ ವಾತಾವರಣ ಸೃಷ್ಟಿಯಾಗಿದೆ.
ನದಿಪಾತ್ರದ ಬಿ.ಡಿ.ಪುರ, ಲಂಕೇನಹಳ್ಳಿ, ತೀತಾ, ದುಗ್ಗೆನಹಳ್ಳಿ, ಮಲಪನಹಳ್ಳಿ, ಅಕ್ಕಿರಾಂಪುರ, ಚೀಲಗಾನಹಳ್ಳಿ, ಚನ್ನಸಾಗರ, ಗುಂಡಿನಪಾಳ್ಯ, ಕೋಡ್ಲಹಳ್ಳಿ, ದಾಸಾಲುಕುಂಟೆ ಸೇರಿದಂತೆ 40ಕ್ಕೂ ಅಧಿಕ ಕಡೆ ಸೇತುವೆಗಳು ಜಲಾವೃತವಾಗಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ.
ಈ ಸಮಸ್ಯೆಯಿಂದಾಗಿ 180ಕ್ಕೂ ಅಧಿಕ ಗ್ರಾಮಗಳ ಜನರ ಸಂಚಾರಕ್ಕೆ ಮಳೆಯಿಂದ ಹಿಂದೆಂದೂ ಕಾಣದಂತಹ ನೂರಾರು ಸಮಸ್ಯೆಗಳು ಸೃಷ್ಟಿಯಾಗಿದೆ. ಅಂತೆಯೇ ಕೊರಟಗೆರೆ ಕ್ಷೇತ್ರದಾದ್ಯಂತ ಹೈಅಲರ್ಟ್ ಘೋಷಣೆಯಾಗಿದೆ. ಮಳೆ ನೀರಿನ ರಭಸಕ್ಕೆ ಹಾನಿ ಆಗಿರುವ ಪ್ರದೇಶಗಳನ್ನು ಗುರುತಿಸುವುದೇ ಅಧಿಕಾರಿಗಳಿಗೆ ಕಷ್ಟವಾಗಿದೆ.