ಬೆಂಗಳೂರು, ಮಾ.25: ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆ ಪರಿಹಾರಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಕುಮಾರಸ್ವಾಮಿ ಇದೀಗ ಲೋಕಸಭೆ ಚುನಾವಣೆಯ ಅಖಾಡಕ್ಕೆ ಧುಮಕಲು ಸಜ್ಜಾಗಿದ್ದಾರೆ.
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಗೆ ಹಾಸನ ಮಂಡ್ಯ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಡಲಾಗಿದೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ದೇವೇಗೌಡರ ಕುಟುಂಬದ ಸದಸ್ಯ ಡಾ.ಮಂಜುನಾಥ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಹಾಸನ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಕಣಕ್ಕಿಳಿಯಲಿದ್ದಾರೆ ಎಂದು ಈಗಾಗಲೇ ಘೋಷಿಸಲಾಗಿದೆ , ಕೋಲಾರ ಮೀಸಲು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಹಲವು ಆಕಾಂಕ್ಷಿಗಳು ಮನವಿ ಸಲ್ಲಿಸಿದ್ದರು ಈ ಕುರಿತಂತೆ ಸಮೀಕ್ಷೆಗಳ ವರದಿ ಮತ್ತು ಸ್ಥಳೀಯರ ಅಭಿಪ್ರಾಯ ಆಧರಿಸಿ ಯುವ ಮುಖಂಡ ಮಲ್ಲೇಶ್ ಬಾಬು ಅವರನ್ನು ಕಣಕ್ಕಿಳಿಸಲು ಜೆಡಿಎಸ್ ನಾಯಕರು ತೀರ್ಮಾನಿಸಿದ್ದಾರೆ.
ಈ ಕುರಿತಂತೆ ಪಕ್ಷದ ಅಧಿಕೃತ ನಿರ್ಧಾರವನ್ನು ಪ್ರಕಟಿಸುವ ಸಲುವಾಗಿ ನಾಳೆ ಜೆಡಿಎಸ್ ಕೋರ್ ಕಮಿಟಿ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಮೂಗು ಲೋಕಸಭಾ ಕ್ಷೇತ್ರಗಳ ಕುರಿತಂತೆ ಚರ್ಚೆ ನಡೆಯಲಿದ್ದು ಅಭ್ಯರ್ಥಿಗಳ ಘೋಷಣೆಯನ್ನು ಅಧಿಕೃತವಾಗಿ ಮಾಡಲಾಗುತ್ತಿದೆ.
ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಕುಮಾರಸ್ವಾಮಿ ಅವರನ್ನು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಬೇಕು ಎಂದು ಪಕ್ಷದ ಮುಖಂಡರು ಪ್ರಬಲ ಒತ್ತಡ ಹೇರುತ್ತಿದ್ದಾರೆ. ಬಿಜೆಪಿ ನಾಯಕರು ಕೂಡ ಈ ಕ್ಷೇತ್ರದಿಂದ ಕುಮಾರಸ್ವಾಮಿ ಸ್ಪರ್ಧೆ ಮಾಡಿದರೆ ಅನುಕೂಲವಾಗಲಿದೆ ಎಂದು ಹೇಳಿದ್ದು ಇದನ್ನು ಕುಮಾರಸ್ವಾಮಿ ನಿರಾಕರಿಸಿದ್ದರು.
ಹಾಸನದಲ್ಲಿ ಈಗಾಗಲೇ ಜೆಡಿಎಸ್ ನ ರೇವಣ್ಣ ಅವರ ಪುತ್ರ ಕಣಕ್ಕಿಳಿದಿದ್ದಾರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ದೇವೇಗೌಡರ ಅಳಿಯ ಡಾ. ಮಂಜುನಾಥ್ ಕಣದಲ್ಲಿದ್ದಾರೆ ಹೀಗಿರುವಾಗ ಮಂಡ್ಯದಿಂದ ತಾವು ಸ್ಪರ್ಧೆ ಮಾಡಿದರೆ ಜೆಡಿಎಸ್ ಒಂದೇ ಕುಟುಂಬದ ಪಕ್ಷ ಎಂದು ಟೀಕೆ ಮಾಡುವವರಿಗೆ ದೊಡ್ಡ ಆಹಾರ ಸಿಗುತ್ತದೆ ಎಂದು ಸ್ಪಷ್ಟಪಡಿಸಿದ್ದರು.
ಆದರೆ ಬಿಜೆಪಿ ಹೈಕಮಾಂಡ್ ಇಂತಹ ಯಾವುದೇ ಟೀಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಬೇಕು ಇದಕ್ಕೆ ನಿಮ್ಮ ಸ್ಪರ್ಧೆ ಅನುಕೂಲವಾಗಲಿದೆ ಹೀಗಾಗಿ ಮಂಡ್ಯದಿಂದ ಕಣಕ್ಕಿಳಿಯಬೇಕು ಎಂದು ಒತ್ತಡ ಸೇರಿದ್ದರು ಈ ಹಿನ್ನೆಲೆಯಲ್ಲಿ ಇದೀಗ ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂದು ಗೊತ್ತಾಗಿದೆ.
ಕುಮಾರಸ್ವಾಮಿ ಅವರು ಲೋಕಸಭೆಗೆ ಸ್ಪರ್ಧಿಸುವ ಕುರಿತಂತೆ ನಾಳೆ ತಮ್ಮ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆ ಇದೆ.