ಬೆಂಗಳೂರು,ಜ.30 :
ರಾಜಕೀಯ ಕಾರಣಗಳಿಗಾಗಿ ಶೋಷಿತರ ಜಾಗೃತಿ ಸಮಾವೇಶ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿಜವಾಗಿ ಶೋಷಿತರ ಬಗ್ಗೆ ಕಾಳಜಿಯಿದ್ದಲ್ಲಿ ಈವರೆಗೆ ಮೀಸಲು ಸೌಲಭ್ಯವನ್ನು ಯಾರೆಲ್ಲಾ ಪಡೆದುಕೊಂಡಿದ್ದಾರೆ ಎಂಬ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2ಎ ಮೀಸಲು ವ್ಯಾಪ್ತಿಯಲ್ಲಿ ಸುಮಾರು 108 ಉಪ ಜಾತಿಗಳು ಇವೆ. ಆದರೆ,ಇದರಲ್ಲಿ ಮೀಸಲಾತಿ ಸೌಲಭ್ಯದ ಸಿಂಹಪಾಲು ಯಾರ ಪಾಲಾಗಿದೆ ಎಂಬ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ, ಆಮೇಲೆ ಕಾಂತರಾಜು ವರದಿ, ಇನ್ನೊಂದು ವರದಿಯ ಬಗ್ಗೆ ಮಾತನಾಡಿ ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂತರಾಜು ವರದಿ ಹಿಡಿದುಕೊಂಡು ಪ್ರತಿದಿನ ಭಾಷಣ ಮಾಡುತ್ತಿದ್ದಾರೆ. ಕುಮಾರಸ್ವಾಮಿ, ಬೊಮ್ಮಾಯಿ, ಯಡಿಯೂರಪ್ಪ ಈ ವರದಿಯನ್ನು ಸ್ವೀಕಾರ ಮಾಡಲಿಲ್ಲ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಈಗ ನೀವು ಅಧಿಕಾರಕ್ಕೆ ಬಂದು ಒಂದು ವರ್ಷ ಆಯಿತು. ಯಾಕೆ ಆ ವರದಿಯನ್ನು ಸ್ವೀಕಾರ ಮಾಡಿ ಜಾರಿ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರಕ್ಕೆ ಪೂರ್ಣ ಬಹುಮತವಿದೆ. ಹೀಗಿರುವಾಗ ಕಾಂತರಾಜು ವರದಿ ಸ್ವೀಕರಿಸಲು ಯಾರು ಅಡ್ಡ ಇದಾರೆ. ನಿಮಗೆ ತಾಕತ್ತು ಇದ್ದರೆ ಆ ವರದಿ ಸ್ವೀಕರಿಸಿ ಜಾರಿ ಮಾಡಿ ಎಂದು ಸವಾಲು ಹಾಕಿದರು.
ಒಬ್ಬ ಕುರಿ ಕಾಯುವವನ ಮಗ ಸಿಎಂ ಆದ ಅಂತಾ ನನ್ನ ಮೇಲೆ ವಿಷ ಕಾರ್ತಾರೆ ಅಂತ ಅಳಲು ತೋಡಿಕೊಂಡಿದ್ದಾರೆ. ಕುರಿ ಕಾಯುವ ಮಗನನ್ನೇ ಅಂದು ದೇವೇಗೌಡರು ಆರ್ಥಿಕ ಸಚಿವರನ್ನಾಗಿ ಮಾಡಿದ್ದರು. ನಿಮ್ಮ ಇಷ್ಟು ವರ್ಷದ ರಾಜಕೀಯದಲ್ಲಿ ಎಷ್ಟು ಸಲ ಸಚಿವರಾದಿರಿ, ಮುಖ್ಯಮಂತ್ರಿ ಆದಿರಿ, ಉಪ ಮುಖ್ಯಮಂತ್ರಿ ಆದಿರಿ. ಜಾತಿವ್ಯವಸ್ಥೆ, ಶೋಷಣೆ ಅಂತ್ಯ ಮಾಡಲು ಅವಕಾಶ ಇತ್ತು ನಿಮಗೆ, ಯಾಕೆ ಮಾಡಲಿಲ್ಲ? ಎಂದು ಪ್ರಶ್ನಿಸಿದರು.
ಸಮಾಜವನ್ನು ಒಡೆಯುವ ರಾಜಕಾರಣ ನಿಲ್ಲಿಸಿ. ಎಷ್ಟು ದಿನ ಅಧಿಕಾರದಲ್ಲಿ ಇರ್ತೀರಾ? ಕದ್ದುಮುಚ್ಚಿ ನಿಮ್ಮ ಹಾಗೆ ರಾಜಕೀಯ ಮಾಡೋನಲ್ಲ ನಾನು. ನೇರವಾಗಿಯೇ ನಾನು ಬಿಜೆಪಿ ಜತೆ ಕೈ ಜೋಡಿಸಿದ್ದೇನೆ. ನಿಮ್ಮ ಹಾಗೆ ಹೊಂದಾಣಿಕೆ ರಾಜಕಾರಣ ಮಾಡಲ್ಲ ನಾನು. ಜನಪರ ತೀರ್ಮಾನಗಳು ಇದ್ದರೆ ನಾವು ಕೂಡ ಬೆಂಬಲ ಕೊಡುತ್ತೇವೆ. ಕಮೀಷನ್ ಹೊಡೆಯುವುದು ನಿಲ್ಲಿಸಿ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದರು.
ಕುಡಿಯುವ ನೀರಿನ ಜಾಗಕ್ಕೆ ಹಸುವನ್ನು ಬಿಟ್ಟರೆ ಅದು ನೀರನ್ನೂ ಕುಡಿದು ಅದನ್ನು ಕಲಕದೇ ಹೋಗುತ್ತದೆ. ಆದರೆ, ಅದೇ ಜಾಗಕ್ಕೆ ಕೋಣವನ್ನು ಬಿಟ್ಟರೆ ನೀರನ್ನು ಕುಡಿದು ಬೇರೆ ಯಾರೂ ಕುಡಿಯದ ರೀತಿ ಆ ನೀರನ್ನು ರಾಡಿ ಎಬ್ಬಿಸಿ ಹೋಗುತ್ತದೆ. ಕಾಂಗ್ರೆಸ್ ಕೋಣದ ರೀತಿ ಎಂದು ಲೇವಡಿ ಮಾಡಿದರು.
ಈಗ ಎಲ್ಲರೂ ಕಾಂಗ್ರೆಸ್ ಬಿಟ್ಟು ಹೋಗುತ್ತಿದ್ದಾರೆ. ನಿತೀಶ್ ಆಯಿತು, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ಅರವಿಂದ್ ಕೇಜ್ರಿವಾಲ್ ಯಾರಿಗೂ ಆ ಪಕ್ಷದ ಸಹವಾಸ ಬೇಡವಾಗಿದೆ. ಇವರ ನಡವಳಿಕೆ ನೋಡಿ ಎಲ್ಲರೂ ಬೇಸತ್ತು ಒಬ್ಬೊಬ್ಬರಾಗಿ ಹೋಗ್ತಾ ಇದಾರೆ ಎಂದು ಹೇಳಿದರು.