ಬೆಂಗಳೂರು – ಲೋಕಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಉಂಟಾಗಿದ್ದ ಬಿಕ್ಕಟ್ಟು ಬಗೆಹರಿದಿದೆ. ತಮ್ಮ ಬಣಕ್ಕೆ ಟಿಕೆಟ್ ನೀಡಬೇಕು ರಾಜೀನಾಮೆಯ ಬೆದರಿಕೆ ಹಾಕಿದ್ದ ಸಚಿವರು ಹಾಗೂ ಶಾಸಕರು, ಸಚಿವ ಕೆ.ಎಚ್. ಮುನಿಯಪ್ಪ ಕುಟುಂಬದ ಹೊರತಾಗಿ ಎಡಗೈ ಸಮುದಾಯದ ಯಾರಿಗಾದರೂ ಟಿಕೆಟ್ ನೀಡಲು ಒಪ್ಪಿಕೊಂಡಿದ್ದಾರೆ. ಇದರಿಂದಾಗಿ ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂಬಂತೆ ಈ ಕ್ಷೇತ್ರದ ಟಿಕೆಟ್ ಈಗ ಬೆಂಗಳೂರಿನ ಕಾಂಗ್ರೆಸ್ ಮುಖಂಡನ ಪಾಲಾಗಿದೆ.
ಈ ಕ್ಷೇತ್ರದಿಂದ ರಾಜ್ಯಸಭೆಯ ಮಾಜಿ ಸದಸ್ಯ ಎಲ್. ಹನುಮಂತಯ್ಯ ಅವರನ್ನು ಆಯ್ಕೆ ಮಾಡುವ ಕುರಿತು ಚರ್ಚೆ ನಡೆಯಿತು. ಆದರೆ, ಸಂಪನ್ಮೂಲ ಸೇರಿದಂತೆ ಹಲವು ಕಾರಣದಿಂದ ಇವರನ್ನು ಕಣಕ್ಕೆ ಇಳಿಸುವುದು ಅಷ್ಟು ಅನುಕೂಲಕರವಲ್ಲ ಎಂಬ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಈ ಪ್ರಸ್ತಾಪ ಕೈಬಿಡಲಾಯಿತು.
ಇದಾದ ನಂತರ ಎಲ್ಲರ ಅಭಿಪ್ರಾಯ ಪಡೆದು ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಪರಿಶಿಷ್ಟ ಜಾತಿ ಎಡಗೈ ಸಮುದಾಯಕ್ಕೆ ಸೇರಿದ ಕೆ.ವಿ.ಗೌತಮ್ ಅವರನ್ನು ಅಭ್ಯರ್ಥಿ ಯಾಗಿ ಆಯ್ಕೆ ಮಾಡಲಾಯಿತು.
ಕೆ.ವಿ.ಗೌತಮ್ ಬೆಂಗಳೂರಿನ ಮಾಜಿ ಮೇಯರ್ ಕೆ.ವಿಜಯಕುಮಾರ್ ಅವರ ಮಗ. ಕೋಲಾರ ಮೂಲದವರಾದ ಇವರು ಬೆಂಗಳೂರಿನಲ್ಲಿ ಹಲವಾರು ವರ್ಷಗಳಿಂದ ನೆಲೆಸಿದ್ದಾರೆ ಕೆ ವಿಜಯಕುಮಾರ್ ಕಾಂಗ್ರೆಸ್ಸಿನ ನಿಷ್ಠಾವಂತ ಕಾರ್ಯಕರ್ತರಾಗಿದ್ದು ಪಕ್ಷದ ಸಂಘಟನೆಯ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ ಈ ಹಿನ್ನೆಲೆಯಲ್ಲಿ ಅವರ ಪುತ್ರನನ್ನು ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಸಲು ತೀರ್ಮಾನಿಸಲಾಗಿದ್ದು ಇದಕ್ಕೆ ಎಲ್ಲ ಬಣಗಳು ಒಮ್ಮತ ಸೂಚಿಸಿವೆ.

