ಬೆಂಗಳೂರು,ಮೇ.17– ಪ್ರಿಯಕರನಿಗಾಗಿ ಮನೆಯಲ್ಲಿದ್ದ ತಾಯಿಯ ಸುಮಾರು 1ಕೆಜಿ ಚಿನ್ನಾಭರಣವನ್ನು ಕಳವು ಮಾಡಿ ರೋಲ್ಡ್ ಗೋಲ್ಡ್ ಚಿನ್ನವನ್ನು ತಂದಿಟ್ಟಿದ್ದ ಐನಾತಿ ಮಗಳು ಆಕೆಯ ಪ್ರಿಯತಮನನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಅಮೃತಹಳ್ಳಿಯ ಜಕ್ಕೂರು ಲೇಔಟ್ ರತ್ನಮ್ಮ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿ ಮಗಳು ದೀಪ್ತಿ ಹಾಗು ಮದನ್ ನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ ಎಂದು ಡಿಸಿಪಿ ಡಾ.ಅನೂಪ್ ಶೆಟ್ಟಿ ಅವರು ತಿಳಿಸಿದ್ದಾರೆ.
ಬಂಧಿತರಿಂದ 36 ಲಕ್ಷ ಮೌಲ್ಯದ 725 ಗ್ರಾಂ ತೂಕದ ವಿವಿಧ ಚಿನ್ನದ ಆಭರಣಗಳು ಕಳವು ಮಾಡಿದ ಆಭರಣಗಳ ಮಾರಾಟದಿಂದ ಬಂದ ಹಣದಿಂದ ಖರೀದಿಸಿದ್ದ ಸುಮಾರು 6 ಲಕ್ಷ ರೂ ಬೆಲೆಬಾಳುವ 3 ಕಾರುಗಳನ್ನು
ವಶಪಡಿಸಿಕೊಳ್ಳಲಾಗಿದೆ. ಜಕ್ಕೂರು ಲೇಔಟ್ನಲ್ಲಿ ರತ್ನಮ್ಮ ಹಾಗು ಪುತ್ರಿ ದೀಪ್ತಿ ವಾಸವಾಗಿದ್ದರು. ರತ್ನಮ್ಮ ಟೈಲರ್ ಕೆಲಸ ಮಾಡುತ್ತಿದ್ದರೆ, ಪುತ್ರಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದಳು. ಈಗಾಗಲೇ ವಿವಾಹವಾಗಿದ್ದ ದೀಪ್ತಿಗೆ ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದಳು. ಈ ನಡುವೆ ಡ್ರೈವಿಂಗ್ ಕಲಿಯಲು ಮದನ್ ನಡೆಸುತ್ತಿದ್ದ ಡೈವಿಂಗ್ ಸ್ಕೂಲ್ಗೆ ದೀಪ್ತಿ ಸೇರಿಕೊಂಡಿದ್ದಳು. ಇಲ್ಲಿ ಶುರುವಾದ ಸ್ನೇಹ ಪ್ರೀತಿಗೆ ತಿರುಗಿದೆ. ಮದನ್ಗೆ ಮದುವೆಯಾಗಿ ಇಬ್ಬರೂ ಮಕ್ಕಳಿದ್ದರೂ ದೀಪ್ತಿ ಪ್ರೀತಿಗೆ ಸೈ ಅಂದಿದ್ದ. ಮದನ್ ಪ್ರೀತಿಗೆ ಶರಣಾಗಿದ್ದ ದೀಪ್ತಿ, ಪ್ರಿಯಕರನ ಅಣತಿಯಂತೆ ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದಾಳೆ.
ಹಂತ-ಹಂತವಾಗಿ ಸುಮಾರು ಒಂದು ಕೆ.ಜಿ.ಚಿನ್ನ ಕಳ್ಳತನ ಮಾಡಿ ಕೊಟ್ಟಿದ್ದ ದೀಪ್ತಿ ತಾಯಿಗೆ ಅನುಮಾನ ಬಾರದಿರಲು ಕದ್ದ ಜಾಗದಲ್ಲಿ ನಕಲಿ ಚಿನ್ನಾಭರಣ ಇಟ್ಟಿದ್ದಾಳೆ. ಕೆಲ ದಿನಗಳ ಹಿಂದೆ ಮದುವೆ ಸಲುವಾಗಿ ಒಡವೆ ಧರಿಸಿಕೊಳ್ಳಲು ಬೀರುವಿನಲ್ಲಿ ನೋಡಿದಾಗ ಚಿನ್ನಾಭರಣದಲ್ಲಿ ವ್ಯತ್ಯಾಸ ಕಂಡುಬಂದಿದೆ.
ಈ ಬಗ್ಗೆ ಮಗಳನ್ನು ಪ್ರಶ್ನಿಸಿದಾಗ ಗೊತ್ತಿಲ್ಲದಂತೆ ನಟಿಸಿದ್ದಾಳೆ. ಇದರಿಂದ ಅನುಮಾನಗೊಂಡು ಆಗಾಗ ಮನೆಗೆ ಬರುತ್ತಿದ್ದ ಮದನ್ ಹಾಗು ಮಗಳ ವಿರುದ್ಧ ತಾಯಿ ಅಮೃತಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಚಿನ್ನಾಭರಣ ಕದ್ದಿರುವುದನ್ನು ಇಬ್ಬರೂ ಒಪ್ಪಿಕೊಂಡಿದ್ದಾರೆ. ಕದ್ದ ಚಿನ್ನವನ್ನು ಮುತ್ತೂಟ್ ಗೋಲ್ಡ್ ಲೋನ್ ಹಾಗು ಮಣಪ್ಪುರಂ ಗೋಲ್ಡ್ನಲ್ಲಿ ಅಡಮಾನ ಇಟ್ಟಿದ್ದು, ಅದರಿಂದ ಬಂದ ಹಣದಲ್ಲಿ ಇಬ್ಬರು ಮೋಜು ಮಸ್ತಿ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.
Previous Articleಮೂರು ಹುಲಿಮರಿಗಳನ್ನು ಸಾಕುತ್ತಿದೆ ಈ ಲ್ಯಾಬ್ರಡಾರ್!
Next Article ಕೈ ಗಳಿಗೆ ಕೋಳ ಹಾಕಿ.