ಬೆಂಗಳೂರು – ರಸ್ತೆ ಅಪಘಾತದಲ್ಲಿ ಆಶ್ಚರ್ಯಕರ ರೀತಿಯಲ್ಲಿ ಬಚಾವಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರ ಗ್ರಹಚಾರ ಸರಿ ಇಲ್ಲ ಎಂಬಂತೆ ಕಾಣುತ್ತದೆ. ನಿನ್ನೆಯಷ್ಟೇ ರಸ್ತೆ ಅಪಘಾತದಲ್ಲಿ ಬಚಾವಾದ ಅವರಿಗೆ ಜನ ಪ್ರತಿನಿಧಿಗಳ ಕೋರ್ಟ್ ಆಘಾತಕಾರಿ ತೀರ್ಪು ನೀಡಿದೆ.
ಚೆಕ್ ಬೌನ್ಸ್ ಪ್ರಕರಣವೊಂದರ ಕುರಿತು ಸಚಿವ ಮಧು ಬಂಗಾರಪ್ಪನವರ ವಿರುದ್ಧ ತೀರ್ಪು ನೀಡಿರುವ ಕರ್ನಾಟಕದ ಜನಪ್ರತಿನಿಧಿ ನ್ಯಾಯಾಲಯ, ಮಧು ಬಂಗಾರಪ್ಪನವರಿಗೆ 6 ಕೋಟಿ 96 ಲಕ್ಷದ 70 ಸಾವಿರ ರೂ.ಗಳ ದಂಡ ವಿಧಿಸಿದೆ. ತಪ್ಪಿದರೆ 6 ತಿಂಗಳುಗಳ ಸೆರೆವಾಸ ಅನುಭವಿಸಬೇಕು ಎಂದು ತೀರ್ಪು ನೀಡಿದೆ. ಸುಮಾರು 12 ವರ್ಷಗಳ ಹಿಂದಿನ ಪ್ರಕರಣ ಎನ್ನಲಾಗಿದೆ.
ಮಧು ಬಂಗಾರಪ್ಪ ಅವರು ಸಕ್ರಿಯ ರಾಜಕಾರಣಕ್ಕೆ ಬರುವ ಮುನ್ನ ಸಿನಿಮಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು, ಸಿನಿಮಾ ವಿತರಣೆ,ಆಡಿಯೋ ನಿರ್ಮಾಣ ಮೊದಲಾದ ವ್ಯವಹಾರದಲ್ಲಿ ತೊಡಗಿದ್ದರು ಇದಕ್ಕಾಗಿ ಆಕಾಶ್ ಆಡಿಯೋ ಸಂಸ್ಥೆ
ಸ್ಥಾಪಿಸಿ ಅದರ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಆ ಸಂಸ್ಥೆಯಿಂದ ರಾಜೇಶ್ ಎಕ್ಸ್ ಪೋರ್ಟ್ಸ್ ಅವರಿಗೆ 6 ಕೋಟಿ, 96 ಲಕ್ಷದ 60 ಸಾವಿರ ರೂ. ಸಂದಾಯವಾಗಬೇಕಿತ್ತು. ಹಲವಾರು ದಿನಗಳಿಂದ ಬಾಕಿ ಉಳಿಸಿಕೊಂಡಿದ್ದ ಹಣವನ್ನು ಮಧು ಬಂಗಾರಪ್ಪನವರು ಚೆಕ್ ನೀಡಿದ್ದರು. ಆದರೆ, ಅದು ಬೌನ್ಸ್ ಆಗಿತ್ತು. ಇದರಿಂದ, ರಾಜೇಶ್ ಎಕ್ಸ್ ಪೋರ್ಟ್ಸ್ ಸಂಸ್ಥೆಯು ಅವರ ವಿರುದ್ಧ ಪ್ರಕರಣ ದಾಖಲಿಸಿತ್ತು. ಆಗಿನಿಂದ ವಿಚಾರಣೆ ನಡೆಯುತ್ತಿದ್ದ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ತೀರ್ಪು ಹೊರಬಿದ್ದಿದೆ.
ತೀರ್ಪು ಪ್ರಕಟಿಸಿದ ನ್ಯಾಯಾಲಯ, ಮಧು ಬಂಗಾರಪ್ಪನವರು ಒಟ್ಟು 6 ಕೋಟಿ, 96 ಲಕ್ಷದ 70 ಸಾವಿರ ರೂ.ಗಳನ್ನು ದಂಡವನ್ನಾಗಿ ಕಟ್ಟಬೇಕು. ಅದರಲ್ಲಿ ಅವರು 6 ಕೋಟಿ, 96 ಲಕ್ಷದ, 60 ಸಾವಿರ ರೂ.ಗಳನ್ನು ಫಿರ್ಯಾದುದಾರರಾದ ರಾಜೇಶ್ ಎಕ್ಸ್ ಪೋರ್ಟ್ಸ್ ಅವರಿಗೆ ನೀಡಬೇಕು. ಉಳಿದ 10 ಸಾವಿರ ರೂ.ಗಳನ್ನು ಸರ್ಕಾರಕ್ಕೆ ದಂಡದ ರೂಪದಲ್ಲಿ ಕಟ್ಟಬೇಕು ಎಂದು ಹೇಳಿದೆ. ಈ ಎಲ್ಲಾ ಪ್ರಕ್ರಿಯೆಗಳಿಗೆ ತಪ್ಪಿದರೆ 6 ತಿಂಗಳ ಕಾರಾಗೃಹ ವಾಸವನ್ನು ಅನುಭವಿಸಬೇಕು ಎಂದು ಹೇಳಿದೆ.
ವಿಚಾರಣೆ ವೇಳೆ ಮಧು ಬಂಗಾರಪ್ಪ ಪರ ವಕೀಲರು ಕೋರ್ಟ್ ನಲ್ಲಿ ಮುಚ್ಚಳಕೆಯೊಂದನ್ನು ಸಲ್ಲಿಸಿದರು. ಸದ್ಯಕ್ಕೆ 50 ಲಕ್ಷ ರೂ. ಗಳನ್ನು ಈಗ ಫಿರ್ಯಾದುದಾರರಿಗೆ ಪಾವತಿಸಿ, ಉಳಿದ 6 ಕೋಟಿ, 10 ಸಾವಿರ ರೂಗಳನ್ನು ಜ. 30ರೊಳಗೆ ಕೊಡುವುದಾಗಿ ಅದರಲ್ಲಿ ತಿಳಿಸಿದ್ದರು. ಆದರೆ, ಅದನ್ನು ನ್ಯಾಯಾಲಯ ಒಪ್ಪಿಕೊಳ್ಳಲಿಲ್ಲ. ಈ ಹಿಂದೆಯೂ ಇಂಥದ್ದೇ ಮುಚ್ಚಳಿಕೆಯನ್ನು ಬರೆದುಕೊಟ್ಟು ಅದನ್ನು ಮಧು ಬಂಗಾರಪ್ಪನವರು ಪಾಲಿಸಿಲ್ಲ. ಹಾಗಾಗಿ, ಈ ಬಾರಿ ಮುಚ್ಚಳಿಕೆಯನ್ನು ಒಪ್ಪಲಾಗದು ಎಂದು ಹೇಳಿದ ನ್ಯಾಯಾಧೀಶರು, ದಂಡ ವಿಧಿಸಿ ಆದೇಶ ಹೊರಡಿಸಿದರು.