ಬೆಂಗಳೂರು, ಸೆ.30- ಪ್ರಗತಿಪರ ಸಾಹಿತಿಗಳಿಗೆ ಸಾಲು ಸಾಲು ಬೆದರಿಕೆ ಪತ್ರ ಬರೆದಿದ್ದ ಚಾಲೆಂಜ್ ಅಗಿದ್ದ ಪ್ರಕರಣವನ್ನು ಸಿಸಿಬಿ ಪೊಲೀಸರು ಬೇಧಿಸಿದ್ದಾರೆ.
ಕೋಮು ಸಂಘರ್ಷ,ಅಸಹನೆ, ಧರ್ಮದ ಹೆಸರಲ್ಲಿ ನಡೆಯುತ್ತಿದ್ದ ವಿದ್ಯಮಾನಗಳ ವಿರುದ್ಧ ದನಿ ಎತ್ತುತ್ತಿದ್ದ ಸಾಹಿತಿ,ಕಲಾವಿದರು, ವಿಚಾರವಾಧಿಗಳಿಗೆ ಬೆದರಿಕೆ ಪತ್ರ ತಲುಪುತ್ತಿತ್ತು.ಅಂಚೆ ಮೂಲಕ ರಾಜ್ಯದ ಬೇರೆ ಬೇರೆ ಪ್ರದೇಶಗಳಿಂದ ಬರುತ್ತಿದ್ದ ಈ ಪತ್ರಗಳು ಆತಂಕ ಸೃಷ್ಟಿಸಿದ್ದವು.
ಇದಾವುದೋ ಸಂಘನಾತ್ಮಕ ಕೆಲಸವಾಗಿದೆ ಎಂದು ಪರಿಗಣಿಸಿದ ನೂತನ ಸರ್ಕಾರ ಇದನ್ನು ತ್ವರಿತವಾಗಿ ಪತ್ತೆ ಹಚ್ಚಲು ಪೊಲೀಸರಿಗೆ ತಾಕೀತು ಮಾಡಿತ್ತು ಇದನ್ನು ಗಂಭೀರವಾಗಿ ಪರಿಗಣಿಸಿದ ಗೃಹ ಇಲಾಖೆ ಪ್ರಕರಣವನ್ನು ಸಿಸಿಬಿಗೆ ಹಸ್ತಾಂತರ ಮಾಡಿತ್ತು.
ಕಳೆದ ಎರಡು ವರ್ಷಗಳಿಂದ ಸವಾಲಾಗಿದ್ದ ಪ್ರಕರಣ ಬೇಧಿಸಿರುವ ಸಿಸಿಬಿ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ ದಾವಣಗೆರೆ ಮೂಲದ ಶಿವಾಜಿ ರಾವ್ ನನ್ನು ನಗರ ಪೊಲೀಸರು ತೀವ್ರ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸ ತೊಡಗಿದ್ದಾರೆ.
ಸಿಸಿಬಿ ಪೊಲೀಸರು ಬಂಧಿಸುವ ದಾವಣಗೆರೆ ಮೂಲದ ಶಿವಾಜಿ ರಾವ್ ಹಿಂದೂ ಪರ ಸಂಘಟನೆಯೊಂದರಲ್ಲಿ ಗುರುತಿಸಿಕೊಂಡು ಸಕ್ರಿಯನಾಗಿದ್ದು, ಹಿಂದೂ ಧರ್ಮವನ್ನು ಟೀಕಿಸಿ ಮಾತನಾಡುವವರು ಹಾಗೂ ಬರೆಯುವವರನ್ನು ಗುರಿಯಾಗಿಸಿಕೊಂಡು ಕಾನೂನು ಬಾಹಿರ ಕೃತ್ಯಗಳನ್ನು ನಡೆಸುತ್ತಿರುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
ಆರೋಪಿಯ ವಿರುದ್ಧ ಸಂಜಯನಗರ, ಕೊಟ್ಟೂರು, ಚಿತ್ರದುರ್ಗ, ಹಾರೋಹಳ್ಳಿ -2 ಎಫ್ಐಆರ್, ಬಸವೇಶ್ವರ ನಗರ -2 ಸೇರಿ ವಿವಿಧ ಠಾಣೆಗಳಲ್ಲಿ 8 ಪ್ರಕರಣಗಳು ದಾಖಲಾಗಿದ್ದವು.
ಕೊಟ್ಟೂರು ಠಾಣೆಯಲ್ಲಿ ಸಾಹಿತಿ ಕುಂ.ವೀರಭಧ್ರಪ್ಪ ಪ್ರಕರಣ ದಾಖಲಿಸಿದ್ದರು. ಚಿತ್ರದುರ್ಗದಲ್ಲಿ ಸಾಹಿತಿ ಬಿಎಲ್ ವೇಣು, ಹಾರೋಹಳ್ಳಿ ಠಾಣೆಯಲ್ಲಿ ಬಂಜಗೆರೆ ಜಯಪ್ರಕಾಶ್, ಸಂಜಯನಗರ ಠಾಣೆಯಲ್ಲಿ ಬಿ.ಟಿ. ಲಲಿತಾ ನಾಯ್ಕ್, ಬಸವೇಶ್ವರ ನಗರ ಠಾಣೆಯಲ್ಲಿ ವಸುಂಧರಾ ಭೂಪತಿ ಪ್ರಕರಣ ದಾಖಲು ಮಾಡಿದ್ದರು.
ಪ್ರಕರಣದಲ್ಲಿ ಇದುವರೆಗೆ ಯಾವುದೇ ಸಾಕ್ಷಿಗಳು ಕೂಡ ಲಭ್ಯವಾಗಿರಲಿಲ್ಲ.ಈ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ಬೆದರಿಕೆ ಪತ್ರಗಳು ಬಂದಿದ್ದ ಪ್ರಗತಿಪರ ಸಾಹಿತಿಗಳ ನಿಯೋಗ ಸೂಕ್ತ ರಕ್ಷಣೆಗೆ ಒತ್ತಾಯ ಮಾಡಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಳೆದ ಆಗಸ್ಟ್‌ನಲ್ಲಿ ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ಎಫ್‌ಎಸ್‌ಎಲ್‌ಗೆ ಬೆದರಿಕೆ ಪತ್ರವನ್ನು ಸಿಸಿಬಿ ಪೊಲೀಸರು ಕಳುಹಿಸಿದ್ದರು.
ಈ ಪತ್ರವನ್ನೆಲ್ಲ ಒಬ್ಬನೇ ಬರೆದಿದ್ದಾನೆ ಎನ್ನುವುದು ಎಫ್‌ಎಸ್‌ಎಲ್ ಪರೀಕ್ಷೆಯಲ್ಲಿ ಧೃಢವಾಗಿತ್ತು. ಪತ್ರಗಳನ್ನು ಬೇರೆ ಬೇರೆ ಅಂಚೆ ಕಚೇರಿಗಳಿಂದ ರವಾನೆ ಮಾಡುತ್ತಿದ್ದ ಈತ ಹಲವು ದಿನಗಳಿಂದ ಸಿಸಿಬಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ. ಇದೀಗ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ತನಿಖೆ ವೇಳೆ, ಇವರೆಲ್ಲ ಹಿಂದೂ ಧರ್ಮದ ವಿರೋಧಿಗಳು ಹಾಗಾಗಿ ಬೆದರಿಕೆ ಪತ್ರ ಬರೆದಿದ್ದೆ ಎಂದು ಆರೋಪಿ ತಪ್ಪೋಪ್ಪಿಕೊಂಡಿದ್ದಾನೆ. ಈ ಪ್ರಕರಣ ಇಷ್ಟೊಂದು ದೊಡ್ಡ ಮಟ್ಟಕ್ಕೆ ತಲುಪಲಿದೆ ಎನ್ನುವುದು ಗೊತ್ತಿರಲಿಲ್ಲ ಎಂದೂ ಒಪ್ಪಿಕೊಂಡಿದ್ದಾನೆ.
ಈತನೊಬ್ಬನೇ ಬೆದರಿಕೆ ಪತ್ರ ಬರೆದಿದ್ದಾನೆಯೇ ಇಲ್ಲವೇ ಈತನ ಕೃತ್ಯದಲ್ಲಿ ಇನ್ಯಾರದರೂ ಭಾಗಿಯಾಗಿದ್ದಾರೆಯೇ ಅಥವಾ ಈತನ ಹಿಂದೆ ಬೇರೆ ಯಾರಾದರೂ ಆಗಲಿ ಸಂಘ ಸಂಸ್ಥೆಗಳ ಕೈವಾಡವಾಗಲಿ ಇದೆಯೇ ಎನ್ನುವ ಬಗ್ಗೆಯೂ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದರು.