ಮಂಗಳೂರು,ಜು.26- ಪಬ್ ಮೇಲೆ ಭಜರಂಗದಳ ದಾಳಿ ವಿಚಾರವಾಗಿ ಯಾರೂ ದೂರು ನೀಡಿಲ್ಲ. ದೂರು ನೀಡಿದರೆ ಪ್ರಕರಣ ದಾಖಲು ಮಾಡುತ್ತೇವೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದ್ದಾರೆ.
ಕಾಲೇಜು ಫೇರ್‌ವೆಲ್ ನೆಪದಲ್ಲಿ ನಿನ್ನೆ ರಾತ್ರಿ ಪ್ರತಿಷ್ಠಿತ ರಿ-ಸೈಕಲ್ ದಿ ಲಾಂಜ್ ಪಬ್‍ನಲ್ಲಿ ಕಾಲೇಜು ವಿದ್ಯಾರ್ಥಿಗಳು ಪಾರ್ಟಿ ಮಾಡಿದ್ದಾರೆ. ಈ ವೇಳೆ ಏಕಾಏಕಿ ಪಬ್‍ಗೆ ನುಗ್ಗಿದ ಭಜರಂಗದಳ ಕಾರ್ಯಕರ್ತರು ಕೆಲ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ, ಬುದ್ಧಿ ಹೇಳಿ ಪಬ್‍ನಿಂದ ಹೊರಗೆ ಕಳುಹಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಎನ್.ಶಶಿಕುಮಾರ್ ಅವರು, ನಗರದಲ್ಲಿ ಯಾವುದೇ ಪಬ್ ಮೇಲೆ ದಾಳಿ ಆಗಿಲ್ಲ. ಬಲ್ಮಠದ ಪಬ್ ಮುಂದೆ ಜು.25 ರಾತ್ರಿ ಹತ್ತು-ಹನ್ನೆರೆಡು ಮಂದಿ ಜಮಾಯಿಸಿದ್ದರು. ಪಬ್ ಒಳಗೆ ಅಪ್ರಾಪ್ತರು ಮದ್ಯ ಸೇವನೆ ಮಾಡುತ್ತಿದ್ದರು ಎಂಬ ಆರೋಪ ಅವರದ್ದಾಗಿತ್ತು. ಈ ಬಗ್ಗೆ ಬೌನ್ಸರ್ ಜೊತೆ ಸಂಘಟನೆಯೊಂದಕ್ಕೆ ಸೇರಿದ ಯುವಕರು ಮಾತನಾಡಿದ್ದರು. ಬೌನ್ಸರ್ ಪಬ್ ಮ್ಯಾನೇಜರ್ ಜೊತೆ ಮಾತನಾಡಿ ಪಬ್ ಒಳಗಿದ್ದ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿದ್ದಾನೆ.
ಇಲ್ಲಿ ಯಾವುದೇ ಅಟ್ಯಾಕ್, ದೈಹಿಕ ಹಲ್ಲೆಗಳು ನಡೆದಿಲ್ಲ. ಪಬ್ ಒಳಗೆ ಯಾರೂ ಪ್ರವೇಶ ಮಾಡಿಲ್ಲ. ತಡರಾತ್ರಿ ನಡೆದ ಘಟನೆಗೂ ಕಿಸ್ ಪಂದ್ಯ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಆ ಪ್ರಕರಣದಲ್ಲಿ ಭಾಗಿಯಾದವರು ಯಾರೂ ನಿನ್ನೆ ಪಬ್‍ನ ಪಾರ್ಟಿಯಲ್ಲಿ ಭಾಗವಹಿಸಿಲ್ಲ. ಇನ್ನೂ ಈ ಬಗ್ಗೆ ಯಾರೂ ದೂರು ನೀಡಿಲ್ಲ. ದೂರು ನೀಡಿದರೆ ಪ್ರಕರಣ ದಾಖಲು ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
Previous Articleನಾನು ಉಗ್ರನಾಗಿದ್ದು ಹೀಗೆ…?
Next Article CM ಪ್ರಧಾನ ಕಾರ್ಯದರ್ಶಿ ಹೆಸರಲ್ಲಿ ವಂಚನೆ..?