ಬೆಂಗಳೂರು – ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಭರ್ಜರಿ ರಂಗು ಬಂದಿರುವ ಬೆನ್ನೆಲ್ಲೇ, ಅಖಾಡದಲ್ಲಿ ಆರೋಪ ಪ್ರತ್ಯಾರೋಪಗಳ ಸುರಿಮಳೆಯೇ ಆಗುತ್ತಿದೆ.
ಬಿಜೆಪಿ ಲಿಂಗಾಯತ ವಿರೋಧಿ ಎಂದು ದೂರಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ (MB Patil) ಕಳೆದ ಕೆಲವು ದಿನಗಳ ಹಿಂದೆ ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಅವರು ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್‍ನಲ್ಲಿ ಎರಡು ಬಾರಿ ಯಾರನ್ನ ಭೇಟಿಯಾಗಿದ್ದರು ಎಂದು ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಭೇಟಿಯ ವೇಳೆ ಅವರೊಂದಿಗೆ ಏನೇನು ಮಾತುಕತೆಯಾಯಿತು ಎಂದು ಬಹಿರಂಗ ಪಡಿಸಲಿ. ಆ ಬಗ್ಗೆ ನಮ್ಮ ಬಳಿಯೂ ಮಾಹಿತಿ ಇದೆ.ಎರಡು ಹಂತದಲ್ಲಿ ಅದನ್ನು ನಾವು ಬಿಡುಗಡೆ ಮಾಡುತ್ತೇವೆ. ಮೂರುನಾಲ್ಕು ದಿನಗಳಲ್ಲಿ ಎಲ್ಲಾ ಮಾಹಿತಿ ಹೊರ ಹಾಕುತ್ತೇವೆ.
ನಾನು ಗಾಳಿಯಲ್ಲಿ ಗುಂಡು ಹೊಡೆಯುವುದಿಲ್ಲ ಎಂದು ಹೇಳಿದರು ನಮ್ಮ ಬಳಿ ನಿಜವಾದ ಗುಂಡೇ ಇದೆ. ನಮ್ಮ ಬಳಿ ಸ್ಪಷ್ಟ ಮಾಹಿತಿ ಇದೆ. ಮೇ 10ರಂದು ಚುನಾವಣೆ ನಡೆಯಲಿದೆ. ಅದಕ್ಕೂ ಮೊದಲು ಮೇ 6ರಿಂದ 8ರ ಒಳಗೆ ಈ ಮಾಹಿತಿಯನ್ನು ಹೊರ ಹಾಕುತ್ತೇವೆ. ಆವರೆಗೂ ಕುತುಹಲ ಇರಲಿ ಎಂದರು.
ಬಿಜೆಪಿಯ ನಾಯಕರಿಂದಾಗಿ ಹಿರಿಯ ನಾಯಕ ಯಡಿಯೂರಪ್ಪ ಏನು ಕಷ್ಟ ಅನುಭವಿಸಿದ್ದರು ಎಂದು ಅರಿವಿದೆ. ಲಕ್ಷ್ಮಣ ಸವದಿ, ಜಗದೀಶ ಶೆಟ್ಟರ್ ಯಾವ ರೀತಿ ಕಷ್ಟ ಅನುಭವಿಸಿದ್ದಾರೆ ಎಂಬುದು ಯಡಿಯೂರಪ್ಪನವರಿಗೆ ಗೊತ್ತಿದೆ. ಯಡಿಯೂರಪ್ಪನವರೇ ಬಿಜೆಪಿಯವರ ಷ್ಯಡ್ಯಂತ್ರಕ್ಕೆ ಬಲಿಯಾಗಬೇಡಿ. ನಿಮ್ಮಿಂದ ಆಪರೆಷನ್ ಕಮಲ ಎಂಬ ಕೆಟ್ಟ ಕೆಲಸ ಮಾಡಿಸಿ, ಸರ್ಕಾರ ರಚಿಸಿ ನಂತರ, ನಿಮ್ಮನ್ನು ಅಧಿಕಾರದಿಂದ ತೆಗೆದು ಕಸದ ಬುಟ್ಟಿಗೆ ಹಾಕಿದ್ದಾರೆ.ರಾಜೀನಾಮೆ ನೀಡುವಾಗ ನೀವು ವಿಧಾನಸೌಧದ ಒಳಗೆ, ಹೊರಗೆ ಕಣ್ಣೀರು ಹಾಕಿದ್ದೀರಾ. ಲಿಂಗಾಯಿತ ಸಮುದಾಯದ ನಾಯಕತ್ವವನ್ನು ಮುಗಿಸಲು ನೀವು ಬಳಕೆಯಾಗಬೇಡಿ ಎಂದು ಯಡಿಯೂರಪ್ಪನವರಲ್ಲಿ ಮನವಿ ಮಾಡಿದರು. (MB Patil)
ಯಡಿಯೂರಪ್ಪರನ್ನು ತೆಗೆದು ಮತ್ತೊಬ್ಬ ಲಿಂಗಾಯಿತರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶ ಬಿಜೆಪಿಗೆ ಇರಲಿಲ್ಲ. ಆ ವೇಳೆ ನನ್ನನ್ನು ಒಳಗೊಂಡಂತೆ ಲಿಂಗಾಯಿತ ಸಮುದಾಯ ಒತ್ತಡ ಹೇರಿದ್ದರಿಂದ ಬಸವರಾಜ ಬೊಮ್ಮಾಯಿರನ್ನು ಮುಖ್ಯಮಂತ್ರಿ ಮಾಡಲಾಗಿದೆ. ಇಲ್ಲವಾದರೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದಂತೆ ಬಿಜೆಪಿ ಬೇರೆಯೇ ಉದ್ದೇಶ ಹೊಂದಿತ್ತು ಎಂದು ಆರೋಪಿಸಿದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಿದ್ಧಾಂತ ಹೊಂದಿರುವ ಮುತ್ಸದ್ಧಿ. ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ತಾವು ಸಚಿವರಾಗುವುದಿಲ್ಲ ಶೆಟ್ಟರ್ ಹೇಳಿ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದರು. ಅವರನ್ನು ಎಷ್ಟು ಹೀನಾಯವಾಗಿ ನಡೆಸಿಕೊಳ್ಳಲಾಯಿತು ಎಂದು ಜನ ನೋಡಿದ್ದಾರೆ. ಕೊನೆಗೆ ವಿಧಾನಸಭೆಗೆ ಸ್ರ್ಪಧಿಸಲು ಒಂದು ಟಿಕೆಟ್ ನೀಡಲಿಲ್ಲ. ಅವರು ಪಕ್ಷ ಬಿಟ್ಟ ಮೇಲೆ ದೊಡ್ಡ ಹುದ್ದೆ ಕೊಡಲು ನಿರ್ಧರಿಸಲಾಗಿತ್ತು ಎಂದು ಹೇಳಲಾಗುತ್ತಿದೆ. ಅದು ನಿಜವಾಗಿದ್ದರೆ ಆರು ತಿಂಗಳ ಮೊದಲೇ ಶೆಟ್ಟರ್‍ಗೆ ಯಾಕೆ ಮಾಹಿತಿ ನೀಡಲಿಲ್ಲ ಎಂದು ಪ್ರಶ್ನಿಸಿದರು. (MB Patil)
ಲಕ್ಷ್ಮಣ ಸವದಿಗೆ ಯಾಕೆ ಅವಕಾಶ ತಪ್ಪಿಸಲಾಯಿತು. ಈ ಇಬ್ಬರು ನಾಯಕರಿಗೆ ಅಷ್ಟೇನು ವಯಸ್ಸಾಗಿರಲಿಲ್ಲ. ಯಾಕೆ ಟಿಕೆಟ್ ನಿರಾಕರಿಸಲಾಯಿತು ಎಂದು ಬಿಜೆಪಿ ಉತ್ತರಿಸಬೇಕಿದೆ. ಲಿಂಗಾಯಿತ ಸಮುದಾಯ ಬಿಜೆಪಿ ಒಳ ಸಂಚನ್ನು ಅರ್ಥ ಮಾಡಿಕೊಂಡಿದೆ. ನಮ್ಮನ್ನು ಬಳಸಿಕೊಂಡು ಕಸದ ಬುಟ್ಟಿಗೆ ಬಿಸಾಕಲಾಗುತ್ತಿದೆ ಎಂಬ ಅಸಮಧಾನ ಹೊಂದಿದೆ. (MB Patil)
ಈ ಹಿನ್ನೆಲೆಯಲ್ಲಿ ಲಿಂಗಾಯಿತರು ಮರಳಿ ತಮ್ಮ ಮನೆಗೆ ವಾಪಾಸ್ ಬರುತ್ತಿದ್ದಾರೆ. ಲಿಂಗಾಯಿತ ಸಮುದಾಯ ಕಾಂಗ್ರೆಸ್‍ಗೆ ಬೆಂಬಲ ನೀಡುತ್ತಿರುವುದರಿಂದ ಬಿಜೆಪಿ ಆತಂಕಗೊಂಡಿದೆ.
ಶೆಟ್ಟರ್, ಸವದಿಯನ್ನು ಮುಗಿಸಲು ಲಿಂಗಾಯಿತ ನಾಯಕರನ್ನೇ ಬಳಕೆ ಮಾಡುತ್ತಿದ್ದಾರೆ. ಯಡಿಯೂರಪ್ಪ ಮಕ್ಕಳ ಭವಿಷ್ಯ ಹಾಗೂ ಇತರ ಕಾರಣಗಳಿಂದ ಹೆದರಿಕೊಂಡು ಸವದಿ ಹಾಗೂ ಶೆಟ್ಟರ್ ವಿರುದ್ಧ ಪ್ರಚಾರ ನಡೆಸುತ್ತಿದ್ದಾರೆ ಎಂದು ಹೇಳಿದರು. (MB Patil)
Also read.