ಯೂರೋಪ್ ಖಂಡದ ಅನೇಕ ದೇಶಗಳಲ್ಲಿ ಇನ್ನೂ ಸಾಂವಿಧಾನಿಕ ರಾಜಾಡಳಿತವಿದೆ. ಅಲ್ಲಿ ರಾಜನಿಗೆ ಅಥವಾ ರಾಣಿಗೆ ಬರಿ ಸಾಂವಿಧಾನಿಕ ಪದವಿ ಮತ್ತು ಪುರಸ್ಕಾರವಿರುತ್ತದೆಯೇ ವಿನಃ ಬೇರೆ ಯಾವುದೇ ರೀತಿಯಲ್ಲಿ ಕಾನೂನು ಮಾಡುವ ನಿರ್ಧಾರಗಳನ್ನು ತೆಗೆದುಕೊಳ್ಳುವ ಮತ್ತು ಶಿಕ್ಷೆ ಕೊಡುವ ಅಧಿಕಾರವಿರುವುದಿಲ್ಲ. ಡೆನ್ಮಾರ್ಕ್ (Denmark) ಒಂದು ಸಾಂವಿಧಾನಿಕ ಪ್ರಜಾಪ್ರಭುತ್ವ ದೇಶವಾಗಿದ್ದರೂ ಅಲ್ಲಿ ರಾಜವಂಶ ಪ್ರಮುಖವಾಗಿ ಕಂಡುಬರುತ್ತದೆ.
ಡೆನ್ಮಾರ್ಕ್ (Denmark) ದೇಶದಲ್ಲಿ ರಾಜ ವಂಶಕ್ಕೆ ಅದರಲ್ಲೂ ಅಧಿಕಾರೂಢ ವ್ಯಕ್ತಿಗೆ ಆ ದೇಶದ ಐಕ್ಯತೆ ಮತ್ತು ಸಂಸೃತಿಯನ್ನು ಕಾಪಾಡುವ ಮತ್ತು ಪೋಷಿಸುವ ಮಹತ್ವದ ಜವಾಬ್ದಾರಿ ಇರುತ್ತದೆ. ಮತ್ತು ಪ್ರಜಾಪ್ರಭುತ್ವದ ಮೂಲಕ ಆಯ್ಕೆಯಾದ ಸಂಸತ್ತು ಮತ್ತು ಸರ್ಕಾರ ತೆಗೆದುಕೊಂಡ ನಿರ್ಧಾರಗಳನ್ನು ಅನುಮೋದಿಸಿ ದೇಶಕ್ಕೆ ಒಂದು ರೀತಿಯ ದ್ಯೋತಕವಾಗಿ ಕಂಡುಬರುವುದು ಆ ಚಕ್ರವರ್ತಿಯ ಕೆಲಸವಾಗಿದೆ. ಡೆನ್ಮಾರ್ಕ್ ದೇಶದಲ್ಲಿ ಇತ್ತೀಚಿನವರೆಗೆ ಆಳುವ ರಾಣಿಯಾಗಿದ್ದ 82 ವರ್ಷದ ಮಾರ್ಗರೇತ್ ತನ್ನ 52 ವರ್ಷಗಳ ದೀರ್ಘ ಆಳ್ವಿಕೆಯಲ್ಲಿ ಜನಪರವಾಗಿ ಕಂಡು ಬಂದು ಜನಪ್ರಿಯತೆಯನ್ನು ಗಳಿಸಿದ್ದರು. ಕಳೆದ ತಿಂಗಳು ತಾನು ಸಿಂಹಾಸನವನ್ನು ತ್ಯಜಿಸುತ್ತೇನೆ ಎಂದು ರಾಣಿ ಹೇಳಿದ ಹಿನ್ನೆಲೆಯಲ್ಲಿ ಈಗ ಆಕೆಯ ಮಗ ರಾಜಕುಮಾರ್ ಫ್ರೆಡ್ರಿಕ್ ರಾಜನಾಗಿ ಅಭಿಷಿಕ್ತರಾಗಿದ್ದರೆ.
ರಾಜ ಪದವಿ ಏರಿದ ನಂತರ ತನ್ನ ಮಡದಿ ಮಕ್ಕಳೊಂದಿಗೆ ಅರಮನೆಯ ಮುಂಭಾಗದಲ್ಲಿ ಕಾಣಿಸಿಕೊಂಡ ಫ್ರೆಡ್ರಿಕ್ ತಾನು ಒಬ್ಬ ದೇಶದ ಐಕ್ಯತೆಯನ್ನು ಕಾಪಾಡುವ ರಾಜನಾಗಿ ಮುಂದುವರೆಯುತ್ತೇನೆ ಎಂಬ ಸಂದೇಶವನ್ನು ನೀಡಿದ್ದಾರೆ. ವಿಶೇಷವೆಂದರೆ. ಈ ಹೊಸ ರಾಜನ ರಾಣಿ ಆಸ್ಟ್ರೇಲಿಯಾ ದೇಶದವಳಾಗಿದ್ದು ಮದುವೆಯಾಗುವ ಮೊದಲು ಆಸ್ಟ್ರೇಲಿಯಾದಲ್ಲಿ ಒಬ್ಬ ಸಾಮಾನ್ಯ ಯುವತಿಯಾಗಿ ಜೀವಿಸುತ್ತಿದ್ದಾಗ ಅಲ್ಲಿ ರಾಜಕುಮಾರ ಫ್ರೆಡ್ರಿಕ್ ನನ್ನು ಭೇಟಿಯಾಗಿ ಆ ಭೇಟಿ ಪ್ರೇಮಕ್ಕೆ ತಿರುಗಿ ಆನಂತರ ಅವರ ಮದುವೆಯಾಯಿತು. ಈಗ ಆಸ್ಟ್ರೇಲಿಯಾ ಮೂಲದ ಮೇರಿ ಡೆನ್ಮಾರ್ಕ್ ದೇಶದ ರಾಣಿಯಾಗಿ ಹೊರಹೊಮ್ಮಿದ್ದಾರೆ. ಆಸ್ಟ್ರೇಲಿಯನ್ನರಿಗೆ ಇದು ಅತೀವ ಸಂತೋಷವನ್ನು ತಂದು ಕೊಟ್ಟಿದೆ.