ಮೈಸೂರು,ಏ.14: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಅತ್ಯಂತ ಸ್ಪಷ್ಟ ಸರ್ಕಾರವಾಗಿದ್ದು ಕಾಂಗ್ರೆಸ್ ಹೈಕಮಾಂಡ್ ಪಾಲಿನ ಎಟಿಎಂ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿ ಮತ್ತು ಎನ್ ಡಿ ಎ ಅಭ್ಯರ್ಥಿಗಳ ಪರ ಪ್ರಚಾರದ ಅಖಾಡಕ್ಕೆ ಧುಮುಕಿರುವ ಅವರು ಮೈಸೂರಿನಲ್ಲಿ ಬೃಹತ್ ಸಾರ್ವಜನಿಕ ಸಭೆ, ಉದ್ದೇಶಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮೊಟ್ಟಮೊದಲ ಬಾರಿಗೆ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವೇದಿಕೆ ಹಂಚಿಕೊಳ್ಳುವ ಮೂಲಕ ಗಮನ ಸೆಳೆದರು.
ಬಿಜೆಪಿ ಅಭ್ಯರ್ಥಿಗಳಾದ ಯದುವೀರ್, ಬಾಲರಾಜ್ ಹಾಗೂ ಜೆಡಿಎಸ್ ನ ಕುಮಾರಸ್ವಾಮಿ ಮತ್ತು ಪ್ರಜ್ವಲ್ ರೇವಣ್ಣ ಅವರ ಪರವಾಗಿ ಮತಯಾಚಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ಹಿಗ್ಗಾಮುಗ್ಗಾ ಪ್ರಹಾರ ನಡೆಸಿದರು.
ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಮರೆತಿದೆ ಕಳದ 10 ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಬದಲಿಗೆ ಇಲ್ಲಿನ ಸರ್ಕಾರ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ಕಾಂಗ್ರೆಸ್ ಹೈಕಮಾಂಡ್ ಗೆ ಕಪ್ಪ ಸಲ್ಲಿಸುತ್ತಿದೆ ಎಂದು ತಿಳಿಸಿದರು.
ಕರ್ನಾಟಕದ ಸರಕಾರ ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ ಕಪ್ಪು ಹಣ ತಂದು ಕೊಡುವ ಗ್ಯಾರಂಟಿ ಸರ್ಕಾರವಾಗಿದೆ ಇಲ್ಲಿಂದ ಸಾವಿರಾರು ಕೋಟಿ ರೂಪಾಯ ರವಾನೆಯಾಗುತ್ತಿದೆ ಅದರ ಆಧಾರದಲ್ಲಿ ಕಾಂಗ್ರೆಸ್ ಚುನಾವಣೆ ಎದುರಿಸುತ್ತಿದೆ ಎಂದು
ಆಪಾದಿಸಿದರು.
ರಾಜ್ಯದಲ್ಲಿರುವ ಕಪ್ಪು ಹಣದ ಕಮಿಷನ್ ಸರ್ಕಾರದ ವಿರುದ್ಧ ರಾಜ್ಯದ ಜನತೆ ಮತ ಚಲಾಯಿಸಬೇಕಾಗಿದೆ ಏಪ್ರಿಲ್ 26ರಂದು ಮತಗಟ್ಟೆಗೆ ಬಿಜೆಪಿ ಮತ್ತು ಎನ್ ಡಿ ಎ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಮನವಿ ಮಾಡಿದರು.
ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ಮಾಡಿರುವ ಸಾಧನೆಯಾ ಗ್ಯಾರಂಟಿ ಕಾರ್ಡ್ ನಿಮ್ಮ ಮುಂದೆ ಇದೆ ನಾವು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು.
ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಜನತೆ ಹೆಚ್ಚುವಂತ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ ಆದರೆ ಕಾಂಗ್ರೆಸ್ ದೇಶ ಒಡೆಯುವ ಶಕ್ತಿಗಳೊಂದಿಗೆ ಸೇರಿಕೊಂಡು ಅದರ ಸುಲ್ತಾನಂತೆ ಕೆಲಸ ಮಾಡುತ್ತಿದೆ ಕರ್ನಾಟಕದಲ್ಲಿ ಕಾಂಗ್ರೆಸ್ ಕೋಮುವಾದಿ ಎಸ್ಡಿಪಿಐ ಸೇರಿಕೊಂಡಿದೆ ಎಂದು ದೂರಿದರು.
ದೇಶದ ಪ್ರಗತಿಯನ್ನು ಸಹಿಸದ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದೆ ಸಂವಿಧಾನ ಬದಲಾವಣೆ ಮಾಡಲಾಗುತ್ತದೆ ಎಂಬ ಸುಳ್ಳು ಸುದ್ದಿಯನ್ನು ಹರಡುವ ಮೂಲಕ ಕೇಂದ್ರದ ವಿರುದ್ಧ ಷಡ್ಯಂತ್ರ ಮಾಡಿದೆ. ಆದರೆ ಎಲ್ಲಿಯವರೆಗೆ ಬಿಜೆಪಿಗೆ ಯಡಿಯೂರಪ್ಪ ಅವರಂತಹ ನಾಯಕ ಕುಮಾರಸ್ವಾಮಿ ಅವರಂತಹ ಸ್ನೇಹಿತರು ಇರುತ್ತಾರೆ ಅಲ್ಲಿಯವರೆಗೆ ಇಂತಹ ಷಡ್ಯಂತ್ರಗಳು ನಡೆಯುವುದಿಲ್ಲ ಎಂದು ಹೇಳಿದರು
ಬಿಜೆಪಿ ಸಂಕಲ್ಪ ಪತ್ರ ಮೋದಿ ಕೀ ಕಾ ಗ್ಯಾರಂಟಿಯಾಗಿದೆ. ಬಡವರಿಗೆ 3 ಕೋಟಿ ಮನೆ ನಿರ್ಮಾಣ ಮಾಡುತ್ತೇವೆ. ಉಚಿತ ಪಡಿತರ ವಿತರಣೆ ಮಾಡುತ್ತೇವೆ. ಆಯುಷ್ಮಾನ್ ಭಾರತ್ ಅಡಿ ಹಿರಿಯರಿಗೆ ಉಚಿತ ವೈದ್ಯಕೀಯ ಸೇವೆ ಎಂದು ಹೇಳಿದರು.
ಕರ್ನಾಟಕ ಐಟಿ ಹಬ್ ಆಗಿದೆ. ಅದನ್ನು ಇನ್ನಷ್ಟು ವಿಸ್ತರಿಸುತ್ತೇವೆ. ಕನ್ನಡ ಸಮೃದ್ಧ ಭಾಷೆ. ಈ ಭಾಷೆಯ ವ್ಯಾಪ್ತಿಯನ್ನು ನಾವು ಇನ್ನಷ್ಟು ವಿಸ್ತರಣೆ ಮಾಡುತ್ತೇವೆ. ಸ್ಥಳೀಯ ಭಾಷೆಗಳ ಬೆಳವಣಿಗೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಹಂಪಿ, ಬಾದಾಮಿ, ಮೈಸೂರು ವಿಶ್ವ ಪ್ರವಾಸೋದ್ಯಮ ನಕ್ಷೆಗೆ ತೆಗೆದು ಕೊಂಡು ಹೋಗುತ್ತೇವೆ ಎಂದರು.
ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಭಾರತ್ ಮಾತಾ ಕೀ ಜೈ ಅನ್ನಲು ಒಬ್ಬ ಮುಖಂಡ ತಮ್ಮ ನಾಯಕನ ಅನುಮತಿ ಕೇಳುತ್ತಾರೆ. ಇದು ಎಂತಹ ಸ್ಥಿತಿ. ಇಂತಹ ಕಾಂಗ್ರೆಸ್ ಗೆ ಮತ ಹಾಕ್ತೀರಾ?. ಕಾಂಗ್ರೆಸ್‌ನವರು ವಂದೇ ಮಾತರಂಗೆ ಮೊದಲು ವಿರೋಧ ಮಾಡಿದರು. ಈಗ ಭಾರತ್ ಮಾತಾಕಿ ಜೈ ಅನ್ನಲು ವಿರೋಧ ಮಾಡುತ್ತಾರೆ. ಕಾಂಗ್ರೆಸ್ ಪತನಕ್ಕೆ ಇದು ಮುಖ್ಯ ಕಾರಣ. ನಾವು ನಮ್ಮ ಶತ್ರುಗಳಿಗೆ ಸರಿಯಾದ ಪಾಠ ಕಲಿಸ್ತಿದ್ದೇವೆ. ಆದರೆ ಕಾಂಗ್ರೆಸ್ ಇದಕ್ಕೆ ಸಾಕ್ಷಿ ಕೊಡಿ ಅಂತಾ ಕೇಳ್ತಿದೆ. ವೋಟ್ ಬ್ಯಾಂಕ್‌ಗಾಗಿ ರಾಜಕೀಯ ಮಾಡುತ್ತಿರುವವರಿಗೆ ಮತ ಹಾಕ್ತೀರಾ ಎಂದು ಮೋದಿ ಪ್ರಶ್ನಿಸಿದರು.
ಕಾಂಗ್ರೆಸ್ ಇದೀಗ ಹೊಟ್ಟೆ ಉರಿ ರಾಜಕಾರಣ ಮಾಡ್ತಿದೆ. ವಿಶ್ವದಲ್ಲಿ ಭಾರತದ ಗೌರವ ಹೆಚ್ಚಿದೆ. ಕಾಂಗ್ರೆಸ್ ನಾಯಕ ವಿದೇಶಿ ನೆಲದಲ್ಲಿ ಉಡಾಫೆ ಮಾತಾಡ್ತಿದ್ದಾನೆ. ಸರ್ಜಿಕಲ್ ಸ್ಟ್ರೈಕ್ ಬಗ್ಗೆಯೂ ಕಾಂಗ್ರೆಸ್‌ನವರಿಗೆ ಅನುಮಾನ. ಕರ್ನಾಟಕದಲ್ಲಿ ತುಷ್ಟೀಕರಣದ ರಾಜಕಾರಣ ನಡೆಯುತ್ತಿದೆ. ವೋಟ್ ಬ್ಯಾಂಕ್ ಮಾಡೋರ ಕೈಗೆ ದೇಶ ಕೊಡೋದಕ್ಕೆ ಆಗುತ್ತಾ ಎಂದು ಗುಡುಗಿದರು.
ರೋಡ್ ಶೋ:
ಇಲ್ಲಿಂದ ನೇರವಾಗಿ ಮಂಗಳೂರಿಗೆ ತೆರಳಿದ ಅವರು ಬ್ರಹ್ಮಶ್ರೀ ನಾರಾಯಣಗುರು ವೃತ್ತದಲ್ಲಿರುವ ನಾರಾಯಣ ಗುರು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರೋಡ್ ಶೋ ಆರಂಭಿಸಿದರು.
ಕಾರ್ಯಕರ್ತರ ಜಯಘೋಷಗಳು ಹಾಗೂ ಪುಷ್ಪವೃಷ್ಠಿಯ ನಡುವೆ ಸಾಗಿದ ರೋಡ್ ಶೋ ಲಿಲ್‌ಬಾಗ್, ಪಿವಿಎಸ್ ವೃತ್ತದ ಮೂಲಕ ಸಾಗಿ ನವಭಾರತ ವೃತ್ತದಲ್ಲಿ ಸಮಾಪನಗೊಂಡಿತು.
ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸಾವಿರಾರು ಜನರು ಮೋದಿ ಮೋದಿ ಎಂದು ಘೋಷಣೆ ಮೊಳಗಿಸುವ ಮೂಲಕ ಗಮನ ಸೆಳೆದರು.