ಬೆಂಗಳೂರು,ಆ.25 – ಯಶಸ್ವಿ ಚಂದ್ರಯಾನದ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿದ ಇಸ್ರೋ ತಂಡವನ್ನು ಅಭಿನಂದಿಸಲು ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದು,ರೋಡ್ ಶೋ ನಡೆಸಲಿದ್ದಾರೆ.
ಚುನಾವಣೆ ಸಮಯದಲ್ಲಿ ರೋಡ್ ಶೋ ನಡೆಸಿ, ಮತದಾರರ ಮನ ಗೆಲ್ಲಲು ಪ್ರಯತ್ನಿಸುವ ಪ್ರದಾನಿ ಮೋದಿ ಇದೀಗ ಇಸ್ರೋ ವಿಜ್ಞಾನಿಗಳ ಸಾಧನೆ ಪ್ರಶಂಸಿಸುವ ಸಮಯದಲ್ಲೂ ರೋಡ್ ಶೋ ನಡೆಸುತ್ತಿದ್ದಾರೆ.
ಈ ರೋಡ್ ಶೋ ಗೆ ಹೆಚ್ಚಿನ ಪ್ರಮಾಣದಲ್ಲಿ ಜನರನ್ನು ಕರೆತರುವಂತೆ ಪಕ್ಷದ ನಾಯಕತ್ವ ಬೆಂಗಳೂರಿನ ಬಿಜೆಪಿ ನಾಯಕರಿಗೆ ಸೂಚನೆ ನೀಡಿದೆ. ಆರ್.ಅಶೋಕ್, ಮುನಿರಾಜು, ಅಶ್ವಥ್ ನಾರಾಯಣ, ಎಸ್.ಟಿ.ಸೋಮಶೇಖರ್ ಅವರಿಗೆ ಜನರನ್ನು ಸೇರಿಸಲು ಸೂಚಿಸಿದೆ.ಆದರೆ ಈ ವೇಳೆ ಯಾರೂ ಕೂಡ ಪಕ್ಷದ ಧ್ವಜ ತರಬಾರದು,ಪಕ್ಷದ ಪರ ಘೋಷಣೆ ಹಾಕಬಾರದು.ದೇಶ,ವಿಜ್ಞಾನಿಗಳು, ಪ್ರಧಾನಿ ಅವರ ಪರ ಘೋಷಣೆ ಮೊಳಗಿಸಲು ಸೂಚಿಸಲಾಗಿದೆ.
ಪ್ರಧಾನಿ ಆಗಮಿಸುತ್ತಿರುವ ಹಿನ್ನಲೆಯಲ್ಲಿ ನಗರದಾದ್ಯಂತ ಅಭೂತಪೂರ್ವ ಬಂದೋಬಸ್ಥ್ ವ್ಯವಸ್ಥೆ ಕೈಗೊಳ್ಳಲಾಗಿದೆ.
ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ನಲ್ಲಿ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗಿಯಾಗಿರುವ ಪ್ರಧಾನಿ ಮೋದಿ ಅಲ್ಲಿಂದ ನೇರವಾಗಿ ನಾಳೆ ಬೆಳಗ್ಗೆ ನಗರದ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದು ಒಂದು ಕಿ.ಮೀ. ದೂರ ರೋಡ್ ಶೋ ನಡೆಸಲಿದ್ದಾರೆ.
ಪ್ರಧಾನಿಗಳು ಬಂದಿಳಿಯುವ ಎಎಲ್ ವಿಮಾನ ನಿಲ್ದಾಣದಿಂದ ರೋಡ್ ಶೋ ನಡೆಸುವ ಮಾರ್ಗದುದ್ದಕ್ಕೂ ಹಾಗೂ ಇಸ್ರೋ ಕೇಂದ್ರದ ಸುತ್ತಲೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಹಿಂದೆಂದೂ ಕಾಣದ ಭದ್ರತೆಯನ್ನು ಕೈಗೊಳ್ಳಲಾಗಿದೆ.
ಕೇಂದ್ರ ಪಡೆಗಳ ಜೊತೆ ರಾಜ್ಯದ ಪೊಲೀಸರು ಭದ್ರತಾ ಕ್ರಮಗಳನ್ನು ಕೈಗೊಂಡಿದ್ದು ಎಲ್ಲಿಯೂ ಯಾವುದೇ ರೀತಿಯ ಅಹಿತಕರ ಘಟನೆಗಳಾಗಲಿ ಮುಜುಗರ ತರುವ ಸನ್ನಿವೇಶಗಳಾಗಲಿ ನಡೆಯದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಪ್ರಧಾನಿಗಳು ರೋಡ್ ಶೋ ನಡೆಸುವ ವೇಳೆ ಸಂಚಾರ ದಟ್ಟಣೆ ಸಮಸ್ಯೆ ಉಂಟಾಗದಂತೆ ನಗರದ ಕೆಲ ರಸ್ತೆಗಳ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.
ನಾಳೆ ನಸುಕಿನ ಜಾವ 4:30 ರಿಂದ ಬೆಳಗ್ಗೆ 9:30 ರ ವರೆಗೆ ಕೆಳಕಂಡ ರಸ್ತೆ ಮಾರ್ಗ ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರು ಈ ರಸ್ತೆಗಳ ಬದಲಾಗಿ ಪರ್ಯಾಯ ಮಾರ್ಗ ಬಳಕೆಗೆ ಬೆಂಗಳೂರು ಸಂಚಾರಿ ಪೋಲಿಸರು ಮನವಿ ಮಾಡಿದ್ದಾರೆ.
ಓಲ್ಡ್ ಏರ್ಪೋರ್ಟ್ ರಸ್ತೆ,ಓಲ್ಡ್ ಮದ್ರಾಸ್ ರಸ್ತೆ,ಎಂ.ಜಿ.ರಸ್ತೆ,ಕಬ್ಬನ್ ರಸ್ತೆ,ರಾಜಭವನ ರಸ್ತೆ,ಬಳ್ಳಾರಿ ರಸ್ತೆ (ಮೇಖ್ರಿ ಸರ್ಕಲ್),
ಸಿವಿ ರಾಮನ್ ರಸ್ತೆ,ಯಶವಂತಪುರ ಫ್ಲೈ ಓವರ್ ,ತುಮಕೂರು ರಸ್ತೆ (ಯಶವಂತಪುರದಿಂದ ನಾಗಸಂದ್ರದವರೆಗೆ)
ಮಾಗಡಿ ರಸ್ತೆ, ಹೊರವರ್ತುಲ ರಸ್ತೆ (ಗೊರಗುಂಟೆ ಪಾಳ್ಯ ಜಂಕ್ಷನ್‌ನಿಂದ ಸುಮನಹಳ್ಳಿ)ಗುಬ್ಬಿ ತೋಟದಪ್ಪ ರಸ್ತೆ
ಜಾಲಹಳ್ಳಿ ಕ್ರಾಸ್ ರಸ್ತೆಯಲ್ಲಿನಾಳೆ ಬೆಳಗಿನ ಜಾವ 4.00 ಗಂಟೆಯಿಂದ ಬೆಳಗ್ಗೆ 11.00 ಗಂಟೆಯವರೆಗೆ ಭಾರೀ ಸರಕು ಸಾಗಾಣಿಕೆ ವಾಹನ ಸಂಚಾರ ನಿಷೇಧಿಸಲಾಗಿದೆ.
ಪ್ರಧಾನಿ ಮೋದಿ ಅವರು ನಾಳೆ ಬೆಳಗ್ಗೆ 5.55ಕ್ಕೆ ಹೆಚ್ ಎಎಲ್ ಏರ್‌ಪೋರ್ಟ್‌ಗೆ ಮೋದಿ ಆಗಮಿಸಿ ಬೆಳಗ್ಗೆ 6.30ರವರೆಗೆ ಏರ್‌ಪೋರ್ಟ್‌ನಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ.ಬೆಳಗ್ಗೆ 7 ಗಂಟೆಗೆ ಇಸ್ರೋ ಕೇಂದ್ರ ಕಚೇರಿಗೆ ಭೇಟಿ ನೀಡಿ ಬೆಳಗ್ಗೆ 8 ಗಂಟೆಯವರೆಗೆ ಇಸ್ರೋ ಕಚೇರಿಯಲ್ಲಿ ಪ್ರಧಾನಿ ಮೋದಿ ಸಭೆ ನಡೆಸಿ ಬೆಳಗ್ಗೆ 8.35ಕ್ಕೆ ಬೆಂಗಳೂರಿನಿಂದ ದೆಹಲಿಗೆ ನಿರ್ಗಮಿಸಲಿದ್ದಾರೆ ಪ್ರಧಾನಿ ರೋಡ್ ಶೋ: ಮುಂದಿನ ಏಪ್ರಿಲ್ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಪ್ರಧಾನಿ ಆಗಮನವನ್ನು ಸದ್ವಿನಿಯೋಗ ಮಾಡಿಕೊಳ್ಳಲು ಬಿಜೆಪಿ ಯೋಜಿಸುತ್ತಿದೆ. ಅದ್ಧೂರಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಸ್ವಾಗತಕ್ಕೆ ಎಚ್ಎಎಲ್ ಏರ್ಪೋರ್ಟ್ನಲ್ಲಿ 5-6 ಸಾವಿರ ಜನರನ್ನು ಸೇರಿಸಲು ಉದ್ದೇಶಿಸಲಾಗಿದೆ. ಮೋದಿ ಅವರು ಏರ್ಪೋರ್ಟ್ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡುವ ಸಾಧ್ಯತೆ ಇದೆ. ಪೀಣ್ಯದಲ್ಲಿ ಮೋದಿ ಅವರು ಸುಮಾರು 1 ಕಿಲೋಮೀಟರ್ ರೋಡ್ಶೋ ನಡೆಸುವ ಸಾಧ್ಯತೆ ಹೆಚ್ಚಾಗಿದೆ. ಈ ಬಗ್ಗೆ ಸಿದ್ಧತೆ ಮಾಡಿಕೊಳ್ಳುವಂತೆ ಬೆಂಗಳೂರಿನ ಬಿಜೆಪಿ ಶಾಸಕರಿಗೆ ಕೂಡ ಸೂಚನೆ ನೀಡಲಾಗಿದೆ.