ಬೆಂಗಳೂರು, ಆ.25 – ರಾಜ್ಯದಲ್ಲಿ ಈ ಬಾರಿ ಮುಂಗಾರು ಕೈ ಕೊಟ್ಟಿದೆ.
ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದೆ 130ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರದ ಛಾಯೆ ಆವರಿಸಿದೆ.ಈ ಬಗ್ಗೆ ವಾಸ್ತವಿಕ ಅಧ್ಯಯನದ ಬಳಿಕ ಬರ ಪೀಡಿತ ಪ್ರದೇಶಗಳ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ರಾಜ್ಯದ ಮಳೆ-ಬೆಳೆ ಪರಿಸ್ಥಿತಿಯ ಬಗ್ಗೆಇಲಾಖೆಯ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ತಿಂಗಳ ಮೊದಲ ವಾರದಲ್ಲಿ ಬರ ಪ್ರದೇಶಗಳನ್ನು ಅಧಿಕೃತವಾಗಿ ಘೋಷಣೆ ಮಾಡಲಾಗುವುದು ಎಂದು ಹೇಳಿದರು.
ಸದ್ಯ ರಾಜ್ಯದಲ್ಲಿ ಶೇ. 79 ರಷ್ಟು ಬಿತ್ತನೆಯಾಗಿದೆ. ಆದರೆ ಮಳೆ ಕೊರತೆಯಿಂದಾಗಿ ಅದು ಒಣಗಿ ಹೋಗುತ್ತಿದ್ದು, ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆಗಸ್ಟ್ ತಿಂಗಳಿನಲ್ಲಿ ತಕ್ಷಣವೇ ಮಳೆ ಬಂದರೆ ಶೇ. 50 ರಿಂದ 60 ರಷ್ಟು ಭಾಗ ಉಳಿಸಿಕೊಳ್ಳಬಹುದು. ಆದರೆ, ಹವಾಮಾನ ಮುನ್ಸೂಚನೆ ಪ್ರಕಾರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಮಳೆಯ ಅನಿಶ್ಚಿತತೆ ಇದೆ. ಹೀಗಾಗಿ ಬಿತ್ತನೆ ಮಾಡಿದ ಬೆಳೆ ಕೈಗೆ ಬರುವ ನಿರೀಕ್ಷೆಗಳಿಲ್ಲ ಎಂದರು.
4 ಲಕ್ಷ ಹೆಕ್ಟೇರಿನಲ್ಲಿ ಭತ್ತ ಬಿತ್ತನೆಯ ಕೊರತೆಯಾಗಿದೆ. ಸದ್ಯಕ್ಕೆ ಈವರೆಗಿನ ಮಾಹಿತಿ ಪ್ರಕಾರ ತೊಗರಿ ಎರಡೂವರೆ ಲಕ್ಷ ಹೆಕ್ಟೇರಿನಲ್ಲಿ, ಹೆಸರುಕಾಳು 2.22 ಲಕ್ಷ ಹೆಕ್ಟೇರಿನಲ್ಲಿ, ಹತ್ತಿ 1.43 ಲಕ್ಷ ಹೆಕ್ಟೇರ್, ಶೇಂಗಾ 93 ಸಾವಿರ ಹೆಕ್ಟೇರ್, ಸೂರ್ಯಕಾಂತಿ 71 ಸಾವಿರ ಹೆಕ್ಟೇರಿನಲ್ಲಿ ಬಿತ್ತನೆಯಾಗದೆ ಕೊರತೆಯುಂಟಾಗಿದೆ ಎಂದು ಅಂಕಿಅಂಶಗಳನ್ನು ನೀಡಿದರು.
ರಾಗಿ, ಭತ್ತ, ಸೂರ್ಯಕಾಂತಿ ಬಿತ್ತನೆಗೆ ಇನ್ನೂ ಸಮಯಾವಕಾಶ ಇದೆ. ರಾಗಿ ಸೆಪ್ಟೆಂಬರ್ 15 ರವರೆಗೂ ಬಿತ್ತನೆ ಮಾಡಬಹುದಾಗಿದ್ದು, ಈವರೆಗಿನ 3.5 ಲಕ್ಷ ಹೆಕ್ಟೇರ್ ಕೊರತೆಯಲ್ಲಿ ಬಹಳಷ್ಟು ಪ್ರದೇಶ ಬಿತ್ತನೆಯಾಗುವ ಅಂದಾಜಿದೆ ಎಂದರು.
ಬರ ಪೀಡಿತ ಪ್ರದೇಶಗಳ ಘೋಷಣೆ ಮಾಡಲು ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಶೇ. 60 ರಷ್ಟು ಮಳೆ ಕೊರತೆಯಾಗಿರಬೇಕು. ಸತತ ಮೂರು ವಾರಗಳ ಕಾಲ ಒಣಹವೆ ಮುಂದುವರೆದಿರಬೇಕು. ಶೇ. 75 ಕ್ಕಿಂತ ಕಡಿಮೆ ಪ್ರದೇಶದಲ್ಲಿ ಬಿತ್ತನೆಯಾಗಿರುವುದು, ಮಣ್ಣಿನಲ್ಲಿ ಶೇ.50ಕ್ಕಿಂತ ಕಡಿಮೆ ತೇವಾಂಶ ಇರುವುದು, ಜಲಾಶಯಗಳಲ್ಲಿ ನೀರಿನ ಮಟ್ಟ ಆಧರಿಸಿ ಬರ ಘೋಷಣೆ ಮಾಡಬೇಕಿದೆ. ಇದರ ಅಧ್ಯಯನಕ್ಕಾಗಿ ರಚಿಸಲಾಗಿರುವ ಸಚಿವ ಸಂಪುಟ ಉಪ ಸಮಿತಿ ಮೊದಲ ಸುತ್ತಿನ ಸಭೆ ನಡೆಸಿದೆ ಎಂದು ತಿಳಿಸಿದರು ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಶೇ. 60 ರಷ್ಟು ಮಳೆ ಕೊರತೆಯ ಮಾನದಂಡವನ್ನಷ್ಟೇ ಪರಿಗಣಿಸದೆ ಕ್ಷೇತ್ರ ಮಟ್ಟದಲ್ಲಿ ವಾಸ್ತವಿಕ ಅಧ್ಯಯನದ ಮೂಲಕ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಇದರ ಆಧಾರದ ಮೇಲೆ ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳ ಜಂಟಿ ಸಮಿತಿ ಪ್ರತಿ ತಾಲೂಕಿನಲ್ಲಿ ಕನಿಷ್ಟ 10 ಗ್ರಾಮಗಳಿಗೆ ಭೇಟಿ ನೀಡಿ ವಾಸ್ತವಿಕ ಅಧ್ಯಯನ ನಡೆಸಿ ವರದು ಸಿದ್ಧಪಡಿಸಲಿದೆ. ಅದನ್ನು ಈ ತಿಂಗಳ 30ರೊಳಗಾಗಿ ಕೇಂದ್ರ ಸರ್ಕಾರಕ್ಕೆ ರವಾನೆ ಮಾಡಲಾಗುತ್ತಿದ್ದು, ಸೆಪ್ಟೆಂಬರ್ ಮೊದಲ ವಾರದಲ್ಲಿ ಮತ್ತೊಮ್ಮೆ ಉಪಸಮಿತಿ ಸಭೆ ನಡೆಸಿ ಚರ್ಚೆ ನಡೆಸುವ ಮೂಲಕ ಬರ ಪರಿಸ್ಥಿತಿಯನ್ನು ಘೋಷಣೆ ಮಾಡುವುದಾಗಿ ಹೇಳಿದರು.
ಪ್ರಸಕ್ತ ಮುಂಗಾರಿನಲ್ಲಿ ಬಿತ್ತನೆ ಮಾಡಿದ ಬೆಳೆಗಳು ಸಂಪೂರ್ಣ ಒಣಗಿ ಹೋಗಿರುವುದರಿಂದಬಾಗಲಕೋಟೆ, ಗದಗ, ತುಮಕೂರು ಮತ್ತು ಬೆಳಗಾವಿ ಜಿಲ್ಲೆಯ 194 ಗ್ರಾಮ ಪಂಚಾಯಿತಿಗಳಲ್ಲಿ 35,284 ರೈತರಿಗೆ 35.95 ಕೋಟಿ ರೂ. ಬೆಳೆವಿಮೆಯನ್ನು ಜೂನ್ 22 ರ ವೇಳೆಗೆ ಪಾವತಿ ಮಾಡಲಾಗಿದೆ. ದಾಖಲಾತಿಗಳ ಕೊರತೆ ಇರುವ ರೈತರಿಗೂ ವಿಮೆ ಪಾವತಿ ಮಾಡುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಪ್ರಧಾನಮಂತ್ರಿ ಪಸಲ್ ಭೀಮಾ ವಿಮೆಗಾಗಿ 16 ಲಕ್ಷ ನೋಂದಣಿಯಾಗಿದೆ. ಕಳೆದ ವರ್ಷ ಮಂಡ್ಯ ಜಿಲ್ಲೆ ಅತೀ ಹೆಚ್ಚು ವಿಮಾ ಸೌಲಭ್ಯವನ್ನು ರೈತರಿಗೆ ದೊರಕಿಸುವ ಮೂಲಕ ಕೇಂದ್ರ ಸರ್ಕಾರದಿಂದ ಪ್ರಶಂಸನಾ ಪತ್ರ ಪಡೆದುಕೊಂಡಿದೆ ಎಂದು ಹೇಳಿದರು.