ಬೆಂಗಳೂರು,ಫೆ.2-
ಪಾಗಲ್ ಪ್ರೇಮಿಯ ಕಾಟಕ್ಕೆ ಬೇಸತ್ತು ದಂತ ವೈದ್ಯೆಯೊಬ್ಬರು ತಮ್ಮ ಅಮೂಲ್ಯ ಜೀವವನ್ನು ಕಳೆದುಕೊಂಡಿರುವ ದಾರುಣ ಘಟನೆ ಸಂಜಯನಗರದಲ್ಲಿ ನಡೆದಿದೆ. ಎಂ.ಎಸ್ ರಾಮಯ್ಯ (MS Ramaiah) ಆಸ್ಪತ್ರೆಯಲ್ಲಿ ದಂತ ವ್ಯೆದ್ಯೆಯಾಗಿ ಕೆಲಸ ಮಾಡುತ್ತಿರುವ ಉತ್ತರಪ್ರದೇಶದ ಲಖನೌ ಮೂಲದ ದಂತವ್ಯೆದ್ಯೆ ಪ್ರಿಯಾಂಶಿ ತ್ರಿಪಾಠಿ (28) ಪಾಗಲ್ ಪ್ರೇಮಿಯ ಕಾಟದಿಂದ ಬೇಸತ್ತು ಜನವರಿ 25 ರಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯ ಸುಮಿತ್ ಎಂಬಾತ ಪ್ರಿಯಾಂಶಿಗೆ ಪ್ರೇಮ ನಿವೇದನೆ ಮಾಡಿದ್ದ. ಆದರೆ, ಇದಕ್ಕೆ ಆಕೆ ಒಪ್ಪಿಲಿಲ್ಲ. ಇಷ್ಟಕ್ಕೇ ಸುಮ್ಮನಾಗದ ಸುಮಿತ್, ವಿವಾಹವಾಗುವಂತೆ ಯಾವಾಗಲೂ ಒತ್ತಾಯ ಮಾಡುತ್ತಿದ್ದ. ಅಲ್ಲದೆ, ಹಣಕ್ಕಾಗಿ ಪೀಡಿಸುತ್ತಿದ್ದ ಎಂದು ತಿಳಿದುಬಂದಿದೆ.
ಮದ್ಯ ಸೇವನೆ ಮತ್ತು ಸಿಗರೇಟ್ ಸೇದುವಂತೆ ಪ್ರಿಯಾಂಶಿಗೆ ಒತ್ತಾಯ ಮಾಡುತ್ತಿದ್ದ ಸುಮಿತ್, ಆಕೆಯ ನಡತೆಯ ಬಗ್ಗೆ ಆಸ್ಪತ್ರೆಯಲ್ಲೆಲ್ಲ ಸುಳ್ಳು ಹೇಳಿದ್ದ. ಆಕೆ ಸರಿಯಿಲ್ಲ. ಆಕೆಯನ್ನು ಯಾರೂ ಮದುವೆ ಆಗಲ್ಲ ಎಂದು ನಿಂದಿಸಿದ್ದ. ಸುಮಿತ್ ಕಾಟವನ್ನು ತಡೆಯದೇ ಪ್ರಿಯಾಂಶಿ ಮನೆಯವರಿಗೆ ವಿಷಯ ತಿಳಿಸಿದ್ದರು. ‘ನನ್ನನ್ನು ವಾಪಸ್ ಲಖನೌಗೆ ಕರೆದುಕೊಂಡು ಹೋಗಿ, ನನ್ನನ್ನು ಸುಮಿತ್ ಬದುಕಲು ಬಿಡುತ್ತಿಲ್ಲ’ ಎಂದು ಹೇಳಿದ್ದರು. ಆದರೆ, ಪ್ರಿಯಾಂಶಿ ಪಾಲಕರು ಸುಮಿತ್ಗೆ ಬುದ್ಧಿಮಾತು ಹೇಳಿದ್ದರು. ಅಲ್ಲದೆ, ಆತನ ತಂದೆಗೆ ಕರೆ ಮಾಡಿ ಮಗನ ಬಗ್ಗೆ ದೂರು ನೀಡಿ, ತಮ್ಮ ಮಗಳ ವಿಚಾರಕ್ಕೆ ಬರದಿರುವಂತೆ ತಿಳಿಹೇಳಿ ಎಂದಿದ್ದರು.
ಇಷ್ಟೆಲ್ಲ ಆದರೂ ಬುದ್ಧಿ ಕಲಿಯದ ಸುಮಿತ್, ಮತ್ತೆ ಪ್ರಿಯಾಂಶಿಗೆ ತೊಂದರೆ ಕೊಡಲು ಆರಂಭಿಸಿದ್ದ. ಆಕೆಯ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡುತ್ತಿದ್ದ. ಇದರಿಂದ ಮನನೊಂದ ಪ್ರಿಯಾಂಶಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಳು. ಕಳೆದ ಜ.24ರ ಬೆಳಗ್ಗೆ ಪ್ರಿಯಾಂಶಿ ತಾಯಿ ಆಕೆಗೆ ಕರೆ ಮಾಡಿದ್ದಾರೆ. ಆದರೆ, ಎಷ್ಟು ಬಾರಿ ರಿಂಗ್ ಆದರೂ ಕರೆ ಸ್ವೀಕರಿಸಿದ ಹಿನ್ನೆಲೆಯಲ್ಲಿ ಗಾಬರಿಗೊಂಡ ಪ್ರಿಯಾಂಶಿ ತಾಯಿ, ಮಗಳು ವಾಸವಿದ್ದ ಮನೆಯ ಮಾಲೀಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ತಕ್ಷಣ ಮಾಲೀಕರು ಮನೆಯ ಬಳಿ ಹೋಗಿ ನೋಡಿದಾಗ ಪ್ರಿಯಾಂಶಿ ಒಳಗಡೆಯಿಂದ ಲಾಕ್ ಮಾಡಿರುವುದು ಕಂಡುಬಂದಿದೆ. ತಕ್ಷಣ ಮಾಲೀಕರು ಸಂಜಯನಗರ ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಅದೇ ದಿನ ಸಂಜೆ 5 ಗಂಟೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮನೆಗೆ ಬಾಗಿಲು ತೆರೆದು ನೋಡಿದಾಗ ಪ್ರಿಯಾಂಶಿ ನೇಣು ಬಿಗಿದುಕೊಂಡಿರುವುದು ಬಯಲಾಗಿದೆ. ಈ ಸಂಬಂಧ ಪ್ರಿಯಾಂಶಿ ತಂದೆ ಸುಶೀಲ್ ತ್ರಿಪಾಠಿ ಅವರು ವೈದ್ಯ ಸುಮಿತ್ ವಿರುದ್ಧ ದೂರು ದಾಖಲಿಸಿದ್ದಾರೆ. ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಿದ್ದೇ ಮಗಳ ಆತ್ಮಹತ್ಯೆಗೆ ಕಾರಣ ಎಂದು ದೂರಿನಲ್ಲಿ ಪ್ರಿಯಾಂಶಿ ತಂದೆ ಉಲ್ಲೇಖಿಸಿದ್ದಾರೆ. IPC ಸೆಕ್ಷನ್ 306 ಅಡಿಯಲ್ಲಿ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.