ಬೆಂಗಳೂರು, ಮಾ.6 – ರಾಜ್ಯಸಭೆ ಚುನಾವಣೆಯಲ್ಲಿ ನಾಸೀರ್ ಹುಸೇನ್ ಗೆಲುವಿನ ಬಳಿಕ ಪಾಕಿಸ್ತಾನ್ ಜಿಂದಾಬಾದ್
ಘೋಷಣೆ ಕೂಗಿ ಬಂಧಿತನಾಗಿರುವ ಆರೋಪಿ ಮುನಾವರ್ ಅಹಮದ್ ಐಎಎಸ್ ಅಧಿಕಾರಿಯ ಮನೆಯಲ್ಲಿ ಬಾಡಿಗೆಗೆ ಇರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಪ್ರತಿಷ್ಠಿತ ಪ್ರದೇಶಗಳಲ್ಲಿ ಒಂದಾಗಿರುವ ಜಯಮಹಲ್ 1ನೇ ಕ್ರಾಸ್‌ನ ನಂಬರ್ 27ಸಿ ನಂಬರ್‌ನ ಮನೆಯಲ್ಲಿ ಆರೋಪಿ ಮುನಾವರ್ ಕುಟುಂಬದೊಂದಿಗೆ ವಾಸವಾಗಿದ್ದ.
ಮುನಾವರ್ ನೆಲೆಸಿದ್ದ ಮನೆ ಜೆ.ಸಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವುದರಿಂದ ಆರೋಪಿ ಮನೆಗೆ ಜೆಸಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮುನಾವರ್ ಬಂಧನದ ಬೆನ್ನಲ್ಲೇ ಆತನ ಕುಟುಂಬಸ್ಥರು ಮನೆಗೆ ಬೀಗ ಹಾಕಿ ತೆರಳಿದ್ದಾರೆ.
ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದ ಬೆನ್ನಲ್ಲೇ ಕಾಂಗ್ರೆಸ್ಸಿನ ನಾಸೀರ್ ಹುಸೇನ್ ಬೆಂಬಲಿಗರಾದ ಬ್ಯಾಡಗಿಯ ಮೊಹಮ್ಮದ್ ಶಾಫಿ ನಾಶಿಪುಡಿ, ಮುನಾವರ್ ಅಹ್ಮದ್, ದೆಹಲಿಯ ಮೊಹಮ್ಮದ್ ಇಲ್ತಾಜ್ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದರು. ಬಂಧಿತ ಮೂವರ ಪೈಕಿ ನಾಶೀಪುಡಿ, ಮುನಾವರ್ ಸ್ನೇಹಿತರಾಗಿದ್ದರೆ ಮಹಮ್ಮದ್ ಇಲ್ತಾಜ್‌ಗೆ ಇಬ್ಬರು ಆರೋಪಿಗಳಿಗೂ ಪರಿಚಯವಿಲ್ಲ. ಬಂಧಿತ ಮೂವರ ಮೊಬೈಲ್ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಪೊಲೀಸರು ಈಗ ಮುಂದಾಗಿದ್ದಾರೆ. ಮೂವರನ್ನು ಕಸ್ಟಡಿಗೆ ಪಡೆದಿರುವ ಪೊಲೀಸರು ಆರೋಪಿಗಳ ಪೂರ್ವ ಪರ ಏನು? ಅವರ ಉದ್ದೇಶ ಏನಾಗಿತ್ತು? ಈ ವೇಳೆ ಬೇರೆ ಯಾರಾದರೂ ಇವರಿಗೆ ಬೆಂಬಲ ನೀಡಿದ್ರಾ? ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ಆಕಸ್ಮಿಕವೇ? ಅಥವಾ ಉದ್ದೇಶ ಪೂರ್ವಕವೇ ಎಂಬುದನ್ನು ಪರಿಶೀಲನೆ ನಡೆಸಲಿದ್ದಾರೆ.