ಬೆಂಗಳೂರು, ಆ.14 – ಕೇಂದ್ರ ಸರ್ಕಾರದ ಮೂಲಕ ಬಿಜೆಪಿಯವರು ಮನುವಾದ ಮನುಸ್ಮೃತಿಯನ್ನು ಆಧರಿಸಿದ ಶಿಕ್ಷಣ ನೀಡಲು ಹೊಸ ನೀತಿಯನ್ನು (NEP) ಜಾರಿಗೆ ತಂದಿದ್ದಾರೆ. ರಾಜ್ಯದಲ್ಲಿ ಇದಕ್ಕೆ ಅವಕಾಶವಿಲ್ಲ ಮುಂದಿನ ವರ್ಷದಿಂದ ನಾವು ಅದನ್ನು ಬದಲಾವಣೆ ಮಾಡಿ ಸಂವಿಧಾನಬದ್ಧ ಶಿಕ್ಷಣ ನೀಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ ಪ್ರದೇಶ ಕಾಂಗ್ರೆಸ್ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಯಾವ ರಾಜ್ಯಗಳಲ್ಲೂ ನೂತನ ಶಿಕ್ಷಣ ನೀತಿ ಜಾರಿಯಾಗಿರಲಿಲ್ಲ. ಆದರೆ ರಾಜ್ಯದಲ್ಲಿ ಅದನ್ನು ಅನುಷ್ಠಾನಗೊಳಿಸಿದ್ದಾರೆ. ಈ ವರ್ಷ ತಡವಾಗಿದೆ. ಮುಂದಿನ ವರ್ಷ ಶಿಕ್ಷಣ ನೀತಿಯನ್ನು ಬದಲಾವಣೆ ಮಾಡಿ ಸಂವಿಧಾನಬದ್ಧ ಶಿಕ್ಷಣ ನೀಡಲು ಪ್ರಯತ್ನಿಸುತ್ತೇವೆ ಎಂದರು.
ಇದಕ್ಕೆ ಅಗತ್ಯವಾದ ಕೆಲವೊಂದು ಸಿದ್ಧತೆಗಳನ್ನು ಮಾಡಿಕೊಂಡು ಹೊಸ ಶಿಕ್ಷಣ ನೀತಿ ರದ್ದುಗೊಳಿಸಬೇಕಿದೆ. ಈ ವರ್ಷ ಅದಕ್ಕೆ ಸಮಯ ಇರಲಿಲ್ಲ. ಚುನಾವಣೆ ಫಲಿತಾಂಶ ಬಂದು ಸರ್ಕಾರ ರಚನೆ ಆಗುವ ವೇಳೆಗೆ ಶೈಕ್ಷಣಿಕ ವರ್ಷ ಆರಂಭವಾಗಿತ್ತು. ಮಧ್ಯದಲ್ಲಿ ಸಮಸ್ಯೆ ಆಗಬಾರದು ಎನ್ನುವ ಕಾರಣದಿಂದ ಈ ವರ್ಷ ಹಾಗೆಯೇ ಮುಂದುವರೆದಿದೆ ಎಂದು ಸ್ಪಷ್ಟಪಡಿಸಿದರು ಕೇಂದ್ರದ ಶಿಕ್ಷಣ ನೀತಿಗೆ ಏಕ ಕಾಲದಲ್ಲಿ ವಿದ್ಯಾರ್ಥಿಗಳು, ಪೋಷಕರು ಮತ್ತು ಉಪನ್ಯಾಸಕರು ಹಾಗೂ ಶಿಕ್ಷಕರ ವಿರೋಧವಿದೆ. ಬಿಜೆಪಿ ದೇಶದಲ್ಲಿ ಎಲ್ಲೂ ಈ ನೀತಿ ಜಾರಿಗೊಳಿಸದೆ ರಾಜ್ಯದಲ್ಲಿ ಮೊದಲ ಬಾರಿಗೆ ಜಾರಿಗೊಳಿಸಿ ನಾಡಿನ ವಿದ್ಯಾರ್ಥಿ ಸಮೂಹದ ಹಿತಾಸಕ್ತಿಯನ್ನು ಬಲಿಕೊಟ್ಟಿದೆ ಎಂದು ಆಪಾದಿಸಿದರು.
ಹಿಂದೆ ರಾಜರ ಆಡಳಿತದಲ್ಲಿ ಮನುವಾದವೇ ಜಾರಿಯಲ್ಲಿತ್ತು. ಅದರ ಪ್ರಕಾರ, ಮೇಲ್ವರ್ಗದವರು ಅತ್ಯಾಚಾರದಂತಹ ಅಪರಾಧ ಮಾಡಿದರೂ ಶಿಕ್ಷೆ ಇರುತ್ತಿರಲಿಲ್ಲ. ಕೆಳವರ್ಗದವರು ಅದೇ ಅಪರಾಧ ಮಾಡಿದ್ದರೆ ಕಠಿಣ ಶಿಕ್ಷೆ ಎದುರಿಸಬೇಕಿತ್ತು. ಸಂವಿಧಾನ ಇದನ್ನು ತೊಡೆದು ಹಾಕಿದೆ. ಸಂವಿಧಾನ ಉಳಿದರೆ ಅದು ಜನರನ್ನು ರಕ್ಷಿಸುತ್ತದೆ. ಹೀಗಾಗಿ ಸಂವಿಧಾನವನ್ನು ಕಾಪಾಡಿಕೊಳ್ಳುವುದು ಕಾಂಗ್ರೆಸಿಗರ ಕರ್ತವ್ಯ ಎಂದು ಹೇಳಿದರು.
ಹಿಂದೆ ರಾಜ್ಯದಲ್ಲಿ ಅಕಾರದಲ್ಲಿದ್ದ ಬಿಜೆಪಿ ಸರ್ಕಾರ ಕೋಮುವಾದವನ್ನ ಪ್ರಯೋಗಶೀಲವನ್ನಾಗಿ ಮಾಡಿತ್ತು. ಭ್ರಷ್ಟಾಚಾರ, ಅನಾಚಾರ, ಅನ್ಯಾಯ ಮಾಡಿತ್ತು. ಜಾತ್ಯಾತೀತ ತಳಹದಿಯನ್ನು ಅಲುಗಾಡಿಸಿತ್ತು ಎಂದು ದೂರಿದರು.
ALSO READ | Latest Kannada News