ಬೆಂಗಳೂರು, ಫೆ. 17-
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಮ್ಮ ಕೊನೆಯ ಬಜೆಟ್ ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ (Department of Kannada and Culture) ಗೆ ಹೆಚ್ಚಿನ ಮಹತ್ವ ನೀಡಿದ್ದು, ಹಲವು ಹೊಸ ಯೋಜನೆಗಳನ್ನು ಪ್ರಕಟಿಸಿದ್ದಾರೆ.
ಪ್ರಮುಖವಾಗಿ ಆಡಳಿತದಲ್ಲಿ, ಕೈಗಾರಿಕೋದ್ಯಮಗಳಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಕನ್ನಡದ ವ್ಯಾಪಕ ಬಳಕೆಗಾಗಿ ಹಾಗೂ ಕನ್ನಡಿಗರ ಹಿತಾಸಕ್ತಿಯ ರಕ್ಷಣೆಗಾಗಿ ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ಅಧಿನಿಯಮವನ್ನು ಜಾರಿಗೆ ತರಲಾಗುವುದು ಎಂದು ಘೋಷಿಸಿದ್ದಾರೆ.
‘ನಮ್ಮ ಜಿಲ್ಲೆ ನಮ್ಮ ಸಂಸ್ಕೃತಿ‘ ಎಂಬ ಹೊಸ ಯೋಜನೆ ರೂಪಿಸಲಾಗಿದೆ. ಇದರಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ಎಲ್ಲಾ ವರ್ಗದ ಸ್ಥಳೀಯ ಕಲಾವಿದರನ್ನು ಒಳಗೊಂಡಂತೆ ಜಾನಪದ ಹಬ್ಬವನ್ನು ಆಯೋಜನೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಗಡಿನಾಡು ಪ್ರದೇಶದಲ್ಲಿ ಕನ್ನಡ ಭಾಷೆ, ಕಲೆ, ಶಿಕ್ಷಣ ಮತ್ತು ಸಂಸ್ಕೃತಿಯ ವಿಕಾಸಕ್ಕೆ ಪ್ರಾಶಸ್ತ್ಯವನ್ನು ನೀಡಲಾಗುವುದು. ಹಾಗೆಯೇ ಗಡಿ ಪ್ರದೇಶದ ರಸ್ತೆಗಳ ಹಾಗೂ ಸಮಗ್ರ ಅಭಿವೃದ್ಧಿಗೆ ವಿವಿಧ ಇಲಾಖೆಗಳ ಮುಖಾಂತರ 150 ಕೋಟಿ ರೂ. ಒದಗಿಸಲಾಗುವುದು. ಕರ್ನಾಟಕ ಜಗತ್ತಿನೆಲ್ಲೆಡೆ ಒಂದು ಶಕ್ತಿಯಾಗಿ ಹೊರ ಹೊಮ್ಮುತ್ತಿದ್ದು, ಕನ್ನಡವನ್ನು ಹೊರ ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಹೆಮ್ಮೆಯ ಕನ್ನಡಿಗರನ್ನು ಒಳಗೊಂಡ 3ನೇ ವಿಶ್ವ ಕನ್ನಡ ಸಮ್ಮೇಳನವನ್ನು ದಾವಣಗೆರೆಯಲ್ಲಿ ಆಯೋಜಿಸಲಾಗುವುದು ಎಂದು ತಿಳಿಸಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಮತ್ತು ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಮಹನೀಯರ ಬದುಕು ಮತ್ತು ಸಾಧನೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲು ಅವರ ಜೀವನಗಾಥೆಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಲಾಗುವುದು ಎಂದರು.
ಕರ್ನಾಟಕ ಏಕೀಕರಣದಲ್ಲಿ ಮಹತ್ವದ ಪಾತ್ರವನ್ನು ವಹಿಸಿದ ಹಾಗೂ ಇಂದಿಗೂ ಕನ್ನಡ ನಾಡು-ನುಡಿಯ ಸೇವೆಯಲ್ಲಿ ಸಕ್ರಿಯವಾಗಿರುವ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಚಟುವಟಿಕೆಗಳಿಗೆ ನೆರವು ನೀಡಲಾಗುವುದು.
ಯುವಜನರ ಸರ್ವತೋಮುಖ ಅಭಿವೃದ್ಧಿಯ ನಿಟ್ಟಿನಲ್ಲಿ ‘ಯುವ ನೀತಿ 2022‘ ಅನ್ನು ರೂಪಿಸಲಾಗಿದೆ. ಗ್ರಾಮೀಣ ಯುವಕರ ಸ್ವಯಂ ಉದ್ಯೋಗವನ್ನು ಪ್ರೋತ್ಸಾಹಿಸಲು 2022-23ನೇ ಸಾಲಿನಲ್ಲಿ ‘ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ‘ಯಡಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಚನೆಯಾದ ಸ್ವಾಮಿ ವಿವೇಕಾನಂದ ಯುವಕರ ಜಂಟಿ ಬಾಧ್ಯತಾ ಗುಂಪುಗಳಿಗೆ ತಲಾ 10,000 ರೂ.ನಂತೆ ಸುತ್ತುನಿಧಿ ಹಾಗೂ ಸ್ವಯಂ ಉದ್ಯೋಗ ಚಟುವಟಿಕೆಗಳನ್ನು ಕೈಗೊಳ್ಳಲು ಒಂದು ಲಕ್ಷ ರೂ., ಒಳಗೊಂಡಂತೆ ಬ್ಯಾಂಕ್ಗಳ ಸಹಾಯದೊಂದಿಗೆ 5 ಲಕ್ಷ ರೂ. ವರೆಗೆ ಸಹಾಯಧನ ನೀಡಲಾಗುವುದು ಎಂದು ತಿಳಿಸಿದರು.
ನಾಡು, ನುಡಿ, ಸಂಸ್ಕೃತಿ ಕುರಿತು ಅಮೂಲ್ಯ ಕೃತಿಗಳನ್ನು ಪ್ರಕಟಿಸುತ್ತಿರುವ ಕನ್ನಡ ಪುಸ್ತಕ ಪ್ರಾಧಿಕಾರದ ಚಟುವಟಿಕೆಗಳಿಗೆ 2 ಕೋಟಿ ರೂ. ನೆರವು ನೀಡಲಾಗುವುದು.ದೇಶವನ್ನು ಆಳಿದ ಗಂಗ, ಕದಂಬ, ರಾಷ್ಟ್ರಕೂಟ, ಚಾಲುಕ್ಯ, ಹೊಯ್ಸಳ ಮತ್ತಿತರ ಕನ್ನಡದ ರಾಜವಂಶಗಳ ಇತಿಹಾಸ ಹಾಗೂ ಕೊಡುಗೆಗಳ ಬಗ್ಗೆ ಕನ್ನಡ ವಿಶ್ವವಿದ್ಯಾಲಯದ ವತಿಯಿಂದ ಅಧ್ಯಯನ ಮಾಡಲಾಗುವುದು ಎಂದರು.
ಕರ್ನಾಟಕ ರಾಜ್ಯದ ಕನ್ನಡ ಮಾತೆಯಾದ ಶ್ರೀ ಭುವನೇಶ್ವರಿ ತಾಯಿಯ ಬೃಹತ್ ಮೂರ್ತಿ ಹಾಗೂ ಥೀಮ್ ಪಾರ್ಕ್ ಅನ್ನು ಬೆಂಗಳೂರು ನಗರದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಪ್ರಕಟಿಸಿದರು. ಬೆಂಗಳೂರಿನ ಸಂಸ್ಕೃತಿ ಹಾಗೂ ಧಾರ್ಮಿಕ ಶ್ರದ್ಧೆಯ ಅವಿಭಾಜ್ಯ ಅಂಗವಾಗಿರುವ ಕರಗ ಉತ್ಸವ ಆಚರಣೆಗೆ ಸರ್ಕಾರದಿಂದ ವಿಶೇಷ ಅನುದಾನವನ್ನು ಒದಗಿಸಲಾಗುವುದು ಎಂದು ಹೇಳಿದ್ದಾರೆ.