ಬೆಂಗಳೂರು,ಡಿ.6-
ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ಹಾಗೂ ಕೈದಿಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲು ಪ್ರಿಸನರ್ಸ್ ಟ್ರ್ಯಾಕಿಂಗ್ ಮೂವ್ಮೆಂಟ್ ಸಿಸ್ಟಂ ಜಾರಿಗೊಳಿಸಲಾಗುತ್ತಿದೆ.
ಮಾದಕವಸ್ತುಗಳ ಸೇವನೆ, ಮೊಬೈಲ್ ಬಳಕೆ ಸೇರಿದಂತೆ ಜೈಲಿನಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ತಹಬದಿಗೆ ತರಲು ಹಾಗೂ ಜೈಲು ಸಿಬ್ಭಂದಿಯ ಹೊಣೆಗಾರಿಕೆ ಹೆಚ್ಚಿಸಿ, ಆಡಳಿತದಲ್ಲಿ ಪಾರದರ್ಶಕತೆ ಮೂಡಿಸಲು ಟ್ರ್ಯಾಕಿಂಗ್ ಸಿಸ್ಟಮ್ ಜಾರಿ ತರಲು ಸಲ್ಲಿಸಿದ್ದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಈಗಿರುವ ಸಿಸಿಟಿವಿ ಕ್ಯಾಮರಾಗಳಿಗೆ ಕೃತಕ ಬುದ್ದಿಮತ್ತೆ (ಎಐ) ಸ್ಪರ್ಶ, ಕೈದಿಗಳ ಫೋನ್ ಕರೆ ವ್ಯವಸ್ಥೆ ಸಂಪೂರ್ಣ ಡಿಜಿಟಲ್ ಟ್ರ್ಯಾಕಿಂಗ್, ಸಂದರ್ಶಕರನ್ನು ಭೇಟಿಯಾಗಲು ಡಿಜಿಟಲ್ ಟೋಕನ್ ಪದ್ಧತಿ ಸೇರಿದಂತೆ ಕಾರಾಗೃಹದಲ್ಲಿ ಬಂಧಿಗಳ ಚಲನವಲನಗಳ ಮೇಲೆ ಸಂಪೂರ್ಣ ನಿಗಾ ಇಡಲು ಪ್ರಿಸನರ್ಸ್ ಟ್ರ್ಯಾಕಿಂಗ್ ಮೂವ್ಮೆಂಟ್ ಸಿಸ್ಟಂ ಜಾರಿಗೆ ತರಲಾಗುತ್ತಿದೆ
ಸುಮಾರು 2.25 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಈ ಮೂಲಕ ರಾಜ್ಯದ ಜೈಲುಗಳು ಸ್ಮಾರ್ಟ್ ಆಗಲಿದ್ದು, ಅಕ್ರಮಗಳಿಗೆ ಬ್ರೇಕ್ ಹಾಕುವ ಇರಾದೆ ಇಲಾಖೆಯದಾಗಿದ್ದು ಸದ್ಯ ಯೋಜನೆಗೆ ಟೆಂಡರ್ ಕರೆದಿದೆ.
ಶಿಕ್ಷಾಬಂಧಿಗಳು ಹಾಗೂ ವಿಚಾರಣಾಧೀನ ಕೈದಿಗಳು ಪ್ರತ್ಯೇಕ ಬ್ಯಾರಕ್ಗಳಲ್ಲಿದ್ದರೂ ಊಟ ಹಾಗೂ ಚಿಕಿತ್ಸೆ ಪಡೆಯುವ ನೆಪದಲ್ಲಿ ಒಂದೇ ಕಡೆ ಸೇರುತ್ತಿದ್ದಾರೆ. ಇದರಿಂದ ಪರಸ್ಪರ ವಿಚಾರ ವಿನಿಮಯಗೊಂಡು ಪರೋಕ್ಷವಾಗಿ ಅಪರಾಧ ಚಟುವಟಿಕೆಗಳಿಗೆ ಕಾರಣವಾಗುತ್ತಿದ್ದಾರೆ. ವಿಚಾರಣಾಧೀನ ಹಾಗೂ ಸಜಾಬಂಧಿಗಳಿಗೆ ಪ್ರತ್ಯೇಕ ಊಟದ ಕ್ಯಾಂಟೀನ್ ಜೊತೆ, ಸಣ್ಣಪುಟ್ಟ ಚಿಕಿತ್ಸೆ ಪಡೆಯಲು ಆಯಕಟ್ಟಿನ ಜಾಗದಲ್ಲಿ ಹೊರ ರೋಗಿಗಳ ವಿಭಾಗ (ಒಪಿಡಿ) ತೆರೆಯಲು ಮುಂದಾಗಿದೆ. ಗಂಭೀರ ಪ್ರಮಾಣದಲ್ಲಿ ಅನಾರೋಗ್ಯಕ್ಕೆ ಒಳಗಾಗುವ ಕೈದಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು.
ಸಂದರ್ಶಕರ ಭೇಟಿ ಕೊಠಡಿಗೆ ಜೈಲಿನ ವಿವಿಧ ಬ್ಯಾರಕ್ನಿಂದ ಪ್ರವೇಶದ್ವಾರಕ್ಕೆ ಬರುವ ಕೈದಿಗಳು ಮಾತುಕತೆ ನಡೆಸಿದ ಬಳಿಕ ನೇರವಾಗಿ ಬ್ಯಾರಕ್ಗೆ ಹೋಗದೆ, ಆಸ್ಪತ್ರೆ ಹಾಗೂ ಸಜಾಬಂಧಿಗಳ ಬ್ಯಾರಕ್ಗಳಿಗೆ ಹೋಗುತ್ತಿದ್ದರು. ಇದನ್ನು ನಿಯಂತ್ರಿಸಲು ಇದೀಗ ಯೋಜನೆ ರೂಪಿಸಲಾಗುತ್ತಿದೆ.
ಸಂದರ್ಶಕರ ಭೇಟಿ ಬಳಿಕ ಮತ್ತೆ ಕೈದಿಯಿದ್ದ ಬ್ಯಾರಕ್ಗೆ ತೆರಳಲು ಬಯೊಮೆಟ್ರಿಕ್ ಜೊತೆಗೆ ಟೋಕನ್ ಸಿಸ್ಟಮ್ ಪರಿಚಯಲಾಗುತ್ತಿದೆ. ಟೋಕನ್ನಲ್ಲಿ ಹೆಸರು, ಕೈದಿ ಸಂಖ್ಯೆ, ಸಮಯ ಸೇರಿದಂತೆ ಇನ್ನಿತರ ಅಂಶಗಳು ಮುದ್ರಿತವಾಗಿರಲಿದೆ. ಗಮ್ಯ ಸ್ಥಳಕ್ಕೆ ತೆರಳಿ ಜೈಲು ಸಿಬ್ಬಂದಿಗೆ ಟೋಕನ್ ನೀಡಿದಾಗ ಉದ್ದೇಶಿತ ಸಾಫ್ಟ್ವೇರ್ನಲ್ಲಿ ಸಿಬ್ಬಂದಿ ಅಪ್ಡೇಟ್ ಮಾಡುತ್ತಾರೆ. ಹೀಗೆ ಪ್ರತಿ ಬಾರಿ ಸಂದರ್ಶಕರನ್ನು ಭೇಟಿಯಾಗಲು ಬಂದು ಹೋಗುವ ಕೈದಿಗಳ ಚಲನವಲನಗಳ ಸಂಪೂರ್ಣ ದತ್ತಾಂಶ ಸಂಗ್ರಹವಾಗಲಿದೆ. ಇನ್ನಿತರ ಕೈದಿಗಳೊಡನೆ ಕೂಡಿ ಅಕ್ರಮ ಚಟುವಟಿಕೆಗೆ ಮುಂದಾದರೆ ಅಂತಹ ಕೈದಿಗಳ ವಿರುದ್ಧ ಕ್ರಮಕೈಗೊಳ್ಳಲು ಟ್ರ್ಯಾಕಿಂಗ್ ಸಿಸ್ಟಮ್ ಸಹಕಾರಿಯಾಗಲಿದೆ ಎಂದು ಜೈಲಾಧಿಕಾರಿಗಳು ತಿಳಿಸಿದ್ದಾರೆ.
Previous Articleಸಾಲದಲ್ಲಿ ಮುಳುಗುತ್ತಿದ್ದಾರೆ ಭಾರತೀಯರು!
Next Article ಕೇಂದ್ರ ಸರ್ಕಾರದ ವಿರುದ್ಧ ಡಿಸಿಎಂ ಕಿಡಿ

