ಬೆಂಗಳೂರು,ಫೆ,14: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ (Rajya Sabha Elections) ನಾಲ್ಕು ಸ್ಥಾನಗಳಿಗೆ ಫೆಬ್ರುವರಿ 27 ರಂದು ನಡೆಯಲಿರುವ ಚುನಾವಣೆಗೆ ಅಖಾಡ ಸಂಪೂರ್ಣ ಸಜ್ಜುಗೊಂಡಿದೆ ಆಯ್ಕೆ ಬಯಸಿ ಕಾಂಗ್ರೆಸ್ ನಿಂದ ಮೂವರು ಮತ್ತು ಬಿಜೆಪಿಯಿಂದ ಒಬ್ಬರು ಕಣಕ್ಕಿಳಿಯಲಿದ್ದಾರೆ.
ದೆಹಲಿಯಿಂದ ಆಗಮಿಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ಸುರ್ಜೆವಾಲ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ನಿಂದ ದೆಹಲಿಯ ಹಿರಿಯ ನಾಯಕ ಅಜಯ್ ಮಾಕೇನ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಯಿತು ಇದರ ಜೊತೆಯಲ್ಲಿ ಸದ್ಯ ರಾಜ್ಯಸಭಾ ಸದಸ್ಯತ್ವದಿಂದ ನಿವೃತ್ತರಾಗುತ್ತಿರುವ ನಾಸಿರ್ ಹುಸೇನ್ ಮತ್ತು ಜಿ.ಸಿ. ಚಂದ್ರಶೇಖರ್ ಅವರಿಗೆ ಮತ್ತೊಂದು ಅವಧಿಗೆ ರಾಜ್ಯಸಭೆಯ ಸದಸ್ಯರಾಗಲು ಅವಕಾಶ ನೀಡಬೇಕು ಎಂದು ತೀರ್ಮಾನಿಸಲಾಯಿತು.
ಇದಾದ ನಂತರ ಎಐಸಿಸಿ ತನ್ನ ಊರಿಯಾಳುಗಳ ಪಟ್ಟಿ ಪ್ರಕಟಿಸಿತು.
ಶಾಸನಸಭೆಯಲ್ಲಿ ಹೊಂದಿರುವ ಸಂಖ್ಯಾಬಲದ ಆಧಾರದಲ್ಲಿ ಆಡಳಿತರೂಢ ಕಾಂಗ್ರೆಸ್ ನಿಂದ ಮೂವರು ಮತ್ತು ಬಿಜೆಪಿಯಿಂದ ಒಬ್ಬರು ಸುಲಭವಾಗಿ ಆಯ್ಕೆಯಾಗಲಿದ್ದಾರೆ ಹೆಚ್ಚುವರಿ ಮತಗಳಿಂದ ಲಾಭ ಪಡೆಯಲು ಪ್ರಯತ್ನ ನಡೆಸಬೇಕು ಎಂಬ ವಿಚಾರವಾಗಿ ಜೆಡಿಎಸ್ ಮತ್ತು ಬಿಜೆಪಿ ವಲಯದಲ್ಲಿ ಚರ್ಚೆ ನಡೆಯಿತಾದರೂ ಒಮ್ಮತ ಮೂಡಿಲ್ಲ ಎಂದು ಗೊತ್ತಾಗಿದೆ.
ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಲು ಒಬ್ಬ ಅಭ್ಯರ್ಥಿಗೆ 46 ಮತಗಳ ಅವಶ್ಯಕತೆ ಇದೆ ಬಿಜೆಪಿಯಿಂದ ಒಬ್ಬ ಅಭ್ಯರ್ಥಿ ಆಯ್ಕೆ ಸುಲಭವಾಗಿದೆ. ಉಳಿದ ಹೆಚ್ಚುವರಿ ಮತ ಮತ್ತು ಜೆಡಿಎಸ್ ಮತಗಳ ಆಧಾರದಲ್ಲಿ ಮತ್ತೊಂದು ಅಭ್ಯರ್ಥಿಯನ್ನು ಕಣಕ್ಕಿಳಿಸುವ ಚರ್ಚೆ ನಡೆಯಿತು ಈ ಎರಡು ಪಕ್ಷಗಳು ಒಟ್ಟಾದಲ್ಲಿ ತನ್ನ ಅಭ್ಯರ್ಥಿ ಆಯ್ಕೆಗೆ 5 ಮತಗಳ ಕೊರತೆ ಉಂಟಾಗಲಿದೆ ಇದನ್ನು ಕಾಂಗ್ರೆಸ್ಸಿನ ಅಸಮಾಧಾನಿತರು ಮತ್ತು ಪಕ್ಷೇತರ ಸದಸ್ಯರ ನೆರವಿನೊಂದಿಗೆ ಸಾಧ್ಯ ಮಾಡಬಹುದು ಎಂದು ಮಾತುಕತೆ ನಡೆದಿತ್ತು.
ಶಾಸಕರ ಮತಗಳನ್ನು ಗಿಟ್ಟಿಸುವ ನಿಟ್ಟಿನಲ್ಲಿ ಯಾರಾದರೂ ಬಲಾಢ್ಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇ ಆದಲ್ಲಿ, ಜೆಡಿಎಸ್ ಅದಕ್ಕೆ ಬೆಂಬಲ ನೀಡಲಿದೆ ಅಷ್ಟೇ ಅಲ್ಲ ಕಾಂಗ್ರೆಸ್ಸಿನಲ್ಲಿರುವ ಅಸಮಾಧಾನಿತರ ಮತಗಳನ್ನು ಸೆಳೆಯಲು ಪ್ರಯತ್ನ ನಡೆಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ. ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಿದ್ದರು ಎನ್ನಲಾಗಿದೆ.
ಪಕ್ಷದ ಹಿರಿಯ ನಾಯಕ ಅಮಿತ್ ಶಾ ರಾಜ್ಯ ಭೇಟಿಯ ವೇಳೆ ಈ ವಿಷಯ ಕುರಿತಂತೆ ಸುಧೀರ್ಘ ಚರ್ಚೆ ನಡೆದು ಅಂತಿಮವಾಗಿ ರಾಜ್ಯ ನಾಯಕರು ನೀಡುವ ವರದಿ ಆಧರಿಸಿ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದ್ದರು.
ಅದರಂತೆ ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಸಿದ ಪ್ರತಿಪಕ್ಷ ನಾಯಕ ಆರ್ ಅಶೋಕ್ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಎಚ್.ಪಿ. ರಾಜೇಶ್ ಜೆಡಿಎಸ್ ಬಿಜೆಪಿ ಮೈತ್ರಿ ಮಾಡಿಕೊಂಡು ಐದನೇ ಅಭ್ಯರ್ಥಿ ಕಣಕ್ಕಿಳಿಸಿದರೆ ಉಂಟಾಗಬಹುದಾದ ರಾಜಕೀಯ ವಿದ್ಯಮಾನಗಳ ಕುರಿತಂತೆ ಚರ್ಚೆ ನಡೆಸಿದರು.
ಕಾಂಗ್ರೆಸ್ಸಿನ ಅಸಮಾಧಾನಿತರು ಮತ್ತು ಪಕ್ಷೇತರರ ಬೆಂಬಲ ಪಡೆಯಲು ಸಾಧ್ಯವೇ ಎಂದು ಉದ್ಯಮಿ ಹಾಗೂ ಬಿಜೆಪಿ ಮುಖಂಡ ಪ್ರಕಾಶ್ ಶೆಟ್ಟಿ ಮತ್ತು ಜೆಡಿಎಸ್ ಮುಖಂಡ ಕುಪೇಂದ್ರ ರೆಡ್ಡಿ ಅವರ ಅಭಿಪ್ರಾಯ ಕೇಳಲಾಯಿತು ಆದರೆ ಈ ಇಬ್ಬರು ಪಕ್ಷದಿಂದ ಖಚಿತ ಭರವಸೆ ನೀಡಿದರೆ ಮಾತ್ರ ಕಣಕ್ಕಿಳಿಯಲು ಸಿದ್ದ ಎಂಬ ಸಂದೇಶ ರವಾನಿಸಿದರು ಎಂದು ಗೊತ್ತಾಗಿದೆ.
ಇದಾದ ಬಳಿಕ ಬಿಜೆಪಿ ಚಿಂತಕರ ಚಾವಡಿಯಲ್ಲಿ ಈ ಕುರಿತಂತೆ ಸುಧೀರ್ಘ ಚರ್ಚೆ ನಡೆದಿದ್ದು ಒಂದು ವೇಳೆ ಚುನಾವಣೆ ನಡೆದಿದ್ದೆ ಆದರೆ ಬಿಜೆಪಿಯ ಶಾಸಕರಾದ ಎಸ್ ಟಿ ಸೋಮಶೇಖರ್, ಶಿವರಾಮ ಹೆಬ್ಬಾರ್ ಜೆ ಡಿ ಎಸ್ ನ ವೆಂಕಟಶಿವಾ ರೆಡ್ಡಿ, ಕರೆಮ್ಮ, ಸಮೃದ್ಧಿ ಮಂಜುನಾಥ್, ಶರಣಗೌಡ ಕುಂದಕೂರ ಅವರ ಮತಗಳು ಮೈತ್ರಿ ಅಭ್ಯರ್ಥಿಯ ಪರವಾಗಿ ಬೀಳುವ ಸಾಧ್ಯತೆ ಕಡಿಮೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಲೋಕಸಭೆ ಚುನಾವಣೆ ಸಮಯದಲ್ಲಿ ಈ ಮೂಲಕ ಪಕ್ಷದಲ್ಲಿನ ಆಂತರಿಕ ಗೊಂದಲ ಬಹಿರಂಗಗೊಂಡಲ್ಲಿ ಅದು ನೇರ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂಬ ವರದಿಗಳನ್ನು ಆಧರಿಸಿ ಐದನೇ ಅಭ್ಯರ್ಥಿಯಾಗಿ ಯಾರನ್ನು ಕಣಕ್ಕಿಳಿಸುವುದು ಬೇಡ ಎಂಬ ತೀರ್ಮಾನಕ್ಕೆ ಬಿಜೆಪಿ ನಾಯಕರು ಬಂದರು ಎನ್ನಲಾಗಿದೆ.
ಇದಾದ ಬಳಿಕ ಪಕ್ಷದ ಅಧ್ಯಕ್ಷ ವಿಜಯೇಂದ್ರ ಅವರು ಹೈಕಮಾಂಡ್ ಗೆ ರಾಜ್ಯದ ರಾಜಕೀಯ ಚಿತ್ರಣವನ್ನು ವಿವರಿಸಿ ಜೆಡಿಎಸ್ ನ ಭರವಸೆಯನ್ನು ನಂಬಿಕೊಂಡು ಇನ್ನೊಂದು ಅಭ್ಯರ್ಥಿ ಕಣಕ್ಕಿಳಿಸುವುದು ಸೂಕ್ತ ಎನಿಸುವುದಿಲ್ಲ ಎಂಬ ವರದಿ ರವಾನಿಸಿದ್ದಾರೆ ಇದನ್ನು ಗಮನಿಸಿದ ಹೈಕಮಾಂಡ್ ಮತ್ತೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಪ್ರಸ್ತಾಪ ಕೈ ಬಿಟ್ಟಿದೆ ಎಂದು ಗೊತ್ತಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಯ ನಾರಾಯಣ ಸಾ ಬಾಂಡಗೆ, ಕಾಂಗ್ರೆಸ್ ನ ಅಜಯ್ ಮಾಕೇನ್ ನಾಸೀರ್ ಹುಸೇನ್ ಮತ್ತು ಜಿ. ಸಿ. ಚಂದ್ರಶೇಖರ್ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.
1 ಟಿಪ್ಪಣಿ
Максимальные скидки с нашим промокодом. Максимальные скидки с нашим промокодом. .