ಬೆಂಗಳೂರು, ಜ. 11: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಸಮಿತಿ ರಚನೆಯ ನಿರ್ಧಾರ ಸರ್ಕಾರದ ಹಣದಲ್ಲಿ ಕಾಂಗ್ರೆಸ್ (Congress) ಕಾರ್ಯಕರ್ತರಿಗೆ ಬಿರಿಯಾನಿ ತಿನ್ನಿಸುವ ಕಾರ್ಯಕ್ರಮವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಬರಗಾಲದಿಂದ ತತ್ತರಿಸಿರುವ ರೈತರಿಗೆ ಪರಿಹಾರ ನೀಡಲು ಕಾಂಗ್ರೆಸ್ (Congress) ಸರ್ಕಾರದ ಬಳಿ ಹಣವಿಲ್ಲ. ಆದರೆ ಕಾಂಗ್ರೆಸ್‌ನ ಚೇಲಾಗಳಿಗೆ ಬಿರಿಯಾನಿ ಊಟ ಕೊಡಿಸಲು, ಮಜಾ ಮಾಡಲು ಮಾತ್ರ 150 ಕೋಟಿ ರೂಪಾಯಿ ಇದೆ ಎಂದು ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗಾಲದಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರವಾಗಿ ಕಾಂಗ್ರೆಸ್ ಸರ್ಕಾರ 100 ಕೋಟಿ ರೂ.ಬಿಡುಗಡೆಗೊಳಿಸುತ್ತಿದೆ. ನ್ಯಾಯವಾಗಿ 3-4 ಸಾವಿರ ಕೋಟಿ ರೂ. ನೀಡಬೇಕಿತ್ತು. ಈಗ ಗ್ಯಾರಂಟಿ ಜಾರಿ ಸಮಿತಿಯ 3 ಸಾವಿರ ಕಾಂಗ್ರೆಸ್ ಕಾರ್ಯಕರ್ತರಿಗೆ 25 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತದೆ. ಅಂದರೆ ಐದು ವರ್ಷಕ್ಕೆ 150 ಕೋಟಿ ರೂಪಾಯಿಯಾಗಲಿದೆ. ಕಾಂಗ್ರೆಸ್ ಚೇಲಾಗಳಿಗೆ ಮಜಾ ಮಾಡಲು ಇಷ್ಟು ಹಣ ಖರ್ಚು ಮಾಡಲಾಗುತ್ತಿದೆ. ಅವರಿಗೆ ಕ್ಯಾಬಿನೆಟ್ ದರ್ಜೆ ನೀಡಲಾಗುತ್ತದೆ. ಸರ್ಕಾರ ರೈತರಿಗೆ ಯಾವಾಗ ಕ್ಯಾಬಿನೆಟ್ ದರ್ಜೆಯ ಗೌರವ ಕೊಟ್ಟು ಪರಿಹಾರ ನೀಡಲಿದೆ ಎಂದು ಪ್ರಶ್ನಿಸಿದರು.
ಸರ್ಕಾರಿ ಶಾಲೆಗಳ ಶೌಚಾಲಯ ಸ್ವಚ್ಛಗೊಳಿಸಲು ಸರ್ಕಾರದ ಬಳಿ ಹಣವಿಲ್ಲ. ಆದರೆ ಕಾರ್ಯಕರ್ತರಿಗೆ ಬಿರಿಯಾನಿ, ಮಟನ್ ಊಟ ಹಾಕಲು ಹಣವಿದೆ. ಇದೇ ಹಣವನ್ನು ಶಾಲೆಗಳಿಗೆ ಕೊಡಬಹುದು. ಗ್ಯಾರಂಟಿ ನಿರ್ವಹಣೆಗೆ ಬೇಕಿದ್ದರೆ ಅಧಿಕಾರಿಗಳನ್ನು ಬಳಸಿಕೊಳ್ಳಲಿ. ಈಗಾಗಲೇ ಸರ್ಕಾರಿ ಕಚೇರಿಗಳಲ್ಲಿ ತಂತ್ರಾಂಶ ಕೆಲಸ ಮಾಡುತ್ತಿಲ್ಲ. ಇದರ ಬಗ್ಗೆ ಗಮನಹರಿಸಲಿ ಎಂದು ಕಿವಿಮಾತು ಹೇಳಿದರು.