ಬೆಂಗಳೂರು, ಜ.13: ಎನ್.ಆರ್. ರಮೇಶ್ (NR Ramesh), ರಾಜಧಾನಿ ಬೆಂಗಳೂರಿನ ಪ್ರಭಾವಿ ಬಿಜೆಪಿ ನಾಯಕ.ಪ್ರತಿಪಕ್ಷಗಳ ವಿರುದ್ಧ ಸಮರ ಸಾರುವ ಮೂಲಕ ಗಮನಸೆಳೆದ ನಾಯಕ.
ಅದರಲ್ಲೂ ಪ್ರಮುಖವಾಗಿ ಕಾಂಗ್ರೆಸ್ ನಾಯಕರು ಮತ್ತು ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡುವ ಮೂಲಕ ಪ್ರಭಾವಿ ಪ್ರತಿಪಕ್ಷ ಮುಖಂಡರಾಗಿ ಗುರುತಿಸಿಕೊಂಡಿದ್ದಾರೆ.
ಹಲವಾರು ಹಗರಣಗಳ ಬಗ್ಗೆ ಲೋಕಾಯುಕ್ತ ತನಿಖೆಗೆ ಆಗ್ರಹಿಸಿ ದಾಖಲೆ ಸಮೇತ ದೂರು ಸಲ್ಲಿಸಿದ್ದಾರೆ.2018 ಮತ್ತು 2023 ರ ವಿಧಾನಸಭೆ ಚುನಾವಣೆಗಳ ಸಂದರ್ಭಗಳಲ್ಲಿ ಅವರು ಬಯಲಿಗೆಳೆದಿದ್ದ ಹಗರಣಗಳನ್ನೇ ಪುಸ್ತಕಗಳ ರೂಪದಲ್ಲಿ ಹೊರತಂದ ಬಿಜೆಪಿ ಪ್ರಚಾರ ಸಮಿತಿ ಕಾಂಗ್ರೆಸ್ ವಿರುದ್ಧದ ಪ್ರಚಾರದಲ್ಲಿ ಅದನ್ನು ಪ್ರಬಲ ಅಸ್ತ್ರವನ್ನಾಗಿ ಬಳಸಿತ್ತು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರಾಗಿ ಕೆಲಸ ಮಾಡಿದ್ದ ರಮೇಶ್ ಅವರು ಗಾಂಧಿನಗರ,ಚಿಕ್ಕಪೇಟೆ ಮತ್ತು ಜಯನಗರ ವಿಧಾನಸಭೆ ಕ್ಷೇತ್ರಗಳಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಬಯಸಿದ್ದರು. ಬಿಜೆಪಿ ಟಿಕೆಟ್ ನ
ಪ್ರಬಲ ಆಕಾಂಕ್ಷಿಯಾಗಿದ್ದರು.
ಆದರೆ ಪಕ್ಷದ ವರಿಷ್ಠರು ಹಲವಾರು ನೆಪಗಳನ್ನು ಮುಂದೊಡ್ಡಿ ಅವರಿಗೆ ಟಿಕೆಟ್ ನಿರಾಕರಿಸಿದರು. ಅದರಲ್ಲೂ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿರುವ ಆರ್.ಅಶೋಕ್ ಯಾವುದೇ ಕಾರಣಕ್ಕೂ ಎನ್.ಆರ್.ರಮೇಶ್ (NR Ramesh) ಅವರಿಗೆ ಟಿಕೆಟ್ ನೀಡಬಾರದು ಎಂದು ವರಿಷ್ಠರ ಮುಂದೆ ಬಿಗಿಪಟ್ಟು ಹಿಡಿದಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ.
ಇದಾದ ನಂತರವೂ ವರಿಷ್ಠರು ವಿಧಾನಸಭೆ ಚುನಾವಣೆ ವೇಳೆ ರಮೇಶ್ ಅವರನ್ನು ಸಂಪರ್ಕಿಸಿ ನಿಮ್ಮ ಸಂಘಟನಾ ಚಾತುರ್ಯ,ಹೋರಾಟ, ಜನಪ್ರಿಯತೆ ಎಲ್ಲವನ್ನೂ ಗಮನಿಸಿದೆ ಹೀಗಾಗಿ ತಾವು ದುಡುಕಿ ಯಾವುದೇ ತೀರ್ಮಾನ ತೆಗೆದುಕೊಳ್ಳಬಾರದು.ಪಕ್ಷ ಸೂಕ್ತ ಸಮಯದಲ್ಲಿ ತಮಗೆ ಗೌರವಯುತವಾದ ಸ್ಥಾನಮಾನ ನೀಡಲಿದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅಂದು ಆಮ್ ಆದ್ಮಿ ಸೇರಿದಂತೆ ಇತರೆ ಪಕ್ಷ ಸೇರ್ಪಡೆ ಯತ್ನಕ್ಕೆ ತಡೆ ಹಾಕಿದ್ದರು.
ಆದರೆ,ಚುನಾವಣೆ ಘೋಷಣೆಯಾದಗಿನಿಂದ ಇಲ್ಲಿಯವರೆಗೂ ಇವರಿಗೆ ಯಾವುದೇ ಸ್ಥಾನಮಾನವಾಗಲಿ,ಗೌರವವಾಗಲಿ ಸಿಗಲಿಲ್ಲ.ಇದರ ಬದಲಿಗೆ ಅವರನ್ನು ಕಡೆಗಣಿಸಲಾಯಿತು.ಪಕ್ಷದ ಯಾವುದೇ ಸಭೆ, ಸಮಾರಂಭ, ಕಾರ್ಯಕ್ರಮಗಳಿಗೆ ಆಹ್ವಾನ ನೀಡುತ್ತಿಲ್ಲ ಇದು ರಮೇಶ್ ಅವರಿಗೆ ತೀವ್ರ ಬೇಸರ ಉಂಟುಮಾಡಿದೆ.
ಕೇವಲ ರಮೇಶ್ ಮಾತ್ರವಲ್ಲದೆ ಅವರ ಬೆಂಬಲಿಗರಿಗೂ ಪಕ್ಷದ ಚಟುವಟಿಕೆಗಳಲ್ಲಿ ಅವಕಾಶ ನೀಡುತ್ತಿಲ್ಲ ಇದರಿಂದ ಬೇಸರಗೊಂಡಿರುವ ಅವರು ಪಕ್ಷಕ್ಕೆ ಗುಡ್ ಬೈ ಹೇಳಲು ಸಜ್ಜಾಗಿದ್ದಾರೆ ಎಂದು ಹೇಳಲಾಗುತ್ತಿದೆ.ರಮೇಶ್ ಅವರ ಅಭಿಮಾನಿಗಳು ಮತ್ತು ಕುಟುಂಬಸ್ಥರು ಇಷ್ಟೊಂದು ಅನ್ಯಾಯ ಮಾಡಿರುವ ಬಿಜೆಪಿಯಲ್ಲಿ ಇರುವುದು ಸರಿಯಲ್ಲ ಎಂದು ಒತ್ತಾಯಿಸುತ್ತಿದ್ದು, ನಿಮ್ಮ ರಾಜಕೀಯ ಜೀವನವನ್ನು ಹಾಳುಗೆಡವಿರುವ ಬೆಂಗಳೂರಿನ ಬಿಜೆಪಿ ನಾಯಕರಿಗೆ ಸರಿಯಾದ ಪಾಠ ಕಲಿಸಬೇಕು ನೀವು ಈ ಕೂಡಲೇ ಬಿಜೆಪಿಯಿಂದ ಹೊರಬಂದು ಬಿಜೆಪಿ ನಾಯಕರ ಹಗರಣಗಳನ್ನು ಬಯಲಿಗೆಳೆದು ದೂರುಗಳನ್ನು ದಾಖಲಿಸುವ ಮೂಲಕ ಸರಿಯಾದ ಪಾಠ ಕಲಿಸಬೇಕೆಂದು ಪಟ್ಟು ಹಿಡಿದಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ರಮೇಶ್ ಅವರು ಬಿಜೆಪಿ ನಾಯಕರ ಭಾವಚಿತ್ರ ಹಾಗೂ ಚಿನ್ಹೆ ಇಲ್ಲದೆ ಜಾಹಿರಾತು ನೀಡಿದ್ದಾರೆ ಪ್ರಮುಖ ಪತ್ರಿಕೆಗಳಲ್ಲಿ ಬಂದಿರುವ ಜಾಹಿರಾತು ರಮೇಶ್ ಅವರು ಪಕ್ಷ ತೊರೆಯಲು ಸಜ್ಜಾಗಿರುವ ವಿಷಯವನ್ನು ದೃಢಪಡಿಸುತ್ತದೆ.