ಬೆಂಗಳೂರು,ಜೂ.16- ಓಎಲ್ ಎಕ್ಸ್ ಆ್ಯಪ್ ಮೂಲಕ ವಾಹನ ಮಾರುವ, ಖರೀದಿಸುವವರನ್ನು ಸಂಪರ್ಕಿಸಿ, ಹಣ ಪಡೆದು ವಂಚನೆ ಮಾಡುತ್ತಿದ್ದ ಖತರ್ನಾಕ್ ಖದೀಮನೊಬ್ಬನನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಕನಕಪುರದ ತಾಲೂಕಿನ ಕಡವೆಕೆರೆದೊಡ್ಡಿಯ ಮಂಜುನಾಥ ಎನ್.ಅಲಿಯಾಸ್ ಓಎಲ್ ಎಕ್ಸ್ ಮಂಜ(30)ಬಂಧಿತ ಆರೋಪಿಯಾಗಿದ್ದಾನೆ ಎಂದು ಡಿಸಿಪಿ ಡಾ.ಅನೂಪ್ ಎ.ಶೆಟ್ಟಿ ತಿಳಿಸಿದ್ದಾರೆ.
ಬಂಧಿತನಿಂದ 3 ಕಾರುಗಳು, 1 ದ್ವಿಚಕ್ರ ವಾಹನ, ಕೃತ್ಯಕ್ಕೆ ಬಳಸುತ್ತಿದ್ದ ವಿವಿಧ ಮಾದರಿಯ 5 ಮೊಬೈಲ್ ಗಳು, ವಾಹನಗಳ ನಕಲಿ ನಂಬರ್ ಪ್ಲೇಟ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿದ್ಯಾರಣ್ಯಪುರದ ದೊಡ್ಡಬೊಮ್ಮಸಂದ್ರದ ಆದರ್ಶ ಅವರು ಬೈಕ್ ಅನ್ನು ಮಾರಾಟ ಮಾಡುವುದಾಗಿ ಓಎಲ್ ಎಕ್ಸ್ ಆ್ಯಪ್ ಜಾಹೀರಾತು ಹಾಕಿದ್ದು, ಆದನ್ನು ನೋಡಿದ ಅರೋಪಿಯು ಬಂದು ಟೆಸ್ಟ್ ಡ್ರೈವ್ ಮಾಡುವುದಾಗಿ ಹೇಳಿ ತೆಗೆದುಕೊಂಡು ಹೋಗಿದ್ದು, ವಾಪಸ್ಸು ತಂದು ಕೊಡದೇ ಮೋಸ ಮಾಡಿದ್ದು ಈ ಸಂಬಂಧ ಆದರ್ಶ ನೀಡಿದ ದೂರು ದಾಖಲಿಸಿ ಕಾರ್ಯಾಚರಣೆ ಕೈಗೊಂಡ ವಿದ್ಯಾರಣ್ಯಪುರ ಪೊಲೀಸ್ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್ ಮತ್ತವರ ಸಿಬ್ಬಂಧಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯು ಮಂಜುನಾಥ ಸೆಕ್ಯೂರಿಟಿ ಗಾರ್ಡ್‍ಗಳು, ನಿರುದ್ಯೋಗಿಗಳನ್ನು ಸಂಪರ್ಕಿಸಿ ಅವರಿಗೆ ಕೆಲಸ ಕೊಡಿಸುತ್ತೇನೆಂದು ನಂಬಿಸಿ ಅವರ ಹೆಸರಿನಲ್ಲಿ ಸಿಮ್ ಕಾರ್ಡ್‍ಗಳನ್ನು ಖರೀದಿಸಿ ತನ್ನ ಬಳಿಯಲ್ಲೇ ಇಟ್ಟುಕೊಂಡು, ಸೆಕೆಂಡ್ ಹ್ಯಾಂಡ್ ಮೊಬೈಲ್‍ಗಳನ್ನು ಕಡಿಮೆ ಬೆಲೆಗೆ ಖರೀದಿಸಿ ವಂಚನೆ ಕೃತ್ಯಗಳಿಗೆ ಬಳಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಓಎಲ್ ಎಕ್ಸ್ ಆ್ಯಪ್ ನಲ್ಲಿ ಕಾರುಗಳು, ಬೈಕ್‍ಗಳನ್ನು ಮಾರುವ ಜಾಹಿರಾತು ಹಾಕುವವರನ್ನು ಸಂಪರ್ಕಿಸಿ, ತಾನು ಕಾರ್-ಬೈಕ್ ಡೀಲರ್ ಎಂದು ಪರಿಚಯಿಸಿಕೊಂಡು ಒಳ್ಳೆಯ ಬೆಲೆಗೆ ಮಾರಿ ಕೊಡುತ್ತೇನೆಂದು ನಂಬಿಸಿ,ಓಎಲ್ ಎಕ್ಸ್ ಆ್ಯಪ್ ನಲ್ಲಿ ಹಾಕಿದ್ದ ಜಾಹೀರಾತು ಡಿಲೀಟ್ ಮಾಡುವಂತೆ ಕೇಳಿಕೊಂಡು ಸ್ವಲ್ಪ ಮುಂಗಡ ಕೊಟ್ಟು ಜಾಹೀರಾತು ಡಿಲೀಟ್ ಮಾಡಿಸಿ, ಮಾಲಿಕರಿಂದ ವಾಹನಕ್ಕೆ ಸಂಬಂದಪಟ್ಟ ಆರ್.ಸಿ.ಬುಕ್. ದಾಖಲಾತಿಗಳನ್ನು ತೆಗೆದುಕೊಳ್ಳುತ್ತಿದ್ದ.
ಮಾಲೀಕರ ಹೆಸರಿನಲ್ಲೇ ಅಥವ ಬೇರೆ ನಕಲಿ ಹೆಸರಿನಲ್ಲಿ ಫೇಕ್ ಯೂಸರ್ ನೇಮ್ ಮತ್ತು ಇಮೇಲ್ ಐ.ಡಿ. ಕ್ರಿಯೇಟ್ ಮಾಡಿ
ಓಎಲ್ ಎಕ್ಸ್ ಆ್ಯಪ್ ನಲ್ಲಿ ಪೋಸ್ಟ್ ಮಾಡಿ ಗ್ರಾಹಕರನ್ನು ಸಂಪರ್ಕಿಸಿ, ತುರ್ತಾಗಿ ಹಣದ ಅವಶ್ಯಕತೆ ಇರುವ ಕಾರಣ ಕಡಿಮೆ ಬೆಲೆಗೆ ಮಾರುತ್ತಿರುವುದಾಗಿ ನಂಬಿಸಿ ವಾಹನದ ಅಸಲಿ ಮಾಲೀಕರಿಗೆ ತಿಳಿಯದಂತೆ ವಾಹನ ಕೊಳ್ಳಲು ಬರುವವರಿಂದ ನಗದು ರೂಪದಲ್ಲಿ ಹಣ ತೆಗದುಕೊಂಡು, 29, 30 ಫಾರಂ ಅನ್ನು ತರುವುದಾಗಿ ಹೇಳಿ ಗಮನ ಬೇರೆಡೆ ಸೆಳೆದು ಹಣದ ಸಮೇತ ಪರಾರಿಯಾಗುತ್ತಿದ್ದದ್ದನ್ನು ಬಾಯ್ಬಿಟ್ಟಿದ್ದಾನೆ.
ಇದೇ ರೀತಿಯಾಗಿ ಓಎಲ್ ಎಕ್ಸ್ ಆ್ಯಪ್ ನಲ್ಲಿ ಜಾಹಿರಾತು ಹಾಕುವ ವಾಹನ ಮಾಲಿಕರನ್ನು ಸಂಪರ್ಕಿಸಿ ವಾಹನದ ಟೆಸ್ಟ್ ಡ್ರೈವ್ ಮಾಡುವುದಾಗಿ ಹೇಳಿ ವಾಹನಗಳನ್ನು ತೆಗೆದುಕೊಂಡು ಪರಾರಿಯಾಗಿ, ಸದರಿ ವಾಹನದ ನಂಬರ್ ಪ್ಲೇಟ್ ಬದಲಾಯಿಸಿ ಬೇರೆ ಬೇರೆ ಅಪರಾದ ಕೃತ್ಯಗಳಿಗೆ ಬಳಸುತ್ತಿರುತ್ತಾನೆ.
ಆರೋಪಿಯ ಬಂಧನದಿಂದ ವಿದ್ಯಾರಣ್ಯಪುರ,ಜಯನಗರ,ಮಲ್ಲೇಶ್ವರಂ, ಕೋಣನಕುಂಟೆ, ಬೇಗೂರು, ರಾಜರಾಜೇಶ್ವರಿನಗರ, ಹೆಬ್ಬಗೋಡಿ ಮೈಸೂರಿನ ಲಕ್ಷ್ಮೀಪುರ, ಚನ್ನರಾಯಪಟ್ಟಣ ಪೊಲೀಸ್ ಠಾಣೆಗೆ ಸಂಬಂದಿಸಿದ 9 ಪ್ರಕರಣಗಳು ಪತ್ತೆಯಾಗಿವೆ ಎಂದರು.
ಚನ್ನರಾಯಪಟ್ಟಣ ಠಾಣೆಯ ಪ್ರಕರಣದಲ್ಲಿ ಮೋಸದಿಂದ ಪಡೆದಿದ್ದ ಹಣದಿಂದ ಖರೀದಿಸಿದ್ದ ಹೋಂಡ ಸಿಟಿ ಕಾರು.
ಜಯನಗರಠಾಣೆಯ ಪ್ರಕರಣದಲ್ಲಿ ಕಳ್ಳತನ ಮಾಡಿದ್ದ ಐ-20 ಸ್ಪೋಟ್ಜ್ ಕಾರು, ಹೆಬ್ಬಗೋಡಿ ಠಾಣೆಯ ಪ್ರಕರಣದಲ್ಲಿ ಮೋಸದಿಂದ ಪಡೆದಿದ್ದ ನಗದು ಹಣದಿಂದ ಖರೀದಿಸಿದ್ದ ಪಿಯಾಟ್ ಲೀನಿಯಾ ಕಾರು, ರಾಜರಾಜೇಶ್ವರಿನಗರ ಠಾಣೆಯ ಪ್ರಕರಣಕ್ಕೆ ಸಂಬಂಧಿಸಿದ ಟಿ.ವಿ.ಎಸ್. ಅಪ್ಪಾಚ್ಚಿ ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
OLX ಜಾಹೀರಾತು ನೋಡಿ ಮರುಳಾಗದಿರಿ!! ಇಲ್ಲಿದ್ದಾರೆ ಖತರ್ನಾಕ್ ಕಳ್ಳರು!
Previous Articleವೀಕ್ಷಕರಿಗೆ ಬೇಡವಾದ ‘ಕನ್ನಡತಿ’
Next Article Facebook ನಿಂದ ಸಿಕ್ಕಿಬಿದ್ದ ಕಳ್ಳರು.. !!