ಬೆಂಗಳೂರು,ಫೆ.8-
ನಗರದಲ್ಲಿ ಪಾಕಿಸ್ತಾನದ ಯುವತಿ ಪತ್ತೆಯಾಗಿರುವ ಪ್ರಕರಣದ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಗಳಿಗೆ ರಾಜ್ಯ ಆಂತರಿಕ ಭದ್ರತಾ ವಿಭಾಗ (Internal Security Division) ಹಾಗು ರಾಜ್ಯ ಗುಪ್ತಚರ ವಿಭಾಗ (State Intelligence Branch) ಗಳಿಂದ ವರದಿ ಸಲ್ಲಿಕೆ ಮಾಡಲಾಗಿದೆ. ‘ಪಾಕಿಸ್ತಾನದ ಯುವತಿ ಇಕ್ರಾ ಹಾಗೂ ಬಿಹಾರದ ಮುಲಾಯಂ ಸಿಂಗ್ ಯಾದವ್ ಇಬ್ಬರಿಗೂ ಯಾವುದೇ ಅಪರಾಧ ಹಿನ್ನೆಲೆ ಇಲ್ಲ’ ಎಂದು ವರದಿ ನೀಡಲಾಗಿದೆ. ನಾಲ್ಕು ವರ್ಷಗಳ ಪ್ರೀತಿಯ ಬಳಿಕ ಭಾರತಕ್ಕೆ ಬರಲು ಯುವತಿ ಸಿದ್ಧಳಾಗಿದ್ದಳು. ಮನೆಯವರ ಒಪ್ಪಿಗೆ ಪಡೆದೇ ಭಾರತಕ್ಕೆ ಬಂದಿದ್ದಾಳೆ.
ಪಾಕಿಸ್ತಾನದ ಹೈದರಾಬಾದ್ ನಿಂದ ಕರಾಚಿ (Karachi) ಗೆ ಹೋಗಿದ್ದ ಯುವತಿ, ಅಲ್ಲಿಂದ ದುಬೈ (Dubai) ಗೆ ಹೋಗಿ ದುಬೈನಿಂದ ನೇಪಾಳ (Nepal) ಕ್ಕೆ ಬಂದಿದ್ದಳು. ನೇಪಾಳಕ್ಕೆ ಹೋಗಿ ಯುವತಿಯನ್ನು ಕರೆದುಕೊಂಡು ಬಂದಿದ್ದ ಮುಲಾಯಂಸಿಂಗ್ ಯಾದವ್ ಆಕೆಯೊಂದಿಗೆ ಉತ್ತರಪ್ರದೇಶ (Uttar Pradesh) ದಿಂದ ಬೆಂಗಳೂರಿಗೆ ಬಂದು ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದನು. ಪೊಲೀಸರು ಪತ್ತೆ ಮಾಡಿದ ಬಳಿಕ ಯುವತಿಯ ಬಗ್ಗೆ ಸಂಪೂರ್ಣ ಮಾಹಿತಿ ಜಾಲಾಡಿದ್ದ ISD ಹಾಗೂ ಗುಪ್ತಚರ ವಿಭಾಗದ ವರದಿಯಿಂದ ಪ್ರೀತಿಗಾಗಿಯೇ ಇಕ್ರಾ ಗಡಿ ದಾಟಿ ಬಂದಿರುವುದು ದೃಢವಾಗಿದೆ.
ಇನ್ನು FRRO ವಶದಲ್ಲಿರುವ ಇಕ್ರಾಳನ್ನು ಗಡಿಯ ಹೊರಗೆ ಕಳುಹಿಸಲು ಮಾತುಕತೆ ನಡೆಸಲಾಗಿದೆ. ಪ್ರೀತಿಗಾಗಿ ಶತ್ರುರಾಷ್ಟ್ರದಿಂದ ಯುವತಿಯನ್ನ ಕರೆತಂದ ಗುರುತರ ಆರೋಪ ಮುಲಾಯಂ ಸಿಂಗ್ ಮೇಲಿದ್ದು, ವಿಚಾರಣೆ ನಡೆಯುತ್ತಿದೆ.