ಬೆಂಗಳೂರು, ಆ.17- ವಿಧಾನಪರಿಷತ್ ನಾಮಕರಣ ಸದಸ್ಯರ ನೇಮಕ ಪ್ರಕರಣ ಕಾಂಗ್ರೆಸ್ ನಲ್ಲಿ ತೀವ್ರ ಅಸಮಧಾನಕ್ಕೆ ಕಾರಣವಾಗಿದೆ.
ದಲಿತ ಸಮುದಾಯದ ಖೋಟಾ ಹೆಸರಲ್ಲಿ ನಿವೃತ್ತ ಐಆರ್ ಎಸ್ ಅಧಿಕಾರಿ ಸುಧಾಂ ದಾಸ್ ಅವರನ್ನು ನೇಮಿಸುವ ಪ್ರಸ್ತಾವನೆಗೆ ಗೃಹ ಸಚಿವ ಪರಮೇಶ್ವರ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮ್ಮ ಅಸಮಧಾನ ತಿಳಿಸಿದ್ದಾರೆ ಎಂದು ಗೊತ್ತಾಗಿದೆ.
ಪಕ್ಷಕ್ಕೆ ಯಾವುದೇ ರೀತಿಯ ಕೊಡುಗೆ ನೀಡದ ವ್ಯಕ್ತಿಗೆ ದಲಿತ ಖೋಟಾದ ಹೆಸರಲ್ಲಿ ಅವಕಾಶ ನೀಡಿರುವ ಕ್ರಮ ಸರಿಯಲ್ಲ.ಈ ಸಮುದಾಯಕ್ಕೆ ಸೇರಿದ ಹಲವಾರು ಮಂದಿ ಪಕ್ಷದ ಕೆಲಸ ಮಾಡುತ್ತಾ ನಿಷ್ಠಾವಂತರಾಗಿ ಅವಕಾಶಕ್ಕೆ ಕಾಯುತ್ತಿದ್ದಾರೆ. ಅಂತಹವರಿಗೆ ಮಾನ್ಯತೆ ನೀಡುವ ಬದಲಿಗೆ ಯಾವುದೋ ಕಾರಣಕ್ಕೆ ಇಂತಹವರಿಗೆ ಅವಕಾಶ ನೀಡಿರುವ ಕ್ರಮ ಸರಿಯಲ್ಲ. ವರಿಷ್ಠರ ಜೊತೆ ಮಾತನಾಡಿ ರಾಜಭವನಕ್ಕೆ ಕಳುಹಿಸಿದ ಕಡತವನ್ನು ವಾಪಸ್ ಪಡೆಯಿರಿ ಎಂದು ಮನವಿ ಮಾಡಿರುವುದಾಗಿ ಗೊತ್ತಾಗಿದೆ.
ಈ ಬೆಳವಣಿಗೆಗಳ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸುಧಾಂದಾಸ್ ಅವರನ್ನು ಪರಿಷತ್ ಸದಸ್ಯರಾಗಿ ನಾಮಕರಣ ಮಾಡುವ ಕ್ರಮ ಸರಿಯಲ್ಲ. ಪ್ರಸ್ತುತ ಸಂದರ್ಭದಲ್ಲಿ ಪಕ್ಷಕ್ಕಾಗಿ ಹೆಚ್ಚು ಕೆಲಸ ಮಾಡಿದ, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಅವಕಾಶ ಮಾಡಿಕೊಡಬೇಕಿತ್ತು ಎಂದು ಹೇಳಿದರು.
ಸುಧಾಂದಾಸ್ ಅವರಿಗೂ ಸಾಮಥ್ಯ ಇದೆ. ಅವರಿಗೆ ಕೊಡಬಾರದು ಎಂಬುದು ನಮ್ಮ ಅಭಿಪ್ರಾಯವಲ್ಲ. ಅವರಿಗಿಂತಲೂ ಹೆಚ್ಚು ಸಮಾಜ ಸೇವೆ ಮಾಡಿದವರಿಗೆ ಅವಕಾಶ ಮಾಡಿಕೊಡಬೇಕಿತ್ತು ಎಂದು ಸ್ಪಷ್ಟಪಡಿಸಿದರು.
ಸಹಮತವಿಲ್ಲ:
ಎರಡೂವರೆ ವರ್ಷದ ಬಳಿಕ ಸಚಿವ ಸ್ಥಾನವನ್ನು ಬಿಟ್ಟುಕೊಡಲು ನನ್ನ ಸಹಮತ ಇಲ್ಲ.ಇದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರ ವೈಯಕ್ತಿಕ ಅಭಿಪ್ರಾಯ. ಅವರು ಎರಡೂವರೆ ವರ್ಷದ ಬಳಿಕ ಅಧಿಕಾರ ಬಿಟ್ಟುಕೊಡಬೇಕೆಂದು ಹೇಳಿದ್ದರೆ, ಅವರೇ ಬಿಟ್ಟುಕೊಡುತ್ತಾರೆ. ನಾನೇಕೆ ಬಿಟ್ಟುಕೊಡಲಿ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ತೊರೆದು ಹೋಗಿ ಮತ್ತೆ ಮರಳಿ ರಾಜ್ಯ ಬರುವುದಾಗಿ ಹೇಳುತ್ತಿರುವ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅವರಿಗೆ ಸ್ವಾಗತ ಇದೆ. ಈ ಹಿಂದೆ ಅವರು ಪಕ್ಷಕ್ಕಾಗಿ ದುಡಿದಿದ್ದಾರೆ. ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದಾಗ ಅವರನ್ನು ಬೆಂಗಳೂರು ಜಿಲ್ಲಾಧ್ಯಕ್ಷರನ್ನಾಗಿ ಮಾಡಿದೆ. ಎರಡು ಬಾರಿ ಶಾಸಕರಾಗಿದ್ದರು. ಇಲ್ಲೇ ಉಳಿದಿದ್ದರೆ ಅವರು ಸಚಿವರಾಗಿರುತ್ತಿದ್ದರು. ಬಿಜೆಪಿಯಲ್ಲಿ ಬೇಸರವಾಗಿದೆ. ಮರಳಿ ಬರುತ್ತೇನೆ ಎಂದರೆ ನಾವು ವಿರೋಧ ಮಾಡುವುದಿಲ್ಲ. ಅವರನ್ನು ಸ್ವಾಗತಿಸುತ್ತೇವೆ ಎಂದರು.
ಯಾರೇ ಬರುವುದಾದರೂ ಸ್ಥಾನಮಾನಕ್ಕಾಗಿ ಬರಬಾರದು, ಪಕ್ಷದ ನಾಯಕತ್ವ ಹಾಗೂ ಸಿದ್ಧಾಂತಗಳನ್ನು ಒಪ್ಪಿಯೇ ಬರಬೇಕು. ಇಲ್ಲಿಗೆ ಬಂದ ಮೇಲೆ ಉತ್ತಮ ಕೆಲಸಗಳನ್ನು ಮಾಡಿ ಜನಪ್ರಿಯತೆ ಮತ್ತು ಸಾಮಥ್ರ್ಯವನ್ನು ಗಳಿಸಿಕೊಂಡರೆ ಮುಂದೆ ಸೂಕ್ತ ಅವಕಾಶಗಳು ದೊರೆಯುತ್ತವೆ ಎಂದು ಹೇಳಿದರು.
ಬೇಸರವಿದೆ:
ಈ ವಿದ್ಯಮಾನಗಳ ನಡುವೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್,ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ವರಿಷ್ಠರು ಕ್ರಮ ಕೈಗೊಳ್ಳದೇ ಇರುವ ಬಗ್ಗೆ ಅಸಮಾಧಾನ ಇದೆ. ಹೀಗಾಗಿ ಸ್ವಾಭಿಮಾನ ಬಿಟ್ಟು ಪಕ್ಷದಲ್ಲಿ ಹೇಗಿರಬೇಕು ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ ಎಂದು ಹೇಳಿದರು
ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಬಿಡುವುದು ಅಥವಾ ಕಾಂಗ್ರೆಸ್ ಸೇರುವ ಪ್ರಶ್ನೆ ಇಲ್ಲ.ಸರ್ಕಾರ ರಚನೆಯಾಗಿ ಮೂರು ತಿಂಗಳು ಕಳೆದಿವೆ. ಈ ಬಾರಿಯೂ ಕ್ಷೇತ್ರದ ಅಭಿವೃದ್ಧಿಗೆ ಹಣ ಬಿಡುಗಡೆಯಾಗಿಲ್ಲ. ಕುಡಿಯುವ ನೀರಿನ ಸಮಸ್ಯೆಗಾಗಿ ಪ್ರತಿದಿನ ನೂರಾರು ಜನ ಕರೆ ಮಾಡುತ್ತಿದ್ದಾರೆ. ಈವರೆಗೂ ಒಂದು ಬೋರ್‍ವೆಲ್ ಕೊರೆಸಲಾಗಿಲ್ಲ, ನೀರು ಪೂರೈಕೆಯ ಒಂದು ಟ್ಯಾಂಕರ್ ಇಲ್ಲ, ನೀರು ಸರಬರಾಜು ಮಾಡಿದ ಟ್ಯಾಂಕರ್‍ಗಳಿಗೆ ಬಾಡಿಗೆ ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ನಾನು ಶಾಸಕನಾಗಿದ್ದು ಏನು ಪ್ರಯೋಜನ ಎಂದು ಪ್ರಶ್ನಿಸಿದರು