ಬೆಂಗಳೂರು,ಜೂ.28-ವಿಧಾನಸೌಧದ ಭದ್ರತಾ ಡಿಸಿಪಿ ವಿರುದ್ಧ ತಿರುಗಿ ಬಿದ್ದಿರುವ ಪೊಲೀಸ್ ಪೇದೆಯಾಗಿರುವ ಕಾರು ಚಾಲಕ ನಾಲ್ಕು ಪುಟಗಳಲ್ಲಿ ನನಗಾಗುತ್ತಿರುವ ಅನ್ಯಾಯದ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿ ದೂರು ನೀಡಿದ್ದಾರೆ.
ವಿಧಾನಸೌಧ ಭದ್ರತಾ ಡಿಸಿಪಿಯ ಹೆಸರು ಸೂಚಿಸದೇ ವಿಧಾನಸೌದ ಭದ್ರತಾ ಡಿಸಿಪಿ ಎಂದಷ್ಟೇ ದೂರಿನಲ್ಲಿ ಉಲ್ಲೇಖ ಮಾಡಿ ಪೇದೆ (ಚಾಲಕ) ಪವನ್ ದೂರು ದಾಖಲಿಸಿದ್ದಾರೆ.
ಅವಧಿ ಮೀರಿ ಕೆಲಸ ಮಾಡಿಸುತ್ತಾರೆ. ವಾರದ ರಜೆ ಹೊರತುಪಡಿಸಿ ಉಳಿದಂತೆ ರಜೆ ನೀಡುವುದಿಲ್ಲ. ದಿನದಲ್ಲಿ 13 ರಿಂದ ಹದಿನಾಲ್ಕು ಗಂಟೆ ಕೆಲಸ ಮಾಡಿಸಿಕೊಳ್ತಾರೆ. ದಣಿವಿಲ್ಲದೇ ಕೆಲಸ ಮಾಡಿಸಿಕೊಳ್ಳುತ್ತಿರುವ ಬಗ್ಗೆ ಹಲವು ಬಾರಿ ಡಿಸಿಪಿ ಬಳಿ ಮನವಿ ಮಾಡಿಕೊಂಡರೂ ಪರಿಷ್ಕರಿಸುತ್ತಿಲ್ಲ ಎಂದು ದೂರಿನಲ್ಲಿ ಅಳಲು ತೋಡಿಕೊಂಡಿದ್ದಾರೆ.
ದಿನದಲ್ಲಿ 14 ಗಂಟೆ ಕೆಲಸ ಮಾಡುತ್ತಿರುವುದರಿಂದ ನನ್ನ ಆರೋಗ್ಯ ಹದಗೆಟ್ಟಿದೆ. ಕೆಲಸದ ವೇಳೆ ಅನಾಹುತ, ಅವಘಡಗಳಾದರೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಗಾರರಾಗಬೇಕು ಎಂದು ಎಚ್ಚರಿಸಿದ್ದಾರೆ.
ಕಳೆದ 5 ತಿಂಗಳಿಂದ ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಚಾಲಕನಾಗಿ ನಾನು ಕೆಲಸ ಮಾಡುತ್ತಿದ್ದೇನೆ. 5 ತಿಂಗಳಲ್ಲಿ 50 ದಿನ ಹೊರತುಪಡಿಸಿ ಉಳಿದಂತೆ ಒಬ್ಬನೆ ಚಾಲಕನಾಗಿ ಕೆಲಸ ಮಾಡಿರುತ್ತೇನೆ. ಡಿಸಿಪಿಯವರ ಎರಡು ಕಾರಿಗೆ ಎರಡು ಚಾಲಕರಿದ್ದಾರೆ. ನಾನು ಅಧಿಕೃತವಾಗಿ ಡಿಸಿಪಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಉಳಿದಂತೆ ಇನ್ನೊಬ್ಬ ಚಾಲಕ ಹಾಗು ಕಾರನ್ನು ಡಿಸಿಪಿಯವರು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಿ ಕರೆದುಕೊಂಡು ಬರಲು ಬಳಸಿಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮಕ್ಕಳಿಗೆ ರಜೆ ಇದ್ದಾಗ ಅವರು ಕರ್ತವ್ಯಕ್ಕೆ ಬಂದರೆ ನನಗೆ ವಿಶ್ರಾಂತಿ ಕೊಡುತ್ತಾರೆಂದು ದೂರಿನಲ್ಲಿ ಪೇದೆ ಪವನ್ ಆರೋಪ ಮಾಡಿದ್ದು ಈ ದೂರು ಇಲಾಖೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.