ಬೆಂಗಳೂರು,ಜೂ.11- ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನು ಬೆದರಿಸಿ ಮೊಬೈಲ್ ಸುಲಿಗೆ ಮಾಡುತ್ತಿದ್ದ ಮತ್ತು ದ್ವಿ ಚಕ್ರ ವಾಹನ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉತ್ತರ ವಿಭಾಗದ ಜೆ.ಸಿ.ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಾಜಿನಗರ ಬ್ರಾಡ್ ವೇ ರಸ್ತೆ ಬಿ ಸ್ಟ್ರೀಟ್ ಇಲ್ಯಾಸ್ ಹೌಸ್ ನಿವಾಸಿ ಸಯ್ಯದ್ ನಿಝಾಮ್ (23) ಹಾಗು ಬ್ರಾಡ್ ವೇ ನಂ 7 ನಿವಾಸಿ ಸಯ್ಯದ್ ಅಲಿ (26) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ವಿನಾಯಕ ಪಾಟೀಲ್ ತಿಳಿಸಿದ್ದಾರೆ.
ಆರೋಪಿಗಳಿಂದ ಸುಮಾರು 5.95 ಲಕ್ಷ ರೂ. ಬೆಲೆಬಾಳುವ ವಿವಿಧ ಕಂಪನಿಗಳ 6 ದ್ವಿಚಕ್ರ ವಾಹನ, ವಿವಿಧ ಕಂಪನಿಯ 5 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೇ 23ರಂದು ಬೆಳಗ್ಗೆ ಬೆಳಗ್ಗೆ 8.12ರ ಸುಮಾರಿಗೆ ವ್ಯಕ್ತಿಯೊಬ್ಬರು ಜೆ.ಸಿ.ನಗರದ ಬೆನ್ಸನ್ ಕ್ರಾಸ್ ರಸ್ತೆಯ ಮಾಂಗಲ್ಯ ಅಪಾರ್ಟ್ ಮೆಂಟ್ ಹತ್ತಿರ ವಾಯುವಿವಾಹಕ್ಕೆ ತೆರಳುತ್ತಿದ್ದಾಗ ದ್ವಿ ಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ವ್ಯಕ್ತಿಯ ಬಳಿ ಇದ್ದ ಸ್ಯಾಮ್ ಸಂಗ್ ಮೊಬೈಲ್ ಕಿತ್ತು ಪರಾರಿಯಾಗಿದ್ದರು. ಈ ಬಗ್ಗೆ ಸಂತ್ರಸ್ತ ಜೆ.ಸಿ.ನಗರ ಪೊಲೀಸರಿಗೆ ದೂರು ನೀಡಿದ್ದರು.
ಆರೋಪಿ ಸಯ್ಯದ್ ನಿಝಾಮ್ ಹಳೆಯ ಎಂಒ ಆಸಾಮಿಯಾಗಿದ್ದು, ಈ ಹಿಂದೆ ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್, ಉಪ್ಪಾರಪೇಟೆ, ಬಾಣಸವಾಡಿ ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿ ನಡೆದ ಸುಲಿಗೆ, ದ್ವಿಚಕ್ರವಾಹನ ಕಳವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಸಂಪಿಗೆಹಳ್ಳಿ ದ್ವಿಚಕ್ರ ವಾಹನ ಕಳವು ಪ್ರಕರಣದಲ್ಲಿ ಈತ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರ ಬಂದಿದ್ದಾನೆ.
ಎರಡನೇ ಆರೋಪಿ ಸಯ್ಯದ್ ಅಲಿ ಕೂಡ ಹಳೆಯ ಎಂಒ ಆಸಾಮಿಯಾಗಿದ್ದು, ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್, ಹೆಣ್ಣೂರು, ಕಬ್ಬನ್ ಪಾರ್ಕ್, ಜ್ಞಾನಭಾರತಿ, ಜೆ.ಸಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಕೊಲೆ, ಸುಲಿಗೆ, ಗಾಂಜಾ ಸೇವನೆ, ದ್ವಿಚಕ್ರ ವಾಹನ ಕಳವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಲಿಗೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದಿದ್ದಾನೆ. ಜೈಲಿನಿಂದ ಬಂದ ಬಳಿಕವೂ ಹಳೆಯ ಚಾಳಿಯನ್ನು ಮುಂದುವರಿಸಿದ್ದಾನೆ. ಆರೋಪಿಗಳು ಬೆಳಗಿನ ಮತ್ತು ಸಂಜೆ ವೇಳೆ ವಾಯುವಿಹಾರಕ್ಕೆ ಬರುವ ಒಂಟಿ ಮಹಿಳೆಯರನ್ನು ಗುರಿಯಾಗಿಸಿ ಮೊಬೈಲ್ ಸುಲಿಗೆ ಮಾಡುವುದು, ಮನೆಯ ಮುಂದೆ ನಿಲ್ಲಿಸುವ ದ್ವಿಚಕ್ರ ವಾಹನಗಳನ್ನು ಗಮನಿಸಿಕೊಂಡಿ ನಕಲಿ ಕೀ ಬಳಸಿ, ಹ್ಯಾಂಡ್ ಲಾಕ್ ಮುರಿದು ಕಳವು ಮಾಡುತ್ತಿದ್ದುದಾಗಿ ವಿಚಾರಣೆಯ ವೇಳೆ ತಿಳಿದುಬಂದಿದೆ.