ಬೆಂಗಳೂರು,ಏ.23- ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಕ್ಕೆ ಒಂದು ದಿನ ಬಾಕಿ ಇರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಉತ್ತರ ಕರ್ನಾಟಕದ (North Karnataka) ಲೋಕಸಭಾ ಕ್ಷೇತ್ರಗಳತ್ತ ಗಮನ ನೆಟ್ಟಿದ್ದಾರೆ.
ಉತ್ತರ ಕರ್ನಾಟಕದ ಕಿತ್ತೂರು ಕರ್ನಾಟಕ ಪ್ರದೇಶ ಬಿಜೆಪಿಯ ಭತ್ರಕೋಟೆ ಎಂದೇ ಪರಿಗಣಿಸಲಾಗುತ್ತಿದೆ ಆದರೆ ಈ ಬಾರಿ ಈ ಕೋಟೆಯಲ್ಲಿ ಸ್ವಲ್ಪಮಟ್ಟಿಗೆ ಬಿರುಕ ಕಾಣಿಸಿಕೊಂಡಿದೆ ಎಂಬ ವರದಿಗಳ ಬೆನ್ನಲ್ಲೇ ಇದೀಗ ಈ ಕ್ಷೇತ್ರಗಳತ್ತ ಲಗ್ಗೆ ಹಾಕಲು ಪ್ರಧಾನಿ ಮೋದಿ ತೀರ್ಮಾನಿಸಿದ್ದಾರೆ.
ಬೃಹತ್ ಸಮಾವೇಶಗಳ ಮೂಲಕ ಕಿತ್ತೂರು ಕರ್ನಾಟಕದ ಆರು ಕ್ಷೇತ್ರಗಳನ್ನು ಮರಳಿ ಗೆಲ್ಲಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ. ಕಲ್ಯಾಣ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಭಾಗದಲ್ಲಿ ಎರಡು ದಿನಗಳ ಕಾಲ 12 ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿ ಭರ್ಜರಿ ಮತಬೇಟೆ ನಡೆಸಲಿದ್ದಾರೆ.
ಏಪ್ರಿಲ್ 28ರಂದು ದಾವಣಗೆರೆ, ಕಾರವಾರ, ಬೆಳಗಾವಿ ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ. ಅಂದು ಪ್ರಧಾನಿ ಮೋದಿ ಬೆಳಗಾವಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ಬಿಜೆಪಿಯ ಉನ್ನತ ಮೂಲಗಳು ಮತ್ತು ಪ್ರಧಾನಿ ಕಚೇರಿಯ ಮೂಲಗಳ ಪ್ರಕಾರ ಪ್ರಧಾನಿ ಅವರು ಬೆಳಗಾವಿಯ ವಿಟಿಯು ಗೆಸ್ಟ್ ಹೌಸ್, ಐಟಿಸಿ ವೆಲ್ಕಮ್, ಮೇರಿಯಟ್, ಯುಕೆ-27 ಯಾವುದಾದರು ಒಂದು ಹೊಟೇಲ್ ನಲ್ಲಿ ತಂಗಲಿದ್ದಾರೆ.
ಈ ಹೋಟೆಲ್‌ಗಳನ್ನು ಎಸ್ ಪಿಜಿ ತಂಡ ಪರಿಶೀಲನೆ ನಡೆಸಲಿದೆ .ಆ ಬಳಿಕ ವಾಸ್ತವ್ಯದ ಹೊಟೇಲ್ ನಿಗದಿಯಾಗಲಿದೆ. ಮರು ದಿನ ಎಪ್ರಿಲ್ 29 ರಂದು ವಿಜಯಪುರ, ಕೊಪ್ಪಳ ಹಾಗೂ ಕಲಬುರಗಿ ಬಿಜೆಪಿ ಅಭ್ಯರ್ಥಿಗಳ ಪರ ಮತ ಯಾಚಿಸಲಿದ್ದಾರೆ.
ಬಹುತೇಕ ಲಿಂಗಾಯಿತರ ಪ್ರಾಬಲ್ಯ ಹೊಂದಿರುವ ಈ ಕ್ಷೇತ್ರದಲ್ಲಿ ಬಿಜೆಪಿ 14 ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಇಟ್ಟುಕೊಂಡಿದೆ. ಹೀಗಾಗಿ ರಾಜ್ಯಕ್ಕೆ ಮೋದಿ ಅವರಿಂದ ಹೆಚ್ಚು ಸಾರ್ವಜನಿಕ ಸಭೆಗಳನ್ನು ನಡೆಸಲು ಉದ್ದೇಶಿಸಿದೆ.ದಾವಣಗೆರೆಯಿಂದ ಆರಂಭವಾಗುವ ಮೋದಿ ದಂಡಯಾತ್ರೆ ಬೆಳಗಾವಿ, ಕಲಬುರ್ಗಿ ಸೇರಿದಂತೆ ಆರು ಜಿಲ್ಲೆಗಳಲ್ಲಿ ನಡೆಯಲಿದೆ. ಎರಡು ಲೋಕಸಭೆ ಕ್ಷೇತ್ರಕ್ಕೆ ಒಂದರಂತೆ 6 ಬೃಹತ್ ಸಮಾವೇಶ ನಡೆಸಲಿದ್ದಾರೆ.
2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಈ ಭಾಗದ ಎಲ್ಲ ಸ್ಥಾನಗಳನ್ನು ಗೆದ್ದು ಬೀಗಿತ್ತು. ಈ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ಮೋದಿ ಅವರಿಂದಲೇ ಬೃಹತ್ ಸಮಾವೇಶಗಳನ್ನು ನಡೆಸಲು ಉದ್ದೇಶಿಸಿದೆ