ಬೆಂಗಳೂರು, ಜು.26:
ಏಕ ಬಳಕೆ ಪ್ಲಾಸ್ಟಿಕ್ ಪರಿಸರಕ್ಕೆ ಮಾರಕವಾಗಿದ್ದು, ಎಲ್ಲ ಜಿಲ್ಲೆಗಳಲ್ಲೂ ಮಾರ್ಷಲ್ ಗಳನ್ನು ಒಳಗೊಂಡ ಕಾರ್ಯಪಡೆ ರಚಿಸಿ ಏಕ ಬಳಕೆ ಪ್ಲಾಸ್ಟಿಕ್ ಮತ್ತು ಅದರ ಉತ್ಪನ್ನಗಳ ಮಾರಾಟ, ದಾಸ್ತಾನು ಮತ್ತು ಸಾಗಾಟಕ್ಕೆ ಸಂಪೂರ್ಣ ಕಡಿವಾಣ ಹಾಕುವಂತೆ ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಎಲ್ಲ ಜಿಲ್ಲಾ ಕೇಂದ್ರದಲ್ಲೂ ತಂಡ ರಚಿಸಿ, ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳಾದ ಕ್ಯಾರಿಬ್ಯಾಗ್, ಚಮಚ, ತಟ್ಟೆ, ಲೋಟ ಇತ್ಯಾದಿ ತಯಾರಿಸುವ ಘಟಕಗಳು, ಗೋದಾಮು ಮತ್ತು ಮಾರಾಟ ಮಳಿಗೆಗಳ ಮೇಲೆ ನಿಗಾ ಇಟ್ಟು, ದಾಳಿ ನಡೆಸಿ ಪ್ರಕರಣ ದಾಖಲಿಸುವಂತೆ ಸೂಚಿಸಿದರು.
ಏಕ ಬಳಕೆ ಪ್ಲಾಸ್ಟಿಕ್ ಮತ್ತು ಪ್ಲಾಸ್ಟಿಕ್ ಉತ್ಪನ್ನಗಳು ಹೊರ ರಾಜ್ಯಗಳಿಂದ ರಾಜ್ಯಕ್ಕೆ ಬರುವುದನ್ನು ನಿಯಂತ್ರಿಸಲು ಸಾರಿಗೆ, ಪೊಲೀಸ್, ವಾಣಿಜ್ಯ ತೆರಿಗೆ ಸೇರಿದಂತೆ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವಂತೆಯೂ ತಿಳಿಸಿದರು.
ಪರಿಸರ ಸ್ನೇಹಿ ಗಣಪತಿಗೆ ಉತ್ತೇಜನ:
ಗಣೇಶೋತ್ಸವಕ್ಕೆ ಇನ್ನು ಒಂದು ತಿಂಗಳಷ್ಟೇ ಬಾಕಿ ಇರುವ ಹಿನ್ನೆಲೆಯಲ್ಲಿ ಪಿಓಪಿ ಗಣೇಶಮೂರ್ತಿ ಪೂಜೆ ತ್ಯಜಿಸಲು ಮತ್ತು ಪರಿಸರ ಸ್ನೇಹಿ ಗಣಪತಿ ಮೂರ್ತಿಗಳ ಪೂಜೆಗೆ ಉತ್ತೇಜನ ನೀಡಲು ಸಾಮಾಜಿಕ ಜಾಲ ತಾಣ ಹಾಗೂ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸುವಂತೆ ಸೂಚಿಸಿದರು.
ಗಣಪತಿ ಹಬ್ಬದ ಸಂದರ್ಭದಲ್ಲೂ ರಾಜ್ಯದ ಕೆಲವೆಡೆ ಪಟಾಕಿ ಸಿಡಿಸುವ ಸಂಪ್ರದಾಯವಿದ್ದು, ಹಸಿರು ಪಟಾಕಿ ಮಾತ್ರ ಬಳಸುವಂತೆ ಹಾಗೂ ಪರಿಸರಕ್ಕೆ ಹಾನಿಯಾಗುವ ಭಾರಲೋಹಯುಕ್ತ ಪಟಾಕಿ ಬಳಸದಂತೆ ಜಾಗೃತಿ ಮೂಡಿಸಲು ಸೂಚಿಸಿದರು.
ತೀವ್ರ ಮಾಲಿನ್ಯ ಹರಡುವ ಕೈಗಾರಿಕೆ ವಿರುದ್ಧ ಕ್ರಮ:
ಟೈರ್ ಪೈರೋಲಿಸಿಸ್ ಸೇರಿದಂತೆ ಅತಿ ಹೆಚ್ಚು ಇಂಗಾಲ ಮತ್ತು ಇಂಗಾಲದ ಡೈಆಕ್ಸೈಡ್ ಹೊರಸೂಸುವ, ರಾಸಾಯನಿಕ ತ್ಯಾಜ್ಯ ಮತ್ತು ಬಳಸಿದ ತೈಲವನ್ನು ಕೊಳವೆ ಬಾವಿಗೆ ಸುರಿಯುವ, ರಾಸಾಯನಿಕ ಯುಕ್ತ ತ್ಯಾಜವನ್ನು ಜಲ ಮೂಲಗಳಿಗೆ ಸಂಸ್ಕರಿಸದೆ ಹರಿಸುವ ಕೈಗಾರಿಕಾ ಘಟಕಗಳ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸುವಂತೆಯೂ ಸೂಚಿಸಿದರು.
Previous ArticleYouth congress ಸದಸ್ಯತ್ವ ಬೇಕಾ..?
Next Article ಎರಡು ಜಡೆ ಹಾಕಿಲ್ಲ ಅಂದ್ರೆ ಹೀಗಾ ಮಾಡೋದು.?