ಭಾಲ್ಕಿ, ನ.30: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾದರಿಯಲ್ಲಿ ರಾಜ್ಯದ ಎಲ್ಲ ನಗರ, ಪಟ್ಟಣಗಳಲ್ಲಿನ ಕಟ್ಟಡಗಳಿಗೆ ಇ-ಖಾತೆ ವಿತರಣೆ ಹಾಗೂ ಕಂದಾಯ ಭೂಮಿಯಲ್ಲಿ ನಕ್ಷೆ ಮಂಜೂರಾತಿ ಇಲ್ಲದೆ ನಿರ್ಮಿಸಿರುವ ಕಟ್ಟಡಗಳಿಗೆ ತೆರಿಗೆ ವಿಧಿಸಲು ಸರ್ಕಾರ ಸಿದ್ದತೆ ನಡೆಸಿದೆ.
ಈ ಸಂಬಂಧ ಅಗತ್ಯವಿರುವ ನಿಯಮಗಳ ರಚನೆ, ಕಾನೂನು ಜಾರಿ ಕುರಿತಂತೆ ಅಧ್ಯಯನ ನಡೆಸಿ ವರದಿ ನೀಡಲು ರಚಿಸಿರುವ ಸಂಪುಟ ಉಪ ಸಮಿತಿ ಅಧ್ಯಕ್ಷ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಹಿರಿಯ ಐ.ಎ.ಎಸ್. ಅಧಿಕಾರಿ ಮುನೀಶ್ ಮೌದ್ಗಿಲ್ ಅವರೊಂದಿಗೆ ಪರಾಮರ್ಶೆ ನಡೆಸಿದರು.
ಬಿಬಿಎಂಪಿ ಕಾಯ್ದೆ 2020ರ ಕಲಂ 144(6) ಮತ್ತು (21)ರ ಅಂಶಗಳನ್ನು ರಾಜ್ಯದ ಇತರ ಮಹಾನಗರ ಪಾಲಿಕೆಗಳಿಗೆ /ನಗರ ಸ್ಥಳೀಯ ಸಂಸ್ಥೆಗಳಿಗೆ ಸಹ ವಿಸ್ತರಣೆ ಮಾಡುವ ಸಂಬಂಧ ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ 1976 ಹಾಗೂ ಕರ್ನಾಟಕ ಪುರಸಭೆ ಕಾಯ್ದೆ 1964ರಲ್ಲಿ ಅಳವಡಿಸಿಕೊಳ್ಳುವ ಕುರಿತ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸಿದರು.
ರಾಜ್ಯದ ಎಲ್ಲ ಸ್ಥಿರಾಸ್ತಿಗಳಿಗೆ ಇ-ಖಾತಾ ನೀಡುವ ನಿಟ್ಟಿನಲ್ಲಿ ಸಿದ್ಧವಾಗಿರುವ ತಂತ್ರಾಂಶದ ಬಗ್ಗೆಯೂ ಮಾಹಿತಿ ಪಡೆದ ಸಚಿವರು,ಪ್ರಸ್ತುತ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 54.91 ಲಕ್ಷಕ್ಕೂ ಹೆಚ್ಚು ಆಸ್ತಿಗಳಿದ್ದು, ಈ ಪೈಕಿ ಸುಮಾರು 20.55 ಲಕ್ಷ ಅಧಿಕೃತ ಆಸ್ತಿಗಳಾಗಿದ್ದು ತೆರಿಗೆ ಪಾವತಿಸುತ್ತಿದ್ದರೆ, ಅನಧಿಕೃತವಾದ 34.35ಲಕ್ಷಕ್ಕೂ ಅಧಿಕ ಆಸ್ತಿಗಳಿಗೆ ಯಾವುದೇ ತೆರಿಗೆ ವಿಧಿಸಲಾಗುತ್ತಿಲ್ಲ. ಹೀಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಂದಾಯ ಭೂಮಿಯಲ್ಲಿ ನಕ್ಷೆ ಅನುಮೋದನೆ ಇಲ್ಲದೆ ನಿರ್ಮಿಸಿರುವ ಬಡಾವಣೆ ಮತ್ತು ಕಟ್ಟಡಗಳಿಗೆ ಬಿ ಖಾತೆ ನೀಡಿ, ವಾರ್ಷಿಕ ಕಂದಾಯ ಕಟ್ಟಿಸಿಕೊಳ್ಳುತ್ತಿರುವ ರೀತಿಯಲ್ಲೇ ರಾಜ್ಯದ ಇತರ ನಗರ ಪಟ್ಟಣಗಳ ಸ್ವತ್ತುಗಳಿಗೆ ತೆರಿಗೆ ಮತ್ತು ದಂಡ ವಿಧಿಸುವ ಕುರಿತಂತೆ ಇರುವ ಕಾನೂನಾತ್ಮಕ ವಿಚಾರಗಳ ಬಗ್ಗೆಯೂ ಮಾಹಿತಿ ಪಡೆದರು.
ನಕ್ಷೆ ಮಂಜೂರಾತಿ ಇಲ್ಲದ ಕಟ್ಟಡಗಳು ಮತ್ತು ಅನುಮೋದನೆ ಇಲ್ಲದ ಬಡಾವಣೆಗಳಲ್ಲಿನ ವಸತಿಗಳಿಗೆ ನಗರ ಸ್ಥಳೀಯ ಸಂಸ್ಥೆಗಳ ವತಿಯಿಂದ ಕುಡಿಯುವ ನೀರು, ರಸ್ತೆ, ವಿದ್ಯುತ್, ಬೀದಿ ದೀಪಗಳ ಸೌಲಭ್ಯ ಕಲ್ಪಿಸಲಾಗಿದ್ದರೂ, ಅವರಿಂದ ಯಾವುದೇ ತೆರಿಗೆ ಬಾರದ ಹಿನ್ನೆಲೆಯಲ್ಲಿ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದ್ದು, ಶ್ರೀಸಾಮಾನ್ಯರಿಗೂ ಹೊರೆ ಆಗದ ರೀತಿಯಲ್ಲಿ ಪರಿಹಾರೋಪಾಯಗಳ ಕುರಿತಂತೆ ಸಮಾಲೋಚಿಸಿದರು.
ಯಾವುದೇ ಸ್ವತ್ತಿನ ಮಾರಾಟ ಮಾಡುವಾಗ ಕಾವೇರಿ ತಂತ್ರಾಂಶದಲ್ಲಿ ಖಾತೆ ಇಲ್ಲದೆ ವಹಿವಾಟು ಸಾಧ್ಯವಿಲ್ಲ. ಹೀಗಾಗಿ ಕಂದಾಯ ಭೂಮಿಯಲ್ಲಿ ಮನೆ ಕಟ್ಟಿರುವವರು, ನಿವೇಶನ ಹೊಂದಿರುವವರು ಅಕ್ರಮವಾಗಿ ಖಾತೆ ಪಡೆಯುತ್ತಿದ್ದು, ಇದು ಭ್ರಷ್ಟಾಚಾರಕ್ಕೆ ಆಸ್ಪದ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಸ್ವತ್ತುಗಳಿಗೂ ಬಿ ಖಾತೆಯ ರೀತಿಯಲ್ಲಿ ಹೇಗೆ ಖಾತೆ ನೀಡುವ ಸಾಧ್ಯತೆಗಳ ಕುರಿತಂತೆ ಚರ್ಚಿಸಿದರು.