ಬೆಂಗಳೂರು, ಜ.10- ದೇಶದ ಬಹುಸಂಖ್ಯಾತ ರಾಮಭಕ್ತರು ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಸಮಾರಂಭಕ್ಕೆ ಭರ್ಜರಿ ಸಿದ್ದತೆಗಳು ನಡೆದಿವೆ.
ಜೊತೆ ಜೊತೆಗೆ ಅಯೋಧ್ಯೆಗೆ ಭೇಟಿ ನೀಡುವುವರ ಸಂಖ್ಯೆ ಕೂಡ ಹೆಚ್ಚಿದೆ.ಮುಂಬರುವ ದಿನಗಳಲ್ಲಿ ಇದೊಂದು ಪವಿತ್ರ ಯಾತ್ರಾ ಸ್ಥಳವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಕರ್ನಾಟಕದಿಂದಲೂ ದೊಡ್ಡ ಪ್ರಮಾಣದಲ್ಲಿ ಭಕ್ತರು ಅಯೋಧ್ಯೆಗೆ ತೆರಳು ಇಚ್ಚಿಸಿದ್ದಾರೆ.
ರಾಜ್ಯದ ಇಂತಹ ಜನರ ಸೌಕರ್ಯಕ್ಕಾಗಿ ಅಯೋಧ್ಯೆಯಲ್ಲಿ ಯಾತ್ರಿ ನಿವಾಸ ಕಟ್ಡಲು ರಾಜ್ಯ ಸರ್ಕಾರ ಮುಂದಾಗಿದೆ. ಮುಜರಾಯಿ ಇಲಾಖೆಯ ಜವಾಬ್ದಾರಿ ಹೊತ್ತಿರುವ ಸಚಿವ ರಾಮಲಿಂಗಾರೆಡ್ಡಿ ಈ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದಾರೆ.
ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ನಿವಾಸ ಕಟ್ಟಲು ಅನುಮತಿ ನೀಡುವಂತೆ ಕರ್ನಾಟಕ ಮುಜರಾಯಿ ಇಲಾಖೆ ಉತ್ತರ ಪ್ರದೇಶದ ಯೋಗಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಇದರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಪತ್ರ ಬರೆದಿದ್ದು ಅದನ್ನು ತಮ್ಮ ಪತ್ರದೊಂದಿಗೆ ಲಗತ್ತಿಸಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ರವಾನಿಸಿದ್ದಾರೆ.
ಸರಯೂ ನದಿ ಸಮೀಪದಲ್ಲಿ ಅತಿಥಿ ಗೃಹ ನಿರ್ಮಿಸಲು ನಮ್ಮ ಸರ್ಕಾರ ಬಯಸಿದೆ ಇದಕ್ಕೆ ಬೇಕಾಗುವ ಸ್ಥಳ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. “ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಿಗಳು, ರಾಮಭಕ್ತರು ಅಯೋಧ್ಯೆಗೆ ಬರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಅವರಿಗೆ ವಸತಿ, ಊಟದ ವ್ಯವಸ್ಥೆಗಾಗಿ ಅತಿಥಿ ಗೃಹ ನಿರ್ಮಾಣ ಮಾಡಬೇಕಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
5 ಎಕರೆ ಜಾಗದಲ್ಲಿ 10 ಕೋಟಿ ವೆಚ್ಚದಲ್ಲಿ ರಾಜ್ಯದ ಭಕ್ತಾದಿಗಳ ಅನುಕೂಲಕ್ಕೆ ಮುಜರಾಯಿ ಇಲಾಖೆ ಅತಿಥಿ ಗೃಹ ನಿರ್ಮಾಣ ಮಾಡಲು ಸಿದ್ಧವಿದೆ ಅನುಮತಿ ನೀಡಿ ಎಂದು ಮನವಿಯಲ್ಲಿ ಕೇಳಿದ್ದಾರೆ.