ಬೆಂಗಳೂರು,ಡಿ.10- ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ವಿಜ್ಞಾನ ಕಲಿಕೆಗೆ ಪ್ರಯೋಗಾಲಯ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಆಡುಗೋಡಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಏರ್ಪಡಿಸಿದ್ದ ಅತ್ಯಾಧುನಿಕ ಖಗೋಳ ವಿಜ್ಞಾನ ಪ್ರಯೋಗಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ವಿಜ್ಞಾನ ಕಲಿಕೆಯ ಆಸಕ್ತಿ ಹೆಚ್ಚಿಸುವ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
ರಾಜ್ಯ ಸರ್ಕಾರ ಜೊತೆಗೆ ಸಂಘ ಸಂಸ್ಥೆಗಳು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವಿಜ್ಞಾನ ಕಲಿಕೆಗೆ ನೆರವಾಗುವ ಪ್ರಯೋಗಾಲಯ ಇನ್ನಿತರ ಸೌಲಭ್ಯಗಳನ್ನು ಒದಗಿಸಲು ಮುಂದಾಗಬೇಕು ಎಂದು ಹೇಳಿದರು.
ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಆರಂಭಗೊಂಡ ಅತ್ಯಾಧುನಿಕ ಖಗೋಳ ವಿಜ್ಞಾನ ಪ್ರಯೋಗಾಲಯದ
ಅತ್ಯಾಧುನಿಕ ಸೌಲಭ್ಯವು ವಿದ್ಯಾರ್ಥಿಗಳು, ಶಿಕ್ಷಕರಿಗೆ ಖಗೋಳಶಾಸ್ತ್ರದ ಅದ್ಭುತಗಳನ್ನು ಪರಿಶೀಲಿಸಲು ವಿಶಿಷ್ಟವಾದ ವೇದಿಕೆಯನ್ನು ಒದಗಿಸಲಿದೆ ಎಂದರು.
ಖಗೋಳಶಾಸ್ತ್ರ ಪ್ರಯೋಗಾಲಯವು ವಿದ್ಯಾರ್ಥಿಗಳಿಗೆ ಸಮಗ್ರ ಮತ್ತು ಸಮೃದ್ಧ ಕಲಿಕೆಯ ಅನುಭವವನ್ನು ಒದಗಿಸಲು ನೆರವಾಗಲಿದೆ,ಅವಕಾಶ ವಂಚಿತ ವಿಜ್ಞಾನ ಕಲಿಕೆಯ ವಿದ್ಯಾರ್ಥಿಗಳಿಗೆ ನೆರವಾಗಲಿದೆ ಎಂದು ಸಚಿವರು ತಿಳಿಸಿದರು.
ಕರ್ನಾಟಕ ಪಬ್ಲಿಕ್ ಸ್ಕೂಲ್ ನ 1 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪ್ರಯೋಗಾಲಯವು ಸಬಲೀಕರಣಗೊಳಿಸಲಿದೆ, ಸರ್ಕಾರಿ ಶಾಲೆಗಳ ಸಹಯೋಗದೊಂದಿಗೆ ಆಕಾಶ-ವೀಕ್ಷಣೆ ಅವಧಿಗಳನ್ನು ಸಹ ಒಳಗೊಂಡಿದೆ.ಶಿಕ್ಷಣವನ್ನು ಮುಂದುವರೆಸುವಲ್ಲಿ ಮತ್ತು ಅರ್ಥಪೂರ್ಣ ಪರಿಣಾಮವನ್ನು ಉಂಟುಮಾಡುವಲ್ಲಿ ಬ್ರಿಲಿಯೊದ ಅಂಗವಾದ ಎಸ್ ಟಿಇಎಂ ಲರ್ನಿಂಗ್ ಮತ್ತು ಬ್ರಿಂಗಿಂಗ್ ಸ್ಮೈಲ್ಸ್ ಫೌಂಡೇಶನ್ ನಡುವೆ ಪ್ರಮುಖ ಪಾತ್ರವನ್ನು ವಹಿಸುತ್ತಿರುವುದನ್ನು ಸಚಿವರು ಶ್ಲಾಘಿಸಿದರು.
ಪ್ರಯೋಗಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಭಾಗಿಯಾದ ಸಚಿವರು ದೇಶವು ಸರ್ವಾಂಗೀಣ ಅಭಿವೃದ್ಧಿ ಹೊಂದಲು ವಿಜ್ಞಾನದಲ್ಲಿನ ಪ್ರಗತಿ ಅತಿಮುಖ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬ್ರಲ್ಲಿಯೋ ಟೆಕ್ನಾಲಜೀಸ್ ಮುಖ್ಯಸ್ಥ ಅಭಿಷೇಕ್ ರಂಜನ್,ಎಸ್ ಟಿಇಎಂ ಲರ್ನಿಂಗ್ ನ ಸಂಸ್ಥಾಪಕ ಅಶುತೋಷ್ ಪಂಡಿತ್ ಭಾಗವಹಿಸಿದ್ದರು