ಬೆಂಗಳೂರು,ಮಾ.23- ಮುಂಬರುವ ವಿಧಾನಸಭೆ ಚುನಾವಣೆ ಯಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರ ಚುಕ್ಕಾಣಿ ಹಿಡಿಯಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್ ಇದಕ್ಕಾಗಿ ಉತ್ತರ ಕರ್ನಾಟಕದತ್ತ ಹೆಚ್ಚಿನ ಗಮನ ಹರಿಸಿದೆ.
ಈ ಪ್ರದೇಶದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಲು ಪ್ರಭಾವಿ ನಾಯಕರನ್ನು ತನ್ನತ್ತ ಸೆಳೆಯುವ ಪ್ರಯತ್ನ ನಡೆಸಿದೆ. ರಾಜಧಾನಿ ಬೆಂಗಳೂರು ಹೊರತುಪಡಿಸಿ ಅತಿ ಹೆಚ್ಚಿನ ವಿಧಾನಸಭೆ ಕ್ಷೇತ್ರಗಳಿರುವ ಬೆಳಗಾವಿಯಲ್ಲಿ ಹೆಚ್ಚಿನ ಸ್ಥಾನಗಳಿಸಬೇಕೆಂದು ಅಲ್ಲಿನ ಪ್ರಭಾವಿ ನಾಯಕರನ್ನು ಸೆಳೆಯಲು ತಂತ್ರ ರೂಪಿಸಿದೆ.
ಸದ್ಯ ಬಿಜೆಪಿ ನಾಯಕರ ಧೋರಣೆ ವಿರುದ್ಧ ಸಿಡಿದೆದ್ದಿರುವ ಮಾಜಿ ಮಂತ್ರಿ ದಿವಂಗತ ಉಮೇಶ್ ಕತ್ತಿ ಅವರ ಸೋದರ ಹಾಗೂ ಮಾಜಿ ಸಂಸದ ರಮೇಶ್ ಕತ್ತಿ ಮತ್ತು ಮಾಜಿ ಮಂತ್ರಿ ಶ್ರೀಮಂತ ಪಾಟೀಲ್ ಅವರನ್ನು ಸೆಳೆಯಲು ಪ್ರಯತ್ನ ನಡೆಸಿದೆ.
ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಈ ಆಪರೇಷನ್ ಹಸ್ತದ ನೇತೃತ್ವ ವಹಿಸಿದ್ದಾರೆ ಎನ್ನಲಾಗಿದೆ.
ಲೋಕಸಭಾ ಚುನಾವಣೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ರಮೇಶ್ ಕತ್ತಿ ವಿಧಾನಸಭೆ ಚುನಾವಣೆ ಸ್ಪರ್ಧಿಸಲು ಸಿದ್ದತೆ ನಡೆಸಿದ್ದರು ತಮ್ಮ ಸೋದರ ಉಮೇಶ್ ಕತ್ತಿ ನಿಧನದಿಂದ ತೆರವಾದ ಹುಕ್ಕೇರಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡುವಂತೆ ಬಿಜೆಪಿ ನಾಯಕರಿಗೆ ಮನವಿ ಮಾಡಿದ್ದರು.ಅದರೆ ಬಿಜೆಪಿ ನಾಯಕರು ಇಲ್ಲಿ ರಮೇಶ್ ಕತ್ತಿ ಅವರ ಬದಲಾಗಿ ಉಮೇಶ್ ಕತ್ತಿ ಅವರ ಮಗನಿಗೆ ಟಿಕೆಟ್ ನೀಡುವ ಸಾಧ್ಯತೆಯಿದೆ.
ಇದರಿಂದ ರಮೇಶ್ ಕತ್ತಿ ಬೇಸರಗೊಂಡಿದ್ದು ಅವರನ್ನು ಸಂಪರ್ಕಿಸಿರುವ ಪ್ರಕಾಶ್ ಹುಕ್ಕೇರಿ ತಾವು ಕಾಂಗ್ರೆಸ್ ಸೇರ್ಪಡೆಯಾದರೆ,ಹುಕ್ಕೇರಿ ಅಥವಾ ನಿಪ್ಪಾಣಿ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಲಾಗುವುದು ಎಂಬ ಭರವಸೆ ನೀಡಿದ್ದಾರೆ. ಅದೇ ರೀತಿ ಶ್ರೀಮಂತ ಪಾಟೀಲ್ ಅವರಿಗೂ ಆಹ್ವಾನ ನೀಡಿದ್ದು ಸದ್ಯದಲ್ಲೇ ಇವರು ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗಿದೆ
ಮತ್ತೊಂದೆಡೆ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಚಿಂಚನಸೂರು ಕಾಂಗ್ರೆಸ್ ಸೇರಿದ ಬೆನ್ನಲ್ಲೇ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕಾಂಗ್ರೆಸ್ ಸೇರಲು ಬಿಜೆಪಿಯ ಪ್ರಮುಖ ನಾಯಕರು ಸಿದ್ದರಾಗಿದ್ದಾರೆ ಎನ್ನಲಾಗಿದೆ.
ಇದರಲ್ಲಿ ಮಾಜಿ ಸಚಿವ ಹಾಗೂ ಹಿರಿಯ ನಾಯಕ
ಮಾಲಕರೆಡ್ಡಿ ಕಲಬುರಗಿಯ ಹಲವು ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ ಆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇವರ ಸೇರ್ಪಡೆಗೆ ಹಸಿರು ನಿಶಾನೆ ತೋರಿಲ್ಲ ವಯಸ್ಸು ಸೇರಿದಂತೆ ಹಲವು ಕಾರಣಗಳಿಂದ
ಇವರಿಗೆ ಈವರೆಗೂ ಕಾಂಗ್ರೆಸ್ ಬಾಗಿಲು ತೆರೆದಿಲ್ಲ. ಮಹತ್ವದ ಬೆಳವಣಿಗೆಯಲ್ಲಿ ಸಂಸದ ಉಮೇಶ್ ಜಾದವ್, ಅವರ ಪುತ್ರರಾಗಿರುವ ಅವಿನಾಶ್ ಜಾದವ್ ರೊಂದಿಗೆ ಕಾಂಗ್ರೆಸ್ ನಾಯಕರು ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.