ನವದೆಹಲಿ: ಕರ್ನಾಟಕದಲ್ಲಿ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಲಭ್ಯವಿರುವ ಎಲ್ಲಾ ಮಾರ್ಗಗಳನ್ನು ಹುಡುಕುತ್ತಿರುವ ಇಂಧನ ಸಚಿವ ಕೆ.ಜೆ.ಜಾರ್ಜ್ (KJ George) ತಮ್ಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಹಾಗೂ ಇತರೆ ಹಿರಿಯ ಅಧಿಕಾರಿಗಳೊಂದಿಗೆ ದೆಹಲಿಗೆ ತೆರಳಿ ಕಸರತ್ತು ನಡೆಸಿದರು.
ರಾಜ್ಯದ ಉನ್ನತ ಮಟ್ಟದ ನಿಯೋಗದೊಂದಿಗೆ ಕೇಂದ್ರ ನೀತಿ ಆಯೋಗದ ಉಪಾಧ್ಯಕ್ಷ ಸುಮನ್ ಕೆ.ಬೇರಿ ಅವರನ್ನು ಭೇಟಿ ಮಾಡಿ ರಾಜ್ಯದ ವಿದ್ಯುತ್ ಬಿಕ್ಕಟ್ಟಿನ ಬಗ್ಗೆ ವಿವರಿಸಿ ನೆರವು ಕೋರಿದರು.
ರಾಜ್ಯದಲ್ಲಿ ಈ ವರ್ಷ ದುರ್ಬಲ ಮುಂಗಾರು ಮತ್ತು ತೀವ್ರ ಮಳೆ ಕೊರತೆಯಿಂದಾಗಿ ವಿದ್ಯುತ್ ಬೇಡಿಕೆಯಲ್ಲಿ ಹಠಾತ್ ಏರಿಕೆ ಕಂಡುಬಂದಿದೆ. ಸರಾಸರಿಗಿಂತ ಕಡಿಮೆ ಮಳೆಯಿಂದಾಗಿ, ರಾಜ್ಯದ ವಿವಿಧ ಜಲಾಶಯಗಳ ಸುತ್ತಲೂ ಸ್ಥಾಪಿಸಿರುವ ಜಲವಿದ್ಯುತ್ ಸ್ಥಾವರಗಳು ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ ಎಂದು ಗಮನ ಸೆಳೆದರು.
‘ಸೌರ ಮತ್ತು ಪವನ ಶಕ್ತಿ ಸ್ಥಾವರಗಳು ಸಹ ರಾಜ್ಯದ ಅಗತ್ಯತೆಗೆ ಬೇಕಿರುವ ಸಾಕಷ್ಟು ವಿದ್ಯುತ್ ಉತ್ಪಾದಿಸುತ್ತಿಲ್ಲ.ಇದಕ್ಕೆ ಪ್ರತಿಯಾಗಿ ಗೃಹ,ವಾಣಿಜ್ಯ ಬಳಕೆ ಕೃಷಿ ಮತ್ತು ಕೈಗಾರಿಕೆ ವಲಯಗಳಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ.
ಈ ಬೇಡಿಕೆಯನ್ನು ಪೂರೈಸಲು ರಾಜ್ಯ ಸರ್ಕಾರ ತನ್ನ ವ್ಯಾಪ್ತಿಯಲ್ಲಿ ಎಲ್ಲಾ ಕ್ರಮ ಜರುಗಿಸಿದೆ.ಆದರೂ ಬೇಡಿಕೆಯಷ್ಟು ಪೂರೈಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ತಮ್ಮ ವ್ಯಾಪ್ತಿಯಲ್ಲಿ ಲಭ್ಯವಿರುವ ಮಾರ್ಗಗಳ ಮೂಲಕ ರಾಜ್ಯಕ್ಕೆ ಅಗತ್ಯವಿರುವ ವಿದ್ಯುತ್ ದೊರಕಿಸಿಕೊಡಲು ಪ್ರಯತ್ನ ಮಾಡಬೇಕು ಎಂದು ಮನವಿ ಸಲ್ಲಿಸಿದರು.
ಈ ವೇಳೆ ರಾಜ್ಯದ ಇಂಧನ ಇಲಾಖೆಯ ಅಧಿಕಾರಿಗಳು ನೀತಿ ಆಯೋಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರಾಜ್ಯದ ಪರಿಸ್ಥಿತಿ ವಿವರಿಸಿದರು.