ಕರ್ನೂಲ್/Kurnool (ಆಂಧ್ರಪ್ರದೇಶ), ಅ.25 – ನವರಾತ್ರಿ ಹಬ್ಬದಂದು ನಡೆಯುವ ದೇವರಗಟ್ಟು ಬನ್ನಿ ಉತ್ಸವದ ದಂಡ ಕಾಳಗದಲ್ಲಿ ಮೂವರು ಮೃತಪಟ್ಟಿದ್ದು, ನೂರಕ್ಕೂ ಅಧಿಕ ಮಂದಿ ಗಾಯಗೊಂಡಿರುವ ದಾರುಣ ಘಟನೆ ಜಿಲ್ಲೆಯಲ್ಲಿ ನಡೆದಿದೆ. ವಿಜಯದಶಮಿಯಂದು ಇಲ್ಲಿನ ದೇವರಗಟ್ಟು ಬೆಟ್ಟದಲ್ಲಿ ಪ್ರತಿವರ್ಷ ಬನ್ನಿ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಸಾವಿರಾರು ಜನರು ಈ ಬನ್ನಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಈ ಬಾರಿ ಲಕ್ಷಾಂತರ ಮಂದಿ ಬನ್ನಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಈ ಮೆರವಣಿಗೆಯಲ್ಲಿ ಉತ್ಸವ ಮೂರ್ತಿಯನ್ನು ಕೊಂಡೊಯ್ಯುವಾಗ ದಂಡ ಕಾಳಗ ನಡೆಸಿಕೊಂಡು ಬರಲಾಗುತ್ತಿದೆ.
ಈ ವೇಳೆ, ಮೆರವಣಿಯಲ್ಲಿ ಪಾಲ್ಗೊಳ್ಳುವ ನೂರಾರು ಜನರು ದಂಡ ಕಾಳಗದಲ್ಲಿ ಪಾಲ್ಗೊಳ್ಳುತ್ತಾರೆ. ಈ ಸಂದರ್ಭದಲ್ಲಿ ಮೂವರು ಸಾವನ್ನಪ್ಪಿದ್ದು, ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಇಲ್ಲಿನ ದೇವರಗಟ್ಟು ಬೆಟ್ಟದಲ್ಲಿ ನಿನ್ನೆ ಮಲ್ಲಮ್ಮ ಮತ್ತು ಮಲ್ಲೇಶ್ವರ ಸ್ವಾಮಿ ದೇವರ ಜಾತ್ರಾ ಮಹೋತ್ಸವ ನಡೆಯಿತು. ರಾತ್ರಿ 12 ಗಂಟೆಗೆ ಮಲ್ಲಮ್ಮ ಮತ್ತು ಮಲ್ಲೇಶ್ವರ ಸ್ವಾಮಿಯ ಮದುವೆ ಸಮಾರಂಭ ನಡೆಯಿತು. ಬಳಿಕ ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳಾದ ಗುಡ್ಡ, ಪಡಿಯಗಟ್ಟು, ರಕ್ಷಪದ, ಸಮೀವೃಕ್ಷಂ, ನಖಿಬಸವಣ್ಣಗುಡಿ ಸೇರಿ ವಿವಿದೆಡೆ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಸಲಾಯಿತು. ಈ ವೇಳೆ, ಆರು ಗ್ರಾಮದ ಜನರು ಸೇರಿ ಒಂದು ಗುಂಪು ಮತ್ತು ಮೂರು ಗ್ರಾಮದ ಜನರು ಸೇರಿ ಮತ್ತೊಂದು ಗುಂಪು ಮಾಡಿ ಉತ್ಸವ ಮೂರ್ತಿ ಎದುರು ದಂಡ ಕಾಳಗ ನಡೆಸಿದರು. ಇದನ್ನು ಬನ್ನಿ ಉತ್ಸವ ಎಂದು ಕರೆಯಲಾಗುತ್ತದೆ.
ಲಕ್ಷಾಂತರ ಮಂದಿ ಭಾಗಿ :
ಮಲ್ಲಮ್ಮ ಮತ್ತು ಮಲ್ಲೇಶ್ವರ ಸ್ವಾಮಿ ಉತ್ಸವದಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದರು. ಮಲ್ಲಮ್ಮ ಮತ್ತು ಮಲ್ಲೇಶ್ವರ ಸ್ವಾಮಿ ಅಸುರರನ್ನು ಹತ್ಯೆ ಮಾಡಿದ ಬಳಿಕ ಈ ಉತ್ಸವನ್ನು ಆಚರಿಸಲಾಗುತ್ತದೆ. ದೇವರ ಮೆರವಣಿಗೆ ಸಂದರ್ಭ ನೆರಾನಿ, ನೆರಾನಿ ತಾಂಡಾ ಮತ್ತು ಕೊತ್ತಪೇಟ್ನ ಗ್ರಾಮಸ್ಥರು ಒಂದು ಗುಂಪು ಮಾಡಿ, ಆಲೂರು, ಸುಲುವಾಯಿ, ಇಲ್ಲಾರ್ತಿ, ಅರಿಕೇರಾ, ನಿದ್ರಾವಟ್ಟಿ, ಬಿಲೆಹಾಲ್ ಗ್ರಾಮಸ್ಥರು ಮತ್ತೊಂದು ಗುಂಪು ಮಾಡಿ ಉತ್ಸವ ಮೂರ್ತಿ ಎದುರು ಮುಖಾಮುಖಿಯಾದರು. ಬಳಿಕ ಮೆರವಣಿಗೆ ಸಂದರ್ಭ ಎರಡು ಗುಂಪುಗಳು ದಂಡ ಕಾಳಗ ನಡೆಸಿದರು. ಈ ವೇಳೆ, ಎರಡು ಗುಂಪಿನಲ್ಲಿನ ನೂರಾರು ಜನರಿಗೆ ಗಂಭೀರ ಗಾಯಗಳಾಗಿದೆ. ಈ ಉತ್ಸವವನ್ನು ನೋಡಲು ಆಂಧ್ರಪ್ರದೇಶ , ತೆಲಂಗಾಣ ಮಾತ್ರವಲ್ಲದೇ, ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಜನರು ಆಗಮಿಸಿದ್ದರು.
ಬಿಗಿ ಬಂದೋಬಸ್ತ್:
ಬನ್ನಿ ಉತ್ಸವದಲ್ಲಿ ದಂಡ ಕಾಳಗದ ವೇಳೆ ಉಂಟಾಗುವ ಹಿಂಸಾಚಾರವನ್ನು ತಡೆಯಲು ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಗ್ರಾಮದ ವಿವಿದೆಡೆ ಸಿಸಿಟಿವಿ ಕಣ್ಗಾವಲು ಇರಿಸಲಾಗಿತ್ತು. 1000ಕ್ಕೂ ಅಧಿಕ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ದಂಡ ಕಾಳಗವನ್ನು ನಡೆಸದಂತೆ ಇದಕ್ಕೂ ಮೊದಲು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗಿತ್ತು. ಆದರೂ ಗ್ರಾಮಸ್ಥರು ತನ್ನ ಸಂಪ್ರದಾಯವನ್ನು ಮುಂದುವರೆಸಿದ್ದಾರೆ. ಇದರಿಂದಾಗಿ ಮೂವರು ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.