ಬೆಂಗಳೂರು, ಮಾ.2- ಉದ್ಯಾನ ನಗರಿ ಬೆಂಗಳೂರಿನ ವೈಟ್ ಫೀಲ್ಡ್ ಸಮೀಪದ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟ ಪ್ರಕರಣಕ್ಕೂ ರಾಜ್ಯದ ಇತರೆಡೆ ಈ ಹಿಂದೆ ನಡೆದಿದ್ದ ಸ್ಫೋಟಗಳಿಗೆ ಇರುವ ಸಾಮ್ಯತೆಯ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಅದರಲ್ಲೂ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟಕ್ಕೆ ಇರುವ ಸಂಬಂಧವನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಪರಿಶೀಲನೆ ವೇಳೆ ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಬಳಸಿದ್ದ ಸ್ಫೋಟಕ ಸಾಮಗ್ರಿಗಳು ಹಾಗೂ ರಾಮೇಶ್ವರಂ ಕೆಫೆ (Rameshwaram Cafe) ಸ್ಫೋಟಕ್ಕೆ ಸಾಮ್ಯತೆ ಕಂಡುಬಂದಿದೆ.ಈ ಹಿನ್ನೆಲೆಯಲ್ಲಿ ತನಿಖೆಯನ್ನು ಈ ದಿಸೆಯಲ್ಲೂ ನಡೆಸಲಾಗುತ್ತಿದೆ
ಎರಡೂ ಕಡೆ ಸ್ಪೋಟ ನಡೆದ ಸಂದರ್ಭದಲ್ಲಿ ಹೊರ ಸೂಸಿರುವ ಹೊಗೆ ಒಂದೇ ಮಾದರಿಯಲ್ಲಿದೆ. ಎರಡೂ ಕಡೆ ಬ್ಯಾಟರಿ, ಡಿಟೋನೇಟರ್‌ಗಳು, ನಟ್ಟು, ಬೋಲ್ಟ್‌ಗಳನ್ನು ಸ್ಫೋಟಕ್ಕೆ ಬಳಸಲಾಗಿದೆ.
ಈ ಹಿನ್ನೆಲೆಯನ್ನು ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು, ಮಂಗಳೂರು ಸ್ಫೋಟದ ರೂವಾರಿ ಶಾರಿಕ್ ಹಾಗೂ ಸಂಗಡಿಗರನ್ನು ವಿಚಾರಣೆಗೆ ಮುಂದಾಗಿದ್ದಾರೆ.
ಸದ್ಯ ಶಾರಿಕ್ ಗ್ಯಾಂಗ್ ಪರಪ್ಪನ ಅಗ್ರಹಾರದಲ್ಲಿದ್ದು, ಅವರನ್ನೂ ಈ ಕುರಿತಂತೆ ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ.
ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಭಾಗಿಯಾದ ಆರೋಪಿಯ ಜಾಡು ಹಿಡಿದು ಹೊರಟ ರಾಜ್ಯ ಮತ್ತು ರಾಷ್ಟ್ರೀಯ ತನಿಖಾದಳದ ತಂಡ ರಾಮೇಶ್ವರಂ ಕೆಫೆಯ ಸಿಸಿಟಿವಿ ಜಾಡು ಹಿಡಿದು ತನಿಖೆ ನಡೆಸುತ್ತಿದೆ.
ಆರೋಪಿ ಕೆಫೆಯ ಒಳ ಪ್ರವೇಶ ಮಾಡಿ ಸುಮಾರು ಒಂದು ಗಂಟೆ ಕಾಲ ಒಳಗೆ ಓಡಾಡಿದ್ದಾನೆ. 11:15 ಗಂಟೆಗೆ ಒಳಗೆ ಪ್ರವೇಶ ಮಾಡಿದ ಆಯ 12:10ರ ಕೆಫೆಯ ತನಕ ಒಳಗಿರುವುದನ್ನು ಸಿಸಿ ಕ್ಯಾಮರಾ ದೃಶ್ಯ ಸಾಬೀತುಪಡಿಸಿದೆ.
ಆತ, ಸೈಡ್ ಬ್ಯಾಗ್ ಹಾಕಿಕೊಂಡು ಒಳಗೆ ಬಂದಿದ್ದು, ಬ್ಯಾಗ್ ಒಳಗೆ ಮತ್ತೊಂದು ಬ್ಯಾಗ್‌ನಲ್ಲಿ ಸ್ಫೋಟಕ ತಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜನರ ಕಣ್ಣಿಗೆ ಮತ್ತು ಸಿಸಿ ಕ್ಯಾಮರದಲ್ಲಿ ಸೆರೆಯಾಗದ ಜಾಗಕ್ಕಾಗಿ ಈತ ಹುಡುಕಾಟ ನಡೆಸಿದ್ದು, ಕೊನೆಗೆ ಕೈ ತೊಳೆಯುವ ಜಾಗದಲ್ಲಿದ್ದ ಡೆಸ್ಟ್ ಬಿನ್‌ನಲ್ಲಿ ಬ್ಯಾಗ್ ಬಿಸಾಡಿ ಪರಾರಿಯಾಗಿದ್ದಾನೆ.
ಹೋಗುವಾಗ ಮೊಬೈಲ್ ಕೈಯಲ್ಲಿ ಹಿಡಿದು ಪರಾರಿಯಾಗಿದ್ದಾನೆ. ಆರೋಪಿ ಬಳಿ ಮೊಬೈಲ್ ಇರುವುದು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಸದ್ಯ ಆರೋಪಿ ಬಳಿ ಇರುವ ಮೊಬೈಲ್ ಜಾಡು ಹಿಡಿದು ಹೊರಟಿರುವ ಪೊಲೀಸರು ಟವರ್ ಡಂಪ್ ಮಾಡಿ ಮೊಬೈಲ್ ಡಿಟೈಲ್ಸ್ ಕಲೆ ಹಾಕಿ ಆರೋಪಿಗೆ ಬಲೆ ಬೀಸಿದ್ದಾರೆ.
ಸ್ಪೋಟದ ಹಿಂದೆ ಒಂದು ತಂಡವೇ ಇರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಸ್ಪೋಟಕ ತಯಾರು ಮಾಡುವುದು ಹಾಗೂ ಅದಕ್ಕೆ ಬೇಕಾಗಿರುವ ವಸ್ತುಗಳನ್ನು ಪಡೆಯಲು ವ್ಯವಸ್ಥಿತ ಸಂಚು ನಡೆದಿರಬಹುದು ಎಂಬ ಅಂಶ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ ಈ ತಂಡದಲ್ಲಿ ವೆಲ್ ಟ್ರೈನ್ಡ್ ಆರೋಪಿಗಳು ಭಾಗಿಯಾಗಿರುವ ಶಂಕೆ ಮೂಡಿದೆ.ಈ ಬಾಂಬನ್ನು ಸ್ಥಳೀಯವಾಗಿ ಸಿಗುವ ಕಚ್ಚಾ ವಸ್ತುಗಳನ್ನ ಬಳಸಿ ಸಿದ್ಧಪಡಿಸಲಾಗುತ್ತದೆ. ಮೊಳೆಗಳು, ಗಾಜಿನ ಚೂರು, ಗನ್ ಪೌಡರ್ ಅಥವಾ ಬೆಂಕಿ ಕಡ್ಡಿಯ ಮದ್ದುಗಳನ್ನೂ ಬಳಸಿ ಇವನ್ನು ತಯಾರಿಸಬಹುದು.
ಪ್ರೆಷರ್ ಆಗುವಂತೆ ಡಿವೈಸ್‌ನ್ನು ಸೃಷ್ಟಿಸಿ ಸ್ಫೋಟಿಸಬಹುದು. ಇದು ಎಷ್ಟು ಕಚ್ಚಾ ವಸ್ತುಗಳನ್ನು ಹಾಕಬಹುದೋ ಅಷ್ಟೂ ತೀವ್ರತೆಯನ್ನು ಪಡೆದುಕೊಳ್ಳುತ್ತದೆ.ಪ್ಲಾಸ್ಟಿಕ್ ಸ್ಪೋಟಕ ಕೂಡ ಬಳಸಿರುವ ಸಾಧ್ಯತೆ ಇದೆ. ಇದನ್ನ ಪುಟ್ಟಿ ಸ್ಫೋಟಕ ಎಂದು ಕರೆಯಲಾಗುತ್ತದೆ.
ಜಿಲೇಟಿನ್‌ಗಳನ್ನು ಬಳಸಿ ಈ ಪ್ಲಾಸ್ಟಿಕ್ ಎಕ್ಸ್‌ಪ್ಲೋಸಿವ್ ತಯಾರಿಕೆ ಮಾಡಲಾಗುತ್ತದೆ. ಈ ಸಾಧನವನ್ನು ಯಾವುದೇ ಮೆಟಲ್ ಡಿಟೆಕ್ಟರ್ ಕಂಡು ಹಿಡಿಯುವುದಿಲ್ಲ. ಇದನ್ನ ಎಲ್ಲಿ ಬೇಕಾದರೂ ಭದ್ರತಾ ಸಿಬ್ಬಂದಿಗಳ ಕಣ್ಣು ತಪ್ಪಿಸಿ ತೆಗೆದುಕೊಂಡು ಹೋಗಬಹುದು ಎನ್ನಲಾಗಿದೆ.
ಆದರೆ ಸ್ಲೀಪರ್ ಸೆಲ್‌ಗಳಿಲ್ಲದೆ ಬಾಂಬ್ ತಯಾರು ಸುಲಭವಲ್ಲ. ಕಚ್ಚಾ ವಸ್ತುಗಳಿಗೆ ಸ್ಲೀಪರ್ ಸೆಲ್‌ಗಳ ಅವಶ್ಯಕತೆ ಇದೆ. ಸ್ಲೀಪರ್ ಸೆಲ್‌ಗಳು ಸಪ್ಲೈ ಮಾಡುವ ಬಿಡಿ ಬಿಡಿ ವಸ್ತುಗಳಿಂದಲೇ ಬಾಂಬ್ ತಯಾರಿಕೆ ನಡೆದಿದೆ ಎನ್ನಲಾಗಿದೆ.
