ಬೆಂಗಳೂರು,ನ.10- ರಾಜ್ಯದ ವಿವಿಧ ನಿಗಮ ಮತ್ತು ಮಂಡಳಿಗಳಲ್ಲಿ ಖಾಲಿ ಇದ್ದ ಹಲವು ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷೆಯಲ್ಲಿ ಅಕ್ರಮಕ್ಕೆ ಸಹಕರಿಸಿದ ಪ್ರಮುಖ ಆರೋಪಿ ರುದ್ರಗೌಡ ಪಾಟೀಲ್ (RD Patil) ಅಲಿಯಾಸ್ ಆರ್.ಡಿ.ಪಾಟೀಲ್ ಪೊಲೀಸ್ ಬಲೆಗೆ ಬಿದ್ದಿದ್ದಾನೆ.
ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಸಿನಿಮೀಯ ರೀತಿಯಲ್ಲಿ ಆರ್.ಡಿ.ಪಾಟೀಲ್ ಪರಾರಿಯಾಗಿದ್ದ.ಈ ಘಟನೆ ರಾಜಕೀಯ ತಿರುವು ಪಡೆದುಕೊಂಡಿತ್ತು.
ಕಳೆದ 12 ದಿನದಿಂದ ತಲೆಮರೆಸಿಕೊಂಡಿದ್ದ ಆರ್.ಡಿ. ಪಾಟೀಲ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಗೆ ಅರ್ಜಿಸಲ್ಲಿಸಿದ್ದ.ಇದರ ನಡುವೆ ಈತನ ಬಂಧನಕ್ಕೆ ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು ಅವರು ಡಿವೈಎಸ್ಪಿ ನೇತೃತ್ವದಲ್ಲಿ ಹಲವು ತಂಡಗಳನ್ನು ರಚಿಸಿದ್ದರು.
ಈ ತಂಡಗಳು ಹಲವು ಆಯಾಮದಲ್ಲಿ ತನಿಖೆ ಕೈಗೆತ್ತಿಕೊಂಡಿದ್ದವು. ಕಲಬುರಗಿಯಲ್ಲಿ ಆತನಿಗೆ ರಕ್ಷಣೆ ನೀಡಿದ ಆರೋಪದಡಿ ವರದಾ ಲೇಔಟ್ನಲ್ಲಿರುವ ಮಹಾಲಕ್ಷ್ಮಿ ಅಪಾರ್ಟಮೆಂಟ್ ಮಾಲೀಕ ಮತ್ತು ಮ್ಯಾನೇಜರ್ನನ್ನು ಬಂಧಿಸಿದ್ದರು ಇವರು ನೀಡಿದ ಮಾಹಿತಿ ಆಧರಿಸಿ ತನಿಖೆ ನಡೆಸಿದ ಎಸಿಪಿ ಭೂತೇಗೌಡ ನೇತೃತ್ವದ ಪೊಲೀಸರ ತಂಡ ಅಕ್ಕಲಕೋಟೆಯ ಸಮೀಪ ಆರ್.ಡಿ.ಪಾಟೀಲ್ ನನ್ನ ವಶಕ್ಕೆ ಪಡೆದಿದೆ.
ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಿಂದ ಕಲಬುರಗಿಗೆ ಬರುತ್ತಿರುವ ವೇಳೆ ಬಲೆ ಬೀಸಿದ ಪೊಲೀಸರು ಬಂಧಿಸಿದರು. ಆರೋಪಿ ಸಂಬಂಧಿಕರ ಮನೆಯಿಂದ ಕಲಬುರಗಿಯ ನ್ಯಾಯಾಲಯಕ್ಕೆ ಶರಣಾಗಲು ಬರುತ್ತಿದ್ದ ಎನ್ನಲಾಗುತ್ತಿದೆ.
ಪರೀಕ್ಷಾ ಅಕ್ರಮ ನಡೆದ ದಿನದಿಂದಲೇ ಆರೋಪಿ ಪಾಟೀಲ ಪರಾರಿಯಾಗಿದ್ದ. ನಾಲ್ಕು ದಿನಗಳ ಹಿಂದೆ ಕಲಬುರಗಿಯ ಅಪಾರ್ಟ್‌ಮೆಂಟ್‌ನ ಪ್ಲ್ಯಾಟ್‌ನಲ್ಲಿ ತಂಗಿದ್ದ ವೇಳೆ ಅಫಜಲಪುರ ಪೊಲೀಸರು ಬಂಧಿಸಲು ತೆರಳುತ್ತಿದ್ದ ಮಾಹಿತಿ ಪಡೆದು ಅಲ್ಲಿಂದ ಪರಾರಿಯಾಗಿದ್ದ.