ಹೊಸ ಪೀಳಿಗೆಗೆ ಅವಕಾಶ ನೀಡಬೇಕು, ಪಕ್ಷದಲ್ಲಿ ಹೊಸ ನಾಯಕತ್ವ ಬೆಳೆಸಬೇಕು ಎಂಬುದು ಬಿಜೆಪಿ ಪಕ್ಷದ ತೀರ್ಮಾನ. ಅದೇ ಸರಣಿಯಲ್ಲಿ ಶೆಟ್ಟರ್ ಸೇರಿದಂತೆ ಅವರಿಗೆ ಪಕ್ಷ ಟಿಕೆಟ್ ನೀಡಿಲ್ಲ ..
ಇದು ಸದ್ಯ ಬಿಜೆಪಿಯಲ್ಲಿ ನಡೆದಿರುವ ವಿದ್ಯಮಾನಗಳು.
ಚುನಾವಣೆಗೆ ಸ್ಪರ್ಧಿಸಲು ಇಚ್ಛೆ ಇರುವ ಹಲವರಿಗೆ ವಯಸ್ಸು ಸೇರಿದಂತೆ ಅನೇಕ ಕಾರಣಗಳನ್ನು ನೀಡಿ ಟಿಕೆಟ್ ನಿರಾಕರಿಸಲಾಗಿದೆ. ಇದೇ ಮಾನದಂಡವನ್ನೇ ಆಧಾರವಾಗಿಟ್ಟುಕೊಂಡು ಹೇಳುವುದಾದರೆ ಶಿರಸಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಚಿತ್ರದುರ್ಗದ ತಿಪ್ಪಾರೆಡ್ಡಿ ಮುಧೋಳದ ಗೋವಿಂದ ಕಾರಜೋಳ ಸೇರಿದಂತೆ ಹಲವರಿಗೆ ಟಿಕೆಟ್ ನೀಡಿರುವುದು ಯಾವ ಸಮಜಾಯಿಸಿ ಎಂದು ಕೇಳಬಹುದು.
ವಾಸ್ತವವಾಗಿ ಇದಾವುದು ಸಮರ್ಥನೆ ಅಥವಾ ಕಾರಣ ಅಲ್ಲ .ಅಸಲಿ ಸಂಗತಿಯೇ ಬೇರೆ ಇದೆ.
ರಾಜ್ಯ ಬಿಜೆಪಿಯಲ್ಲಿ ಇತ್ತೀಚೆಗೆ ಮೂಲಗುಂಪಾಗುತ್ತಿರುವ ನಾಯಕರ ಪಟ್ಟಿಯನ್ನು ಒಮ್ಮೆ ನೋಡಬೇಕು ಜಗದೀಶ್ ಶೆಟ್ಟರ್(Jagadish Shettar), ಈಶ್ವರಪ್ಪ ,ಅರವಿಂದ ಲಿಂಬಾವಳಿ, ಕೆ ರಾಮದಾಸ್, ರಘುನಾಥ್ ಮಲ್ಕಾಪುರೆ ,ಡಾ.ವಾಮನಾಚಾರ್ಯ, ತೇಜಸ್ವಿನಿ ಅನಂತಕುಮಾರ್ ಹೀಗೆ ಪಟ್ಟಿ ಬೆಳೆಯುತ್ತಾ ಸಾಗುತ್ತದೆ .ವಿಶೇಷವೆಂದರೆ ಇವರೆಲ್ಲರೂ ಒಂದು ಕಾಲದಲ್ಲಿ ಮಾಜಿ ಸಚಿವ ದಿವಂಗತ ಅನಂತ್ ಕುಮಾರ್ ಅವರ ಎಡ ಬಲದಲ್ಲಿ ಕಾಣಿಸಿಕೊಳ್ಳುವ ಮೂಲಕ ರಾಜ್ಯ ಬಿಜೆಪಿಯಲ್ಲಿ ಅತ್ಯಂತ ಉನ್ನತ ಹುದ್ದೆಗಳನ್ನು ಅಲಂಕರಿಸಿ ಟಿಕೆಟ್ ನೀಡುವ ಜಾಗದಲ್ಲಿ ಇದ್ದವರು.
ಆದರೆ,ಈಗ ಇವರೆಲ್ಲರೂ ಟಿಕೆಟ್ ಮತ್ತು ಪಕ್ಷದಲ್ಲಿ ಉನ್ನತ ಹುದ್ದೆ ಗಾಗಿ ಅಂಗಲಾಚಿ ಅದು ಸಿಗದೇ ಅನಿವಾರ್ಯವಾಗಿ ಹೊರ ತಳ್ಳಲ್ಪಟ್ಟವರು.
ಒಂದು ಕಾಲದಲ್ಲಿ ಪಕ್ಷಕ್ಕಾಗಿ ತಮ್ಮ ತನು, ಮನ,ಧನವನ್ನು ಅರ್ಪಿಸಿ ಪಕ್ಷ ಸಂಘಟನೆಗಾಗಿ ಶ್ರಮಿಸಿದವರನ್ನು ನಿಷ್ಕಾರುಣ್ಯವಾಗಿ ಪಕ್ಷದಿಂದ ಹೊರಹಾಕಲಾಗಿದೆ .
ತತ್ವ, ಸಿದ್ಧಾಂತ ಸೇರಿದಂತೆ ಹಲವು ಕಾರಣದಿಂದ ಪಕ್ಷಕ್ಕೆ ಕಟ್ಟುಬಿದ್ದಿರುವ ಈ ನಾಯಕರು ತಮಗಾದ ಅನುಭವವನ್ನು ಬಹಿರಂಗವಾಗಿ ಹೇಳಿಕೊಳ್ಳಲು ಆಗದೆ, ಇತರೆ ಪಕ್ಷದಲ್ಲಿ ಗುರುತಿಸಿಕೊಳ್ಳಲು ಆಗದೆ ,ಸಂಕಟ ಪಡುತ್ತಿದ್ದಾರೆ.
ಇದಕ್ಕೆ ಅಸಲಿ ಕಾರಣ ಏನು ಎಂಬುದನ್ನು ತಿಳಿಯಬೇಕಾದರೆ ಸ್ವಲ್ಪ ಹಿಂದೆ ಹೋಗಬೇಕಾಗುತ್ತದೆ ರಾಜ್ಯದಲ್ಲಿ ಬಿಜೆಪಿ ಎಂದರೆ ಯಡಿಯೂರಪ್ಪ, ಆನಂತಕುಮಾರ್, ಈಶ್ವರಪ್ಪ ,ಶೆಟ್ಟರ್ ಹೀಗೆ ಪಟ್ಟಿ ಸಾಗುತ್ತಿತ್ತು ಯಡಿಯೂರಪ್ಪ ಮತ್ತು ಅನಂತಕುಮಾರ್ ಜೊತೆ ಜೊತೆಯಾಗಿ ಪಕ್ಷವನ್ನು ಕಟ್ಟಿ ಬೆಳೆಸಿದರು. ಅಧಿಕಾರದ ಹಂಚಿಕೆಯ ವಿಷಯಕ್ಕೆ ಬಂದಾಗ ಹಿಂದಿ, ಇಂಗ್ಲಿಷ್ ಬಲ್ಲ ಅನಂತಕುಮಾರ್ ರಾಷ್ಟ್ರ ರಾಜಕಾರಣಕ್ಕೆ ವರ್ಗಾವಣೆಯಾದರೆ, ಯಡಿಯೂರಪ್ಪ ಭಾಷೆಯ ಕಾರಣಕ್ಕೆ ರಾಜ್ಯ ರಾಜಕಾರಣಕ್ಕೆ ಸೀಮಿತವಾದರು.
ರಾಜ್ಯದೆಲ್ಲೆಡೆ ಪ್ರವಾಸ ಹೋರಾಟ ಸಭೆ ಮೊದಲಾದ ಕ್ರಮಗಳಿಂದ ಕ್ರಮಗಳ ಮೂಲಕ ಶ್ರಮಿಸಿ, ಬಿಜೆಪಿಯನ್ನು ಸುಭದ್ರವಾಗಿ ಕಟ್ಟಿದ ಯಡಿಯೂರಪ್ಪ ಭಾಷೆಯ ಕಾರಣಕ್ಕೆ ರಾಜ್ಯಕ್ಕೆ ಸೀಮಿತವಾದರು.
ಭಾಷೆಯ ಕಾರಣಕ್ಕೆ ರಾಷ್ಟ್ರ ರಾಜಕಾರಣದಲ್ಲಿ ಮಿಂಚಿ ಅಲ್ಲಿನ ಪಟ್ಟುಗಳನ್ನು ಕರಗತ ಮಾಡಿಕೊಂಡ ಅನಂತಕುಮಾರ್ ಸಂಸದರಾಗಿ ಕೇಂದ್ರ ಮಂತ್ರಿಯೂ ಆಗಿ, ರಾಜ್ಯದಲ್ಲಿ ಅಧಿಕಾರ ಅನುಭವಿಸಿದ ಮೊದಲ ಬಿಜೆಪಿಯ ನಾಯಕ ಎಂಬ ಕೀರ್ತಿಗಳಿಸಿದರು.
ಆನಂತರದಲ್ಲಿ ಈ ಅಧಿಕಾರದ ಕಾರಣಕ್ಕಾಗಿ ರಾಜ್ಯ ಬಿಜೆಪಿ ಅನಂತಕುಮಾರ್ ಬಣ ,ಮತ್ತು ಯಡಿಯೂರಪ್ಪ ಬಣ, ಎಂಬುದಾಗಿ ವಿಭಜನೆಯಾಗಿ, ಇತರೆ ನಾಯಕರು ಒಮ್ಮೆ ಆ ಕಡೆ ,ಮತ್ತೊಮ್ಮೆ ಈ ಕಡೆ ಗುರುತಿಸಿಕೊಳ್ಳುತ್ತಿದ್ದರು. ಇದು ಎಲ್ಲರಿಗೂ ಗೊತ್ತಿರುವ ವಿಷಯ.
ಇದನ್ನು ಹೊರತುಪಡಿಸಿ ಮತ್ತೊಂದು ಅಸಲಿ ಸಂಗತಿ ಇತ್ತು. ಅದು ಕೇಶವ ಶಿಲ್ಪ, ಕೇಶವ ಕೃಪಾ, ಮತ್ತು ಯಾದವ ಸ್ಮೃತಿಯ ಕಟ್ಟಡದಲ್ಲಿ ನಡೆಯುತ್ತಿದ್ದ ಆಂತರಿಕ ಕಲಹ .ಇದರ ಕೇಂದ್ರ ಬಿಂದು ಅನಂತಕುಮಾರ್ ಮತ್ತು ಸದ್ಯ ಪಕ್ಷದ ಉನ್ನತ ಹುದ್ದೆಯಲ್ಲಿರುವ ಬಿ.ಎಲ್.ಸಂತೋಷ್.
ಸಂಘ ಪರಿವಾರದ ಪೂರ್ಣಾವಧಿ ಕಾರ್ಯಕರ್ತರಾಗಿರುವ ಬಿ.ಎಲ್.ಸಂತೋಷ್ ಅವರಿಗೆ ರಾಜಕಾರಣ ಅತ್ಯಂತ ಇಷ್ಟವಾದ ಸಂಗತಿ. ಆದರೆ, ಅನಂತಕುಮಾರ್ ಬಿಜೆಪಿಯಲ್ಲಿ ಪ್ರಬಲವಾಗಿರುವಷ್ಟು ಕಾಲ ಇದಕ್ಕೆ ಅವಕಾಶವೇ ಇರಲಿಲ್ಲ ಎನ್ನುವುದು ಹೀಗೆ ಇಬ್ಬರನ್ನು ಬಲ್ಲ ಹಲವರಿಗೆ ಗೊತ್ತಿರುವ ಸಂಗತಿ.
ಬಿಜೆಪಿ ಮತ್ತು ಸಂಘ ಪರಿವಾರದಲ್ಲಿ ಅನಂತ್ ಕುಮಾರ್ ಅವರ ಪ್ರಬಲ ವಿರೋಧಿಯಾಗಿ ಸಂತೋಷ್ ಗುರುತಿಸಿಕೊಂಡಿದ್ದರು. ಅನಂತ ಕುಮಾರ್ ಕೇಂದ್ರ ನಗರಾಭಿವೃದ್ಧಿ ಸಚಿವರಾಗಿದ್ದ ವೇಳೆ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿ, ಸಂತೋಷ್ ಅವರು ದೀನ ದಯಾಳ್ ವಿಚಾರ ವೇದಿಕೆ ಮೂಲಕ ಬೆಂಗಳೂರಿನ ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದರು. ಇದರಲ್ಲಿ ಸದ್ಯ ಬಿಜೆಪಿಯ ಪ್ರಮುಖ ನಾಯಕರಾಗಿರುವ ಚಿಕ್ಕಪೇಟೆ ವಾರ್ಡ್ ನ ಮಾಜಿ ಪಾಲಿಕೆ ಸದಸ್ಯ ಶಿವಕುಮಾರ್ ಸೇರಿದಂತೆ ಅನೇಕ ಮಂದಿ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದು ವಿಶೇಷ.
ಬಿಜೆಪಿಯವರಿಂದಲೇ ಅಂದು ಬಿಜೆಪಿ ನಾಯಕರ ವಿರುದ್ಧ ನಡೆದಿದ್ದ ಪ್ರತಿಭಟನೆ ಮಾಧ್ಯಮಗಳಲ್ಲಿ ಅಂತಹ ದೊಡ್ಡ ಸುದ್ದಿ ಆಗದಿದ್ದರೂ ಬಿಜೆಪಿ ಮತ್ತು ಸಂಘಪರಿವಾರ ಪಾಳಯದಲ್ಲಿ ದೊಡ್ಡ ಸುದ್ದಿಯಾಗಿತ್ತು.
ಅಂದಿನ ಬಿಜೆಪಿಯಲ್ಲಿ ಅರವಿಂದ ಲಿಂಬಾವಳಿ ಅನಂತ್ ಕುಮಾರ್ ಅವರ ಬಲಗೈನಂತಿದ್ದು, ಪಕ್ಷದ ಸಂಘಟನಾ ಕಾರ್ಯದರ್ಶಿಯಾಗಿದ್ದರು. ಅದೇ ರೀತಿ ವಾಮನ ಆಚಾರ್ಯ ಕೂಡ.ಅಶೋಕ, ಶೆಟ್ಟರ್, ರಾಮದಾಸ್, ಈಶ್ವರಪ್ಪ ಹೀಗೆ ಸದ್ಯ ಮೂಲೆಗುಂಪಾಗಿರುವ ಹಲವರು ಅಂದು ಅನಂತ್ ಕುಮಾರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡು ಪಕ್ಷದಲ್ಲಿ ಪ್ರಭಾವಿಗಳಾಗಿದ್ದರು. ಹೀಗಾಗಿ ಸಂತೋಷ್ ಜಿ ಅವರು ಪಕ್ಷದಲ್ಲಿ ಪ್ರಾಬಲ್ಯ ಸಾಧಿಸಲು ಸಾಧ್ಯವಾಗಲಿಲ್ಲ. ಹಾಗೆಯೇ ,ಪರಿವಾರದಲ್ಲೂ ಕೂಡ ಅವರಿಗೆ ಅಂತಹ ಮಾನ್ಯತೆ ಸಿಗುತ್ತಿರಲಿಲ್ಲ.
ಅಂದು ಲೆಕ್ಕಾಚಾರ ಹಾಕಿ ಸಂತೋಷ್ ಅವರು ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡು ಅನಂತ್ ಕುಮಾರ್ ಕೋಟೆ ಭೇದಿಸಲು ತಂತ್ರ ರೂಪಿಸುತ್ತಲೇ ಇದ್ದರು.ಮತ್ತೊಂದು ಕಡೆ ಪ್ರಲ್ಹಾದ ಜೋಷಿ ಅನಂತ್ ಕುಮಾರ್ ಕಾರಣಕ್ಕಾಗಿ ಪಕ್ಷದಲ್ಲಿ ಪ್ರಾಬಲ್ಯಗಳಿಸಲು ಸಾಧ್ಯವಾಗಿರಲಿಲ್ಲ.
ಜೋಷಿ ಅವರು ಪಕ್ಷದಲ್ಲಿ ಅನಂತ್ ಕುಮಾರ್ ಅವರಷ್ಟೇ ಸಾಧನೆ ಮಾಡಿದ್ದರೂ,ಜಾತಿಯೂ ಸೇರಿ ಹಲವು ಕಾರಣದಿಂದ ಅನಂತ್ ಕುಮಾರ್ ಅವರ ಅವಕೃಪೆಗೆ ಒಳಗಾಗಿದ್ದರು.ಹೀಗಾಗಿ ಇವರೂ ಕೂಡ ಸಂತೋಷ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡು ಯಡಿಯೂರಪ್ಪ ಅವರ ಬಣ ಸೇರಿದರು.
ಬಿಜೆಪಿ ಮತ್ತು ಪರಿವಾರದಲ್ಲಿ ಅನಂತ್ ಕುಮಾರ್ ಕಟ್ಟಿದ್ದ ಈ ಕೋಟೆಯನ್ನು ಭೇದಿಸಲು ಬಹುಕಾಲ ಯಡಿಯೂರಪ್ಪ ಅವರಿಗೆ ಸಾಧ್ಯವಾಗಿರಲಿಲ್ಲ. ಹೀಗಿರುವಲ್ಲಿ ಯಡಿಯೂರಪ್ಪ, ಪಕ್ಷದ ಅಧ್ಯಕ್ಷರಾದರು. ಸಂಘ ಪರಿವಾರದ ಪ್ರಭಾವಿ ನಾಯಕ ಮೈ.ಚ. ಜಯದೇವ್ ಅವರ ನೆರವಿನೊಂದಿಗೆ ಅಂದು ಪಕ್ಷದ ಸಂಘಟನಾ ಕಾರ್ಯದರ್ಶಿಯಾಗಿದ್ದ ಅನಂತ್ ಕುಮಾರ್ ಅವರ ಆಪ್ತ ಡಾ.ವಾಮನಾಚಾರ್ಯ ಅವರನ್ನು ಬದಲಾಯಿಸಿ, ಆ ಹುದ್ದೆಗೆ ಸಂತೋಷ್ ಅವರನ್ನು ನೇಮಕವಾಗುವಂತೆ ಮಾಡುವಲ್ಲಿ ಯಶಸ್ವಿಯಾದರು.
ಇದಾದ ನಂತರ ರಾಜ್ಯ ಬಿಜೆಪಿಯ ಚಿತ್ರಣವೇ ಬದಲಾಯಿತು.ಪಕ್ಷದ ಸಂಘಟನೆಯ ಜವಾಬ್ದಾರಿ ಹೊತ್ತ ಸಂತೋಷ್ ಮಾಡಿದ ಮೊದಲ ಕೆಲಸ ಯಡಿಯೂರಪ್ಪ ಅವರ ವಿಶ್ವಾಸದೊಂದಿಗೆ ಬಿಜೆಪಿ ಕಚೇರಿ ಮತ್ತು ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಬೇರು ಬಿಟ್ಟಿದ್ದ ಎಂ.ಎಚ್. ಶ್ರೀಧರ್, ಎಸ್ ಪ್ರಕಾಶ್ ಮೊದಲಾದ ಅನಂತ್ ಕುಮಾರ್ ಬೆಂಬಲಿಗರನ್ನು ಕಚೇರಿಯಿಂದ ಗಂಟು ಮೂಟೆ ಕಟ್ಟುವಂತೆ ಮಾಡಿದ್ದು .ಈ ಮೂಲಕ ಪಕ್ಷದಲ್ಲಿ ಹಿಡಿತ ಸಾಧಿಸಿದ ಸಂತೋಷ್, ಹಂತ ಹಂತವಾಗಿ ರಾಜ್ಯ ಬಿಜೆಪಿಯಲ್ಲಿದ್ದ ಅನಂತಕುಮಾರ್ ಬೆಂಬಲಿಗರನ್ನು ಹೊರಗಟ್ಟುವಲ್ಲಿ ಯಶಸ್ವಿಯಾದರು ಬಳಿಕ ಯಡಿಯೂರಪ್ಪ ಕೂಡ ಸಂತೋಷ ಅವರ ವಿರೋಧಿ ಪಾಳಯದಲ್ಲಿ ಗುರುತಿಸಿಕೊಂಡಿದ್ದು ಇತಿಹಾಸ. ಆದರೆ ಸಂತೋಷ್ ಅವರಿಗೆ ಅನಂತ್ ಕುಮಾರ್ ಮೇಲಿದ್ದಷ್ಟು ದ್ವೇಷ ಯಡಿಯೂರಪ್ಪ ಅವರ ಮೇಲಿಲ್ಲ . ರಾಜಕೀಯ ತೀರ್ಮಾನಗಳ ಕಾರಣಕ್ಕಾಗಿ ಸಂತೋಷ್ ಮತ್ತು ಯಡಿಯೂರಪ್ಪ ಪರಸ್ಪರ ವಿರೋಧಿಗಳಾಗಿದ್ದಾರೆ ಎನ್ನುವುದನ್ನು ಬಿಟ್ಟರೆ ಇಲ್ಲಿ ದ್ವೇಷವಿಲ್ಲ. ಆದರೆ ಅನಂತ್ ಕುಮಾರ್ ಮತ್ತು ಸಂತೋಷ್ ನಡುವಿನ ಸಂಘರ್ಷ ಸಂಪೂರ್ಣ ದ್ವೇಷದಿಂದ ಕೂಡಿದೆ.
ಈ ದ್ವೇಷ ಅನಂತ್ ಕುಮಾರ್ ನಿಧನರಾದರೂ ನಿಂತಿಲ್ಲ. ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಪಕ್ಷ ನಿಷ್ಠೆ ಮತ್ತು ಸಿದ್ಧಾಂತ ವಿಷಯದಲ್ಲಿ ಮುಂಚೂಣಿಯಲ್ಲಿದ್ದಾರೆ ಆದರೆ ಅವರು ಅನಂತಕುಮಾರ್ ಅವರ ಪತ್ನಿ ಎಂಬ ಕಾರಣಕ್ಕಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಸಿಗಲಿಲ್ಲ ನಂತರದಲ್ಲೂ ಅವಕಾಶಗಳು ಸಿಗಲೇ ಇಲ್ಲ. ದಿವಂಗತ ಸುರೇಶ್ ಅಂಗಡಿ ಅವರ ಪತ್ನಿಗೆ ದೊರೆತ ಅನುಕಂಪ ತೇಜಸ್ವಿನಿ ಅವರಿಗೆ ಸಿಗಲಿಲ್ಲ .ಇದು ಇಲ್ಲಿಗೆ ಮುಕ್ತಾಯವಾಗಿಲ್ಲ. ಈಗ ಅನಂತ್ ಕುಮಾರ್ ಬಣದಲ್ಲಿ ಗುರುತಿಸಿಕೊಂಡಿದ್ದ ವಾಮನ ಆಚಾರ್ಯ ಅವರು ರಾಜಕೀಯವಾಗಿ ವಾನಪ್ರಸ್ಥ ಆಶ್ರಮ ಸೇರಿದರೆ ಇದೆ ಹಾದಿಯಲ್ಲೇ ಇದ್ದಾರೆ ಈಶ್ವರಪ್ಪ ,ಜಗದೀಶ್ ಶೆಟ್ಟರ್ ರಾಮದಾಸ್ ಸೇರಿದಂತೆ ಹಲವರು.
ಅನಂತ್ ಕುಮಾರ್ ಆಪ್ತ ವಲಯದ ಆರ್.ಅಶೋಕ ಮತ್ತು ವಿ.ಸೋಮಣ್ಣ ಅವರಿಗೆ ಎರಡು ಕಡೆ ವಿಧಾನಸಭೆ ಚುನಾವಣೆ ಸ್ಪರ್ಧಿಸಲು ನೀಡಿರುವ ಅವಕಾಶ ಕೂಡಾ ಒಳೇಟಿನ ರಾಜಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಇಂತಹ ರಾಜಕಾರಣ ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಕಾದು ನೋಡಬೇಕು.