ಬೆಂಗಳೂರು – ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯ ಸರ್ಕಾರ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ ನಿರ್ಧಾರವನ್ನು ವಾಪಸ್ ಪಡೆದಿದೆ.
ಸಂಪುಟ ಸಭೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆಯಿತು. ಅಡ್ವೋಕೇಟ್ ಜನರಲ್ ಅವರ ವರದಿಯನ್ನು ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ಸಭೆಯ ನಂತರ ಕಾನೂನು ಸಚಿವ ಎಚ್.ಕೆ.ಪಾಟೀಲ್ ಸುದ್ದಿಗಾರರಿಗೆ ತಿಳಿಸಿದರು.
ವಿಶೇಷವೆಂದರೆ ಪ್ರಕರಣದ ತನಿಖೆ ಈಗಾಗಲೇ ಶೇಕಡಾ 90 ರಷ್ಟು ಪೂರ್ಣಗೊಂಡಿದೆ ಎನ್ನುತ್ತವೆ ಸಿಬಿಐ ಮೂಲಗಳು.
ಅಕ್ರಮ ಆಸ್ತಿ ಗಳಿಕೆ ಆರೋಪದ ಕುರಿತಂತೆ ಶಿವಕುಮಾರ್ (DK Shivakumar) ವಿರುದ್ದ ಸಿಬಿಐ ತನಿಖೆಗೆ ಆದೇಶಿಸಿದ ಈ ಹಿಂದಿನ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ಅವಧಿಯಲ್ಲಿ ಹಲವು ತಾಂತ್ರಿಕ ಅಂಶಗಳ ಕೊರತೆ ಇದೆ. ಅಂದಿನ ಸರ್ಕಾರದ ಅಡ್ವೋಕೇಟ್ ಜನರಲ್ ಈ ಪ್ರಕರಣ ಸಿಬಿಐ ತನಿಖೆ ವಹಿಸುವ ಅಗತ್ಯವಿಲ್ಲ.ಸ್ಥಳೀಯ ಪೊಲೀಸರೇ ಇದನ್ನು ತನಿಖೆ ನಡೆಸಬಹುದಾಗಿದೆ ಎಂದು ವರದಿ ನೀಡಿದ್ದರು. ಆದರೆ ಈ ವರದಿ ಪರಿಗಣಿಸದೆ ಪ್ರಕರಣ ಸಿಬಿಐ ತನಿಖೆಗೆ ವಹಿಸುವ ನಿರ್ಧಾರ ಕೈಗೊಳ್ಳಲಾಗಿದೆ.ಈ ಆದೇಶ ಹೊರಡಿಸುವ ಪ್ರಕ್ರಿಯೆಯಲ್ಲೂ ದೋಷವಿದೆ ಎಂದು ಗೃಹ ಇಲಾಖೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಗೆ ಮಂಡಿಸಲಾಯಿತು. ಹಿತಾಸಕ್ತಿ ಸಂಘರ್ಷದ ಹಿನ್ನೆಲೆಯಲ್ಲಿ ಈ ಸಭೆಗೆ ಉಪ ಮುಖ್ಯಮಂತ್ರಿ ಶಿವಕುಮಾರ್ ಗೈರು ಹಾಜರಾಗಿದ್ದರು.
ಅವರ ಅನುಪಸ್ಥಿತಿಯಲ್ಲಿ ಸಭೆಗೆ ಹಾಜರಾದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಪ್ರಕರಣವನ್ನು ಸಿಬಿಐಗೆ ವಹಿಸುವಲ್ಲಿ ಹಿಂದಿನ ಸರ್ಕಾರ ಕೈಗೊಂಡ ತೀರ್ಮಾನದ ಲೋಹಗಳನ್ನು ಗಮನಕ್ಕೆ ತಂದರು. ಅಲ್ಲದೆ ಈ ಪ್ರಕರಣದಲ್ಲಿ ಶಿವಕುಮಾರ್ ಅವರನ್ನು ಬಂಧಿಸುವ ಮುನ್ನ ಸಭಾಧ್ಯಕ್ಷರ ಅನುಮತಿ ಪಡೆದಿಲ್ಲ ಎಂಬ ಮಾಹಿತಿಯನ್ನು ವಿವರಿಸಿದರು.
ಅಂತಿಮವಾಗಿ ಪ್ರಕರಣ ವಾಪಸ್ ಪಡೆಯುವ ತೀರ್ಮಾನಕ್ಕೆ ಬರಲಾಯಿತು ಎಂದು ಸಚಿವ ಎಚ್.ಕೆ.ಪಾಟೀಲ್ ವಿವರಿಸಿದರು.
ಹಿನ್ನೆಲೆ:
2013ರಿಂದ 2018ರ ಅವಧಿಯಲ್ಲಿ ನಿಗದಿತ ಆದಾಯಕ್ಕಿಂತಲೂ ಅಧಿಕ ಆಸ್ತಿ ಗಳಿಸಿದ ಆರೋಪ ಡಿ.ಕೆ. ಶಿವಕುಮಾರ್ ಮೇಲೆ ಇತ್ತು. ಈ ಪ್ರಕರಣವನ್ನು ಆಗಿನ ಸರ್ಕಾರ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ 2019ರಲ್ಲಿ ಸಿಬಿಐಗೆ ನೀಡಿತ್ತು. ಸಿಬಿಐಗೆ ಪ್ರಕರಣವನ್ನು ವಹಿಸಿದ್ದನ್ನು ಪ್ರಶ್ನೆ ಮಾಡಿದ್ದ ಡಿ.ಕೆ. ಶಿವಕುಮಾರ್ ಕೋರ್ಟ್ ಮೊರೆ ಹೋಗಿದ್ದರು. ಎಫ್ಐಆರ್ ಹಾಕದೇ ಕೇಂದ್ರೀಯ ತನಿಖಾ ತಂಡಕ್ಕೆ ನೀಡಿದ್ದು ಸರಿಯಲ್ಲ ಎಂದು ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದರು.
ಅಲ್ಲದೆ ಈ ಪ್ರಕರಣದಲ್ಲಿ ಸುಮಾರು ಐದು ತಿಂಗಳುಗಳ ಕಾಲ ಡಿ.ಕೆ. ಶಿವಕುಮಾರ್ ಜೈಲು ಪಾಲಾಗಿದ್ದರು. ಬಳಿಕ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿತ್ತು. ಕೊನೆಗೆ ಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು ಪಡೆಯಲಾಗಿತ್ತು. ಈ ನಡುವೆ ಹೈಕೋರ್ಟ್‌ನಲ್ಲಿ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಿ ಎಂದು ಸುಪ್ರೀಂ ಕೋರ್ಟ್ ಆದೇಶವನ್ನು ಹೊರಡಿಸಿತ್ತು. ಇಲ್ಲಿ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್‌ನ ಏಕ ಸದಸ್ಯ ಪೀಠ ಸಿಬಿಐ ವಿಚಾರಣೆಯನ್ನು ಎತ್ತಿ ಹಿಡಿದಿತ್ತು. ಹೀಗಾಗಿ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನೆ ಮಾಡಿದ ಡಿ.ಕೆ. ಶಿವಕುಮಾರ್ ದ್ವಿಸದಸ್ಯ ಪೀಠಕ್ಕೆ ಅಪೀಲು ಹೋಗಿದ್ದಾರೆ. ಈ ಅರ್ಜಿಯ ವಿಚಾರಣೆ ಇನ್ನೂ ನಡೆಯುತ್ತಿದೆ.